ಬೆಳೆಗಾರನ್ನು ಸರ್ಫೆಸಿ ಕಾಯ್ದೆಯಿಂದ ಹೊರ ತರಲು ಚಿಂತನೆ । ಕಾಫಿ ಮಂಡಳಿಯಲ್ಲಿ ನಡೆದ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ಬೆಳೆಗಾರರಿಗೆ ಸರ್ಫೆಸಿ ಸೇರಿದಂತೆ ಇತರೆ ಕೆಲ ಸಮಸ್ಯೆಗಳಿಂದ ಹೊರ ಬರಲು ಕಾಫಿಯನ್ನು ವಾಣಿಜ್ಯೋದ್ಯಮದಿಂದ ಕೃಷಿ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆದಿದ್ದು, ಇದಕ್ಕೆ ರಾಜ್ಯಮಟ್ಟದ ಬೆಳೆಗಾರ ಸಂಘಟನೆಗಳು ಮತ್ತು ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಕೃಷಿ ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದ್ದಾರೆ.
ಬುಧವಾರ ಚಿಕ್ಕಮಗಳೂರು ಕಾಫಿ ಮಂಡಳಿಯಲ್ಲಿ ನಡೆದ ಯಂತ್ರೋಪಕರಣಗಳಿಗೆ ಕಾಫಿ ಮಂಡಳಿಯಿಂದ ನೀಡುವ ಸಹಾಯಧನಕ್ಕೆ ಯಾವೆಲ್ಲ ಯಂತ್ರೋಪಕರಣಗಳು ಸೇರ್ಪಡೆಯಾಗಬೇಕು ಮತ್ತು ಯಾವ ಕಂಪನಿಯವರನ್ನು ಸೇರ್ಪಡೆ ಗೊಳಿಸಬೇಕೆಂದು ಬೆಳೆಗಾರ ಮತ್ತು ರೈತ ಸಂಘಟನೆ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.ಕಾಫಿ ಬೆಳೆಗಾರರಿಗೆ ಗುಣಮಟ್ಟದ ಯಂತ್ರೋಪಕರಣಗಳು ನಿಖರ ಬೆಲೆಗೆ ಸಿಗುವಂತಾಗಬೇಕು. ಮೊದಲ ಬಾರಿಗೆ ಕಾಫಿ ಮಂಡಳಿಯಿಂದ ಯಂತ್ರಗಳು ಬೆಳೆಗಾರರ ಬೇಡಿಕೆಗೆ ಅನುಗುಣವಾಗಿರಬೇಕೆಂಬ ಕಾರಣದಿಂದ ಈ ಸಭೆ ಕರೆಯಲಾಗಿದೆ ಎಂದ ದಿನೇಶ್, ಮುಂದಿನ 2047ನೇ ಇಸವಿಯಲ್ಲಿ ಕಾಫೀ ಚಿತ್ರಣ ಹೇಗಿರಬೇಕೆಂದು ಮುಂದಿಟ್ಟುಕೊಂಡು 17 ಅಂಶದ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಅದನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದರು.
ಕಾರ್ಮಿಕರ ಅಭಾವ ಎದುರಿಸುತ್ತಿರುವ ಕಾಫಿ ಉದ್ಯಮವನ್ನು ಸಂಕಷ್ಟದಿಂದ ಪಾರು ಮಾಡಲು ಸಿದ್ಧತೆ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತ ಕಾಫಿ ಉತ್ಪಾದನೆಯಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದನೆಯಾಗುತ್ತಿದೆ. ಇದನ್ನು 2047ಕ್ಕೆ 9 ಲಕ್ಷ ಮೆಟ್ರಿಕ್ ಟನ್ ಗೆ ಏರಿಸುವ ಗುರಿ ಹೊಂದಲಾಗಿದೆ ಎಂದ ಹೇಳಿದರು.ಈ ವೇಳೆ ಮಾತನಾಡಿದ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆರೆಮಕ್ಕಿಮಹೇಶ್, ಕಾಫಿಯೂ ಕೂಡ ಭೂಮಿಯಲ್ಲಿ ಬಿತ್ತಿ ಬೆಳೆಯುವ ಬೆಳೆಯಾಗಿದ್ದು, ಕಾಫಿಯನ್ನು ಕೃಷಿ ವ್ಯಾಪ್ತಿಗೆ ತರುವುದರಿಂದ ರೈತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಕಾಫಿ ಬೆಳೆಗಾರರು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟ್ ರೆಡ್ಡಿ ಮಾತನಾಡಿ, ಕಾಫಿ ಬೆಳೆಗಾರರಿಗೆ ಈಗಿರುವ ಸಹಾಯಧನದ ಮಾಹಿತಿ ನೀಡಿ, ಈ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಅನುಮೋದನೆ ದೊರೆಯಲಿದೆ ಎಂದು ಹೇಳಿದರು.ಸಭೆಯಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಹೇಶ್, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ. ಮಲ್ಲೇಶ್, ಕಾರ್ಯದರ್ಶಿ ರತೀಶ್, ಆಲ್ದೂರು ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್. ಸುರೇಶ್, ಆವತಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಮಹೇಂದ್ರ, ರೈತ ಸಂಘದ ಮುಖಂಡರಾದ ದಯಾಕರ್, ಜಯಣ್ಣ, ತೌಫಿಕ್ ಅಹಮದ್ ಸೇರಿದಂತೆ ಕಾಫಿ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು. 24 ಕೆಸಿಕೆಎಂ 1ಚಿಕ್ಕಮಗಳೂರಿನ ಕಾಫಿ ಮಂಡಳಿ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷ ದಿನೇಶ್ ಅಧ್ಯಕ್ಷತೆಯಲ್ಲಿ ಕಾಫಿ ಬೆಳೆಗಾರರ ಹಾಗೂ ಅಧಿಕಾರಿಗಳ ಸಭೆ ಬುಧವಾರ ನಡೆಯಿತು.