ಕನ್ನಡಪ್ರಭ ವಾರ್ತೆ ಜಮಖಂಡಿ / ಪಾವಗಡ
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಕಾಂಗ್ರೆಸ್ ಯುವ ಘಟಕದ ವತಿಯಿಂದ ಕಲ್ಲೋಳ್ಳಿ ಗ್ರಾಮದ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಶೀಘ್ರ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದಾರೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕುಮಾರ್ ದಾನಕ್ಕನವರ್ ನೇತೃತ್ವದಲ್ಲಿ ವೆಂಕಟರಮಣ ದೇವರ ಮುಂದೆ ಡಿಕೆಶಿ ಫೋಟೋ ಇಟ್ಟು ಅಭಿಷೇಕ ಮಾಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ದೇವಸ್ಥಾನದ ಮುಂಭಾಗದಲ್ಲಿ 1001 ಈಡುಗಾಯಿ ಒಡೆದಿದ್ದಾರೆ.
ಇನ್ನೂ ತುಮಕೂರು ಜಿಲ್ಲೆ ಪಾವಗಡ ಶನಿಮಹಾತ್ಮ ದೇವಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ತಮ್ಮ ನಾಯಕ ಮುಖ್ಯಮಂತ್ರಿಯಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಅವರಿಗೆ ಇರುವ ಶನಿ ಹಾಗೂ ಕುಜ ದೋಷ ನಿವಾರಣೆಯಾಗಲಿ ಎಂದು ಅವರ ಅಭಿಮಾನಿಗಳು 91 ಕೆ.ಜಿ. ಎಳ್ಳಿನ ತುಲಾಭಾರ ಮಾಡಿದ್ದಾರೆ. ಶಿವಕುಮಾರ್ ಅವರಿಗಿರುವ ದೋಷ ದೂರವಾಗಲಿ ಜೊತೆಗೆ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿ ಎಂದು ಶನಿಮಹಾತ್ಮ ದೇವಸ್ಥಾನದ ನವಗ್ರಹಗಳಿಗೆ ವಿಶೇಷ ತೈಲಾಭಿಷೇಕವನ್ನೂ ಅವರ ಅಭಿಮಾನಿಗಳು ನೆರವೇರಿಸಿದ್ದಾರೆ.