ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸೋಮವಾರ ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ರಾಜ್ಯಕ್ಕೆ ಬೇಕು, ಆ ಮೂಲಕ ಭಾರತಕ್ಕೆ ಬೇಕು, ನಂತರ ವಿಶ್ವಕ್ಕೂ ಬೇಕು, ಏಕೆಂದರೆ ಕನ್ನಡಿಗರು ಎಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕೆಲವರು ಕನ್ನಡ ಕಲಿತರೆ ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.
ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡಿರುವ ನನಗೆ ಇಂಗ್ಲಿಷ್ ಕೂಡ ಅಷ್ಟೇ ಸಮರ್ಥವಾಗಿ ಬರುತ್ತದೆ. ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ ಮೂವರು ಮಕ್ಕಳು ಇವತ್ತುಒಳ್ಳೆಯ ಉದ್ಯೋಗದಲ್ಲಿದ್ದಾರೆ. ಆದ್ದರಿಂದ ನಮ್ಮವರೇ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಬಾರದು, ಬೇಕಾದರೆ ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಕಲಿಯಲಿ ಎಂದು ಅವರು ಕಿವಿಮಾತು ಹೇಳಿದರು.
ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಾಂಸ್ಕೃತಿಕ ಮಹತ್ವವನ್ನು ಸಾರುವ ಎರಡು ಮಹಾಕಾವ್ಯಗಳು. ಕುವೆಂಪು ಅವರ ಆನಂದಮಯ ಈ ಜಗ ಹೃದಯ, ಡಾ.ರಾಜ್‌ಕುಮಾರ್ ಅವರ ನಾದಮಯ... ಹಾಡು ಕೇಳಿದ ನಂತರ ವೈವಿಧ್ಯಮಯ ಸಂಸ್ಕೃತಿಯನ್ನು ರಕ್ಷಿಸಬೇಕು. ವೈವಿಧ್ಯಮಯ ಸಂಸ್ಕೃತಿ ನಾಶವಾದರೆ ಅದು ವಿಶ್ವದ್ರೋಹ ಆಗುತ್ತದೆ ಎಂದು ಅವರು ಎಚ್ಚರಿಸಿದರು.ಎಲ್ಲಾ ಕಾವ್ಯಗಳ ಮೂಲಸೆಲೆ ಮುಕ್ತಕ. ಇಂತಹ ಮುಕ್ತಕ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನೃತ್ಯಗುರು ಪ್ರೊ.ಕೆ. ರಾಮಮೂರ್ತಿ ರಾವ್, ಜೆಎಸ್ಎಸ್ ಸಂಗೀತಸಭಾ ಟ್ರಸ್ಟ್‌ನಿಂದ ಸಂಗೀತ ಸೇವಾನಿಧಿ ಪ್ರಶಸ್ತಿ ಪಡೆದಿರುವ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸಂಸ್ಥಾಪಕ ಎಸ್. ರಾಮಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ. ನಾಗರಾಜರಾವ್ ಅಧ್ಯಕ್ಷತೆ ವಹಿಸಿದ್ದರು. ರಂಗನಾಥ್ ಮೈಸೂರು, ಸುಕನ್ಯಾ ಪ್ರಭಾಕರ್, ಡಾ.ಮಂಜಪ್ಪಶೆಟ್ಟಿ ಮಸಗಲಿ, ಎಂ. ಚಂದ್ರಶೇಖರ್, ಎಚ್.ಆರ್. ಸುಂದರೇಶನ್, ಕೃಷ್ಣ ಮೊದಲಾದವರು ಇದ್ದರು. ಡಾ.ಕೆ. ಲೀಲಾ ಪ್ರಕಾಶ್ ಸ್ವಾಗತಿಸಿದರು. ಸೌಗಂಧಿಕಾ ಜೋಯಿಸ್, ಡಾ.ಕೃ.ಪಾ. ಮಂಜುನಾಥ್, ಕೆ.ಟಿ. ಶ್ರೀಮತಿ, ಪ್ರೊ.ಆರ್.ಎ. ಕುಮಾರ್ ಅವರು ಅತಿಥಿ ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಕಿರಣ್ ಸಿಡ್ಲೇಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಿ.ಆರ್. ಶಿವಕುಮಾರ್ ವಂದಿಸಿದರು. ಚಾರ್ವಿ ಸತೀಶ್ ನಾಡಗೀತೆ, ಕನ್ನಡಗೀತೆಗಳನ್ನು ಹಾಡಿದರು.