ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಟೀಕೆ ಮಾಡುವವರನ್ನು ಯಾರು ತಮ್ಮ ಜೊತೆಯಲ್ಲಿಟ್ಟುಕೊಳ್ಳುತ್ತಾರೋ ಅವರು ಮಾತ್ರ ಸಮಾಜಕ್ಕೆ ಮಾರ್ಗದರ್ಶಿಗಳಾಗಿ ಸಾಧಕರಾಗಬಲ್ಲರು ಎಂದು ಸಾಹಿತಿ ಹಾಗೂ ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ರಾಯಲ್ ಕಂಫರ್ಟ್ ಹೋಟೆಲ್ ಸಭಾಂಗಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಭಕ್ತರು, ಮುಖಂಡರು, ವಿವಿಧ ನಾಗರೀಕ ಸಂಘಟನೆಗಳ ಪ್ರಮುಖರು ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡರು ಶ್ರೀಮಠಕ್ಕೆ ಸಲ್ಲಿಸಿದ 50 ವರ್ಷಗಳ ಸಾರ್ಥಕ ಸೇವೆ ಗುರುತಿಸಿ ನೀಡಿದ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಆದಿಚುಂಚನಗಿರಿ ಮಠದ ಕಾರ್ಯ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ಕೀರ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳಿಗೆ ಸೇರಿದೆ. ಶ್ರೀಗಳ ಕಾರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಶ್ರೀಮಠದ ಯಶಸ್ಸಿಗೆ ತೆರೆಯ ಹಿಂದೆ ಡಾ.ಜೆ.ಎನ್.ರಾಮಕೃಷ್ಣೇಗೌಡ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.ನಾನು ಮತ್ತು ಜೆ.ಎನ್.ರಾಮಕೃಷ್ಣೇಗೌಡ ಸಹಪಾಠಿಗಳು. ಅವರು ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಬಾಲಗಂಗಾಧರನಾಥ ಶ್ರೀಗಳ ಸೇವಾ ಕೈಕರ್ಯಗಳಿಗೆ ಹೆಗಲುಕೊಟ್ಟರು. ಶ್ರೀಗಳನ್ನು ಕುರಿತ ಕಾಲಾತೀತ ಕೃತಿಗೆ ನಾನು ಸಂಪಾದಕನಾದಾಗ ಕೆಲವರು ನನ್ನ ವಿರುದ್ಧ ಹೇಳಿದ್ದರು. ಆಗ ಶ್ರೀಗಳು ಇತರರ ಮಾತಿಗೆ ಬೆಲೆಕೊಡದೆ ಯಾರು ಟೀಕೆ ಮಾಡುತ್ತಾರೋ ಅವರೇ ನಿಜವಾಗಿ ನಮ್ಮ ಯಶಸ್ಸನ್ನು ಬಯಸುವವರು ಎಂದು ಹೇಳಿದ್ದರಂತೆ ಎಂದರು.
ಇಂದು ಸಮಾಜ ಬದಲಾಗಿದೆ. ಸಾಧಕರನ್ನು ಮೆಚ್ಚಿ ಪ್ರೋತ್ಸಾಹಿಸುವವರ ಸಂಖ್ಯೆ ಕ್ಷೀಣಿಸಿದೆ. ಅಹಂಕಾರ ಮತ್ತು ಅಸೂಹೆಯಿಂದ ಸಮಾಜ ತುಂಬಿ ತುಳುಕುತ್ತಿದೆ. ಸಾಧಕರು ಕಾಲಾತೀತರು. ಅವರು ತಮ್ಮ ಬದುಕಿನ ಘಟ್ಟದಲ್ಲಿ ಮಾಡಿದ ಸಾಧನೆಗಳು ಕಾಲಾತೀತವಾಗಿ ಮಾನವ ಕುಲಕ್ಕೆ ಬೆಳಕಾಗಿ ಮುನ್ನಡೆಸುತ್ತವೆ ಎಂಬುದಕ್ಕೆ ಬಾಲಗಂಗಾಧರನಾಥ ಶ್ರೀಗಳು ಅತ್ಯುತ್ತಮ ನಿದರ್ಶನ ಎಂದರು.ಶ್ರೀಗಳ ಮಾನಸ ಪುತ್ರರೆಂದೇ ಬಿಂಬಿಸಲ್ಪಟ್ಟಿರುವ ರಾಮಕೃಷ್ಣೇಗೌಡರು ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾಗಿ ಮಠದ ಶಿಕ್ಷಣ ಸೇವೆಗಳನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ್ದಾರೆ. ಕೆ.ಆರ್.ಪೇಟೆ ಜನತೆ ನೀಡುತ್ತಿರುವ ಸಾಧಕ ರತ್ನ ಪ್ರಶಸ್ತಿ ಅವರಿಗೆ ಸಲ್ಲುತ್ತಿರುವುದು ಸಾರ್ಥಕವಾಗಿದೆ ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳು ರಚಿಸಿ ಹೊರತಂದಿರುವ ಚಿಣ್ಣರ ಶುಭಾಶಯಗಳ ಕುಂಛ ಮತ್ತು ಕನ್ನಡಿಗರಿಗೊಂದು ನುಡಿ ನಮನ ಕೃತಿಗಳನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಹಿರಿಯ ನಟಿ ವಿನಯ ಪ್ರಸಾದ್ ಬಿಡುಗಡೆ ಮಾಡಿದರು.ಸಮಾರಂಭದಲ್ಲಿ ಶಾಸಕ ಎಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಪುರಸಭಾ ಸದಸ್ಯರಾದ ಕೆ.ಬಿ.ಮಹೇಶ್, ಬಸ್ ಸಂತೋಷ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಬಿಜಿಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಬಿ.ನಂಜಪ್ಪ, ಎಸ್.ಸಿ.ವಿಜಯಕುಮಾರ್, ಕಸಾಪ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್ , ಪುರಸಭೆ ಮಾಜಿ ಸದಸ್ಯ ನೀಲಕಂಠ ಉಪಸ್ಥಿತರಿದ್ದರು.