ಬಾಲಕನ ಅಪಹರಿಸಿ ಹತ್ಯೆಗೈದವರಿಗೆ ಗುಂಡೇಟು

KannadaprabhaNewsNetwork |  
Published : Aug 02, 2025, 01:45 AM ISTUpdated : Aug 02, 2025, 07:14 AM IST
shoutout 1 | Kannada Prabha

ಸಾರಾಂಶ

ಹಣಕ್ಕಾಗಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರ ಪುತ್ರ ನಿಶ್ಚಿತ್‌ನನ್ನು ಅಪಹರಿಸಿ ಭೀಕರವಾಗಿ ಹತ್ಯೆಗೈದು ಸುಟ್ಟು ಹಾಕಿದ್ದ ಕಿರಾತಕರಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ

  ಬೆಂಗಳೂರು :  ಹಣಕ್ಕಾಗಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರ ಪುತ್ರ ನಿಶ್ಚಿತ್‌ನನ್ನು ಅಪಹರಿಸಿ ಭೀಕರವಾಗಿ ಹತ್ಯೆಗೈದು ಸುಟ್ಟು ಹಾಕಿದ್ದ ಕಿರಾತಕರಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ನೇಕಾರರ ಕಾಲೋನಿಯ ಗುರುಮೂರ್ತಿ ಹಾಗೂ ಗೋಪಾಲ ಕೃಷ್ಣ ಅಲಿಯಾಸ್ ಗೋಪಿ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬನಿಗೆ ಹುಡುಕಾಟ ನಡೆದಿದೆ.

ಎರಡು ದಿನಗಳ ಹಿಂದೆ ಉಪನ್ಯಾಸಕ ಜೆ.ಸಿ.ಅಚ್ಯುತ್‌ರ ಪುತ್ರ ನಿಶ್ಚಿತ್‌ (13) ನನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು. ಈ ಕೃತ್ಯ ಎಸಗಿದ ಆರೋಪಿತರು ಮೃತದೇಹ ದೊರೆತ ಬಿಲ್ವಾರದಹಳ್ಳಿಯ ದಟ್ಟಾರಣ್ಯ ಪ್ರದೇಶದಲ್ಲಿಯೇ ಅಡಗಿರುವುದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಹಂತಕರ ಬಂಧನಕ್ಕೆ ಮುಂದಾದ ತನಿಖಾ ತಂಡದ ಮೇಲೆ ಮಾರಕಾಸ್ತ್ರ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್ಸ್‌ಪೆಕ್ಟರ್ ಬಿ.ಕುಮಾರಸ್ವಾಮಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ ಅರವಿಂದ್ ಕುಮಾರ್ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೇಕಲ್ ತಾಲೂಕಿನ ಗೋಪಸಂದ್ರದ ಅಚ್ಯುತ್ ಕುಟುಂಬದ ಜತೆ ಅರೆಕೆರೆಯ ವಿಜಯಾ ಬ್ಯಾಂಕ್ ಕಾಲೋನಿಯಲ್ಲಿ ನೆಲೆಸಿದ್ದು, ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪುತ್ರ ನಿಶ್ಚಿತ್‌, ಜು.30ರಂದು ಅರೆಕೆರೆಯ 80 ಅಡಿ ರಸ್ತೆಯಲ್ಲಿ ಟ್ಯೂಷನ್‌ಗೆ ಹೋದವನು ಮನೆಗೆ ಮರಳದೆ ನಾಪತ್ತೆಯಾಗಿದ್ದ. ಈ ಬಗ್ಗೆ ಹುಳಿಮಾವು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಡ್ರೈವ್ ಆ್ಯಪ್‌ ಮೂಲಕ ಆರೋಪಿ ಪರಿಚಯ:

ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಗುರುಮೂರ್ತಿ, ಇತ್ತೀಚೆಗೆ ಕ್ಯಾಬ್ ಚಾಲಕನಾಗಿದ್ದ. 2 ತಿಂಗಳ ಹಿಂದೆ ಡ್ರೈವ್ ಆ್ಯಪ್‌ ಮೂಲಕ ಆತನಿಗೆ ಅಚ್ಯುತ್ ಪತ್ನಿ ಪರಿಚಯವಾಗಿತ್ತು. ಆಗ ಆಕೆಯ ವಿಶ್ವಾಸ ಗಳಿಸಿ, ನಾನು ವಿವರ್ಸ್ ಕಾಲೋನಿಯಲ್ಲೇ ನೆಲೆಸಿದ್ದು, ತಮಗೆ ಕಾರು ಅಗತ್ಯವಿದ್ದರೆ ನನಗೆ ನೇರವಾಗಿ ಕರೆ ಮಾಡಿ ಎಂದಿದ್ದ. ಈ ಮಾತಿಗೆ ಒಪ್ಪಿದ ಅಚ್ಯುತ್ ಪತ್ನಿ ಆತನಿಗೆ ಮೊಬೈಲ್ ಸಂಖ್ಯೆ ಕೊಟ್ಟಿದ್ದರು. ಬಳಿಕ ಎರಡ್ಮೂರು ಬಾರಿ ಪ್ರವಾಸಕ್ಕೆ ಅಚ್ಯುತ್ ದಂಪತಿ ಗುರುಮೂರ್ತಿಯನ್ನು ಚಾಲಕನನ್ನಾಗಿ ಕರೆದೊಯ್ದಿದ್ದರು. ಆಗ ನಿಶ್ಚಿತ್ ಪರಿಚಯವಾಗಿತ್ತು. ಇನ್ನು ಅಚ್ಯುತ್ ತಂದೆ ಗೋಪಾಲರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದು, ಅರೆಕೆರೆ ಸುತ್ತ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿದ್ದರು. ಕಾರಿನಲ್ಲಿ ಹೋಗುವಾಗ ಅಚ್ಯುತ್, ಇತ್ತೀಚೆಗೆ ಜಮೀನು ಮಾರಾಟದಿಂದ ₹2 ಕೋಟಿ ಬಂದಿರುವ ಬಗ್ಗೆ ಮಾತಾಡಿದ್ದರು. ಅಚ್ಯುತ್ ಕುಟುಂಬದ ಬಳಿ ಹಣವಿದೆ ಎಂದು ಅಂದಾಜಿಸಿದ್ದ ಗುರುಮೂರ್ತಿ, ಅಚ್ಯುತ್ ಅವರ ಪ್ರೀತಿಯ ಪುತ್ರನನ್ನು ಅಪಹರಿಸಿ ಹಣ ದೋಚಲು ಯೋಜಿಸಿದ್ದ. ಇದಕ್ಕೆ ಆತನ ಸ್ನೇಹಿತ ಸಾಥ್ ಕೊಟ್ಟಿದ್ದಾನೆ.

2 ಬಾರಿ ಗಾಳಿಯಲ್ಲಿ ಗುಂಡು:

ಆರೋಪಿಗಳನ್ನು ಬಂಧಿಸಲು ಬಿಲ್ವಾರದಹಳ್ಳಿ ರಸ್ತೆ ಬಳಿ ತೆರಳಿದಾಗ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಶರಣಾಗುವಂತೆ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್ಐ ಸೂಚಿಸಿದ್ದಾರೆ. ಈ ಮಾತಿಗೆ ಕ್ಯಾರೇ ಎನ್ನದೆ ಲಾಂಗು ಬೀಸಿದಾಗ ಆತ್ಮರಕ್ಷಣೆಗೆ ಗುರುಮೂರ್ತಿ ಎಡ ಮತ್ತು ಬಲಗಾಲಿಗೆ 2 ಸುತ್ತು ಗುಂಡು ಹೊಡೆದಿದ್ದಾರೆ. ಗಾಯಗೊಂಡ ಆರೋಪಿಗಳನ್ನು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾಗೆ ಸೇರಿಸಲಾಗಿದೆ.

ತಮಿಳು ವಿಕ್ರಮ್‌ ಸಿನಿಮಾ ನೋಡಿ ಅಪಹರಣ ಸಂಚು

ಕಳೆದ ವರ್ಷ ತೆರೆಕಂಡಿದ್ದ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ನಟನೆಯ ವಿಕ್ರಮ್‌ ಸಿನಿಮಾ ನೋಡಿ ನಿಶ್ಚಿತ್ ಅಪಹರಣಕ್ಕೆ ಸಂಚು ರೂಪಿಸಿದ್ದ ಗುರುಮೂರ್ತಿ ಚಾಕು ಹಾಗೂ ಜಾಕೆಟ್‌ ಅನ್ನು ಖರೀದಿಸಿದ್ದ. ಟ್ಯೂಷನ್‌ಗೆ ಬರುತ್ತಿದ್ದ ನಿಶ್ಚಿತ್‌ನನ್ನು ಆಗಾಗ್ಗೆ ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಹೊರಗೆ ಕರೆದೊಯ್ದು ವಿಶ್ವಾಸಗಳಿಸಿದ್ದ. ಅಂತೆಯೇ ಬುಧವಾರ ರಾತ್ರಿ 7 ಗಂಟೆಗೆ ಟ್ಯೂಷನ್‌ ಮುಗಿಸಿ ಮನೆಗೆ ಮರಳುತ್ತಿದ್ದ ನಿಶ್ಚಿತ್‌ನನ್ನು ಉದ್ಯಾನ ಬಳಿ ಗುರುಮೂರ್ತಿ ಅಡ್ಡಗಟ್ಟಿ, "ಬನ್ನೇರುಘಟ್ಟ ಬಳಿ ಒಳ್ಳೆಯ ಐಸ್‌ ಕ್ರೀಂ ಸಿಗುತ್ತದೆ ಬಾ ಹೋಗೋಣ " ಎಂದು ಪುಸಲಾಯಿಸಿ ಕರೆದೊಯ್ದಿದ್ದಾನೆ. ಬನ್ನೇರುಘಟ್ಟ ಬಳಿ ಬೇಕರಿಯಲ್ಲಿ ಕೇಕ್ ಹಾಗೂ ಜ್ಯೂಸ್ ಕೊಡಿಸಿ ರಾತ್ರಿ 8 ಗಂಟೆಗೆ ಅರಣ್ಯಕ್ಕೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿಗೆ ಬರಲು ಆತನ ಸ್ನೇಹಿತ ಗೋಪಿ ತಡವಾಗಿದೆ. ಆಗ ಮನೆಗೆ ಹೋಗಲು ನಿಶ್ಚಿತ್ ಹಠ ಹಿಡಿದಾಗ ಆತನ ಕುತ್ತಿಗೆಗೆ ಚಾಕುವಿನಿಂದ ಇರಿದು ಗುರು ಕೊಂದಿದ್ದಾನೆ. ಪೂರ್ವನಿಗದಿತ ಸಂಚಿನಂತೆ ಗೋಪಿ ಬಂದಿದ್ದರೆ ನಿಶ್ಚಿತ್‌ನನ್ನು ಅಲ್ಲಿ ಪಾಳು ಬಿದ್ದ ಮನೆಯಲ್ಲಿ ಕೂಡಿ ಹಾಕಿ ಹಣ ವಸೂಲಿ ಮಾಡುವುದು ಗುರುಮೂರ್ತಿ ಸಂಚಾಗಿತ್ತು. ಕೊಲೆ ಮುಚ್ಚಿ ಹಾಕಲು ಆರೋಪಿಗಳು ಪೆಟ್ರೋಲ್ ಬಂಕ್‌ಗೆ ಹೋಗಿ ಪೆಟ್ರೋಲ್ ತಂದು ದೇಹದ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.

ಕೊಲೆ ಮಾಡಿ ಬಾಲಕನ ತಾಯಿಗೆ ವಾಟ್ಸಾಪ್‌ ಕರೆ

ಮಗನ ನಾಪತ್ತೆಯಿಂದ ಕಂಗಲಾಗಿದ್ದ ಅಚ್ಯುತ್ ಪತ್ನಿಗೆ ರಾತ್ರಿ 1.30 ಗಂಟೆಗೆ ವಾಟ್ಸಾಪ್‌ನಲ್ಲಿ 9620398605 ಸಂಖ್ಯೆಯಿಂದ ಕರೆ ಮಾಡಿ ಮಗನ ಅಪಹರಿಸಿದ್ದು, ₹5 ಲಕ್ಷ ನೀಡುವಂತೆ ಹಿಂದಿಯಲ್ಲಿ ಗುರುಮೂರ್ತಿ ಬೆದರಿಸಿದ್ದ. ತನ್ನ ಮೊಬೈಲ್‌ಗೆ ಕನ್ನಡದಿಂದ ಹಿಂದೆಗೆ ಭಾಷಾಂತರಿಸುವ ಆ್ಯಪ್ ಅಳವಡಿಸಿ ಆತ ಮಾತನಾಡಿದ್ದ. ಆದರೆ, ಮರುದಿನ 8 ಗಂಟೆಗೆ ತಮಗೆ ಬೆದರಿಕೆ ಕರೆ ಬಂದಿದ್ದ ಸಂಗತಿಯನ್ನು ಪೊಲೀಸರಿಗೆ ಪೋಷಕರು ತಿಳಿಸಿದ್ದರು. ಶುಕ್ರವಾರ ಬೆಳಗ್ಗೆ 10ಕ್ಕೆ ಯಲಚೇನಹಳ್ಳಿಗೆ ಹಣ ತೆಗೆದುಕೊಂಡು ಮಫ್ತಿಯಲ್ಲಿ ಬಾಲಕನ ತಾಯಿ ಜತೆ ಪೊಲೀಸರು ತೆರಳಿದ್ದರು. ಅಷ್ಟರಲ್ಲಿ ತಮ್ಮ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿಕೊಂಡು ಯಲಚೇನಹಳ್ಳಿಗೆ ಬಂದಿದ್ದರು. ಆದರೆ, ಪೊಲೀಸರ ಇರುವಿಕೆ ಬಗ್ಗೆ ಶಂಕೆಗೊಂಡು ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸಂಜೆ 5 ರ ಸುಮಾರಿಗೆ ಬನ್ನೇರುಘಟ್ಟದ ಬಿಲ್ವಾರದಹಳ್ಳಿ ಕಾಡಲ್ಲಿ ಅರೆಬೆಂದ ಬಾಲಕನ ಮೃತದೇಹ ಪತ್ತೆ ಮಾಹಿತಿ ಸಿಕ್ಕಿತು. ಆಗ ಅಲ್ಲಿಗೆ ಮೃತನ ಪೋಷಕರು ತೆರಳಿದ್ದಾಗ ಮೃತದೇಹ ನಿಶ್ಚಿತ್ ಎಂಬುದು ಖಚಿತಪಡಿಸಿದ್ದರು. ಅಷ್ಟರಲ್ಲಿ ಸೈಕಲ್ ಪತ್ತೆಯಾಗಿದ್ದ ಉದ್ಯಾನ ಸುತ್ತದ ಸಿಸಿಟಿವಿ ಪರಿಶೀಲಿಸಿದಾಗ ಗುರುಮೂರ್ತಿ ಬೈಕ್‌ನಲ್ಲಿ ನಿಶ್ಚಿತ್ ಹೋಗುವ ದೃಶ್ಯಾವಳಿ ಸಿಕ್ಕಿದ್ದು, ಆರೋಪಿಯ ಮೊಬೈಲ್‌ನ ಸಿಡಿಆರ್, ಐಪಿಡಿಆರ್ ಹಾಗೂ ಟವರ್ ಲೊಕೇಷನ್‌ ಪಡೆದಾಗ ಬಿಲ್ವಾರದಹಳ್ಳಿ ಕಾಡಿನಲ್ಲೇ ಆರೋಪಿಗಳು ಅಡಗಿರುವುದು ಪೊಲೀಸರಿಗೆ ಖಚಿತವಾಯಿತು.

ಬಾಲಕನ ಮೇಲೆ ಲೈಂಗಿಕ ಕಿರುಕುಳ  ಮೃತ ಬಾಲಕ ನಿಶ್ಚಿತ್ ಮೇಲೆ ಲೈಂಗಿಕವಾಗಿ ದೌರ್ಜನ್ಯಕ್ಕೆ ಗುರುಮೂರ್ತಿ ಯತ್ನಿಸಿದ್ದ. ಆಗ ಬಾಲಕ ರಕ್ಷಣೆಗೆ ಕೂಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣ ವಿದೇಶದಲ್ಲಿ ಪೊಲೀಸ್

ಬೆಂಗಳೂರು ನಗರ ಪೊಲೀಸ್ ಘಟಕದಿಂದ ವಿದೇಶಾಂಗ ಇಲಾಖೆಗೆ ಎರವಲು ಸೇವೆ ಮೇಲೆ ಗುರುಮೂರ್ತಿ ಸೋದರ ತೆರಳಿದ್ದಾನೆ. ಪ್ರಸ್ತುತ ವಿದೇಶದಲ್ಲಿ ಆತ ಕೆಲಸ ಮಾಡುತ್ತಿದ್ದಾನೆ. ತನ್ನ ಸೋದರನಂತೆ ಪೊಲೀಸ್ ಆಗುವ ಕನಸು ಕಂಡಿದ್ದ ಆತ ಆಗಿದ್ದು ಮಾತ್ರ ಅಪ ಪೋಲಿ. ಈ ಹಿಂದೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರಿದ್ದ.

ಅಪಹರಣಕ್ಕೊಳಗಾದ ಬಾಲಕನ ರಕ್ಷಣೆಗೆ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ ಮೃತ ಬಾಲಕನ ಪೋಷಕರು ದೂರು ನೀಡಲು ತಡವಾಗಿದ್ದು ಗೋಲ್ಡನ್ ಆವರ್ ತಪ್ಪಿತು. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

-ಎ.ನಾರಾಯಣ್, ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗ

PREV
Read more Articles on

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ