ಅನಧಿಕೃತ ಬಡಾವಣೆ ಹೊಂದಿರುವವರು ಸೂಕ್ತ ದಾಖಲೆ ನೀಡಿ ಬಿ-ಖಾತಾ ಪಡೆದುಕೊಳ್ಳಿ

KannadaprabhaNewsNetwork |  
Published : Feb 20, 2025, 12:50 AM IST
ಬಳ್ಳಾರಿಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ಅವರು ಅನಧಿಕೃತ ಆಸ್ತಿಗಳಿಗೆ ನೀಡುತ್ತಿರುವ ಬಿ-ಖಾತಾ ಕುರಿತು ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಅನಧಿಕೃತ ಬಡಾವಣೆಗಳನ್ನು ಹೊಂದಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಿ ‘ಬಿ-ಖಾತಾ’ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಅನಧಿಕೃತ ಬಡಾವಣೆಗಳನ್ನು ಹೊಂದಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಿ ‘ಬಿ-ಖಾತಾ’ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಅಗತ್ಯ ದಾಖಲೆ ಸಲ್ಲಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ತಿಳಿಸಿದರು.

ಮಹಾನಗರ ಪಾಲಿಕೆಯಿಂದ ನೀಡಲಾಗುವ ಬಿ-ಖಾತಾ ಕುರಿತಂತೆ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿ-ಖಾತಾ ನೀಡುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ್ದು, ಈ ಅಭಿಯಾನವನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಮನಪಾ ವ್ಯಾಪ್ತಿಯಲ್ಲಿನ ಅನಧೀಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಆಸ್ತಿಯ ಕಂದಾಯ ಪಾವತಿಸಿ, ಬಿ-ಖಾತಾ ಪಡೆಯಬಹುದಾಗಿದೆ. ಇದರಿಂದ ಬಹು ದಿನಗಳಿಂದ ಅನಧಿಕೃತ ಆಸ್ತಿಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಸೆ.10, 2024ರ ಕ್ಕಿಂತ ಮುಂಚಿನ ಆಸ್ತಿಗಳಿಗೆ ಈ ಕಾಯ್ದೆಯು ಅನ್ವಯವಾಗುತ್ತದೆ. ಈ ಅಭಿಯಾನವು ಒಂದು ಬಾರಿ ಪರಿಹಾರ ಕ್ರಮವಾಗಿರುವ ಹಿನ್ನೆಲೆ ಸಾರ್ವಜನಿಕರು ಬಿ-ಖಾತಾ ನೀಡುವ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಆಸ್ತಿಯ ಮಾಲೀಕರು, ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆ ಸಲ್ಲಿಸಿ, 7 ದಿನಗಳ ಒಳಗಾಗಿ ಬಿ-ಖಾತಾ ಪಡೆಯಬಹುದು ಹಾಗೂ ಜನರ ಅನುಕೂಲಕ್ಕಾಗಿ ಪಾಲಿಕೆ ವ್ಯಾಪ್ತಿಯ ವಾರ್ಡ್ ವಾರು ಸ್ವಯಂ-ಸೇವಕರನ್ನು ನೇಮಿಸಲಾಗುವುದು, ಅವರು ಮನೆ-ಮನೆಗೆ ಭೇಟಿ ನೀಡಿ ಪೂರಕ ದಾಖಲೆ ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸುತ್ತಾರೆ. ಬಳಿಕ ಮನೆಗೆ ಬಿ-ಖಾತಾ ತಲುಪಿಸಲಾಗುವುದು. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬಾರದು. ಈ ಸಂಬಂಧ ಸಹಾಯವಾಣಿ ಸಂಖ್ಯೆ ಆರಂಭಿಸಲಾಗುವುದು ಎಂದು ಭರತ್ ರೆಡ್ಡಿ ತಿಳಿಸಿದರು.

ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಬಳ್ಳಾರಿ ಮನಪಾ ವ್ಯಾಪ್ತಿಯಲ್ಲಿ ಒಟ್ಟು 35,568 ಅನಧಿಕೃತ ಬಡಾವಣೆಗಳು ಇದ್ದು, ಅದರಲ್ಲಿ ವಸತಿ-11,423, ವಾಣಿಜ್ಯ-5,201, ಕೈಗಾರಿಕೆ-265 ಮತ್ತು 18,679 ಖಾಲಿ ನಿವೇಶನಗಳಿವೆ. ಅನಧಿಕೃತ ಆಸ್ತಿಗಳಿಂದಾಗಿ ಜನಸಾಮಾನ್ಯರು ಕಟ್ಟಡ, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಸಮಸ್ಯೆ ಉಂಟಾಗಿತ್ತು. ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಬಿ–ಖಾತಾ ನೀಡಲು ಮುಂದಾಗಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದರು.

ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಗರದ ವಾರ್ಡ್ ನಂ.1, 15ರಿಂದ 24 ಹಾಗೂ 36, 37 ರ ನಿವಾಸಿಗಳು ಪಾಲಿಕೆ ವಲಯ ಕಚೇರಿ-1ರ ಆಯುಕ್ತ ಗುರುರಾಜ್ ಸೌದಿ(ಮೊ.9482950502), ವಾರ್ಡ್ ನಂ.2 ರಿಂದ 14 ರ ನಿವಾಸಿಗಳು ವಲಯ ಕಚೇರಿ-2ರ ಆಯುಕ್ತ ಫಣಿರಾಜ್(ಮೊ.9483833135) ಮತ್ತು ವಾರ್ಡ್ ನಂ.25 ರಿಂದ 35 ಹಾಗೂ 38, 39 ರ ನಿವಾಸಿಗಳು ವಲಯ ಕಚೇರಿ-3ರ ಆಯುಕ್ತ ಮಲ್ಲಿಕಾರ್ಜುನ್ (ಮೊ.9448493344), ವಲಯ ಕಚೇರಿ-1ರ ಕಂದಾಯ ನೀರಿಕ್ಷಕ ವೀರೇಶಯ್ಯ ದೂ. 08392-294708, ಮೊ. 7019141268 (ವಾರ್ಡ್ ನಂ.1, 15ರಿಂದ 24 ಹಾಗೂ 36, 37). ವಲಯ ಕಚೇರಿ-2ರ ಸಹಾಯಕ ಕಂದಾಯ ಅಧಿಕಾರಿ ಅಬ್ದುಲ್ ಖಾದರ್ ಎಸ್.ಕೆ. ದೂ.08392-294745, ಮೊ. 9845469264 (ವಾರ್ಡ್ ನಂ.2ರಿಂದ 14). ವಲಯ ಕಚೇರಿ-3ರ ಕಂದಾಯ ನಿರೀಕ್ಷಕ ಕೆ.ವೆಂಕಟೇಶ್ ದೂ.08392-294753, ಮೊ.9986174981 (ವಾರ್ಡ್ ನಂ.25 ರಿಂದ 35 ಹಾಗೂ 38, 39) ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಪಾಲಿಕೆಯ ಸಭಾನಾಯಕ ಪಿ.ಗಾದೆಪ್ಪ, ಆಯುಕ್ತ ಖಲೀಲ್ ಸಾಬ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು