ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಸ್ವಾವಲಂಬನೆ ಮತ್ತು ಜೀವನ ಮಟ್ಟ ಸುಧಾರಣೆಗಾಗಿ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸೌರಶಕ್ತಿ ಸ್ವ-ಉದ್ಯೋಗ ಮೇಳದಲ್ಲಿ ಸ್ವ ಸಹಾಯ ಸಂಘದ ಸಾವಿರಾರು ಮಹಿಳೆಯರು ಭಾಗವಹಿಸಿ ಅಗತ್ಯ ಮಾಹಿತಿ ತಿಳಿದುಕೊಂಡರು.ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಪೌಂಡೇಶನ್ ವತಿಯಿಂದ ಆಯೋಜಿಸಿದ್ದ ಸ್ವ-ಉದ್ಯೋಗ ಮೇಳದಲ್ಲಿ ಸೌರ ಶಕ್ತಿ ಚಾಲಿತ ಕಿರು ಯಂತ್ರೋಪಕರಣ ಹಾಗೂ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವ ಉದ್ಯಮ ನಡೆಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು.
ತಯಾರಿಕೆ, ಮಾರಾಟ ಮತ್ತು ಅದರಿಂದ ಮಹಿಳೆಯರಿಗಾಗುವ ಅನುಕೂಲಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ನೂರಾರು ಸ್ವ ಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿ ಕಿರು ಯಂತ್ರೋಪಕರಣಗಳ ಮೂಲಕ ಗುಡಿ ಕೈಗಾರಿಕೆ ನಡೆಸಲು ಅಗತ್ಯವಿದ್ದ ಮಾಹಿತಿಗಳನ್ನು ಪಡೆದರು.ಮೇಳದಲ್ಲಿ ಸೋಲಾರ್ ಚಾಲಿತ ಹಪ್ಪಳ ತಯಾರಿಕೆ ಯಂತ್ರ, ರಾಗಿ ಸಂಸ್ಕರಣಾ ಯಂತ್ರ, ಭತ್ತ, ಕಬ್ಬಿನ ರಸ, ಗಂಧದ ಕಡ್ಡಿ ತಯಾರಿಕೆ ಯಂತ್ರ, ಭತ್ತದ ನಾಟಿ ಯಂತ್ರ, ಆಯಿಲ್ ಮಿಲ್, ಯಾಂತ್ರಿಕವಾಗಿ ಮಡಿಕೆ ತಯಾರಿಕೆ ಯಂತ್ರ ಸೇರಿದಂತೆ ಆಹಾರ ಪದಾರ್ಥಗಳ ಮತ್ತು ಕೃಷಿಗೆ ಅಗತ್ಯವಾದ ಯಂತ್ರೋಪಕರಣಗಳ ಮೂಲಕ ಮಹಿಳೆಯರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಹಿಳೆಯರು ಹಳ್ಳಿಗಳಲ್ಲೇ ಗುಡಿ ಕೈಗಾರಿಕೆಗಳ ಮೂಲಕ ಜೀವನ ಕಟ್ಟಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಶೇ.50 ರಷ್ಟು ಮಹಿಳೆಯರು ಸ್ವ-ಸಹಾಯ ಗುಂಪುಗಳು ಅಥವಾ ವೈಯಕ್ತಿಕ ಆಸಕ್ತಿಗೆ ತಕ್ಕಂತೆ ಉದ್ಯಮ ಆಯ್ದುಕೊಂಡರೆ ನಾನು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಲು ಸಹಕಾರ ನೀಡುತ್ತೇನೆ. ಮಹಿಳೆಯರು ಜೀವನದಲ್ಲಿ ಯಶಸ್ಸು ಕಾಣಲು, ಬದುಕು ಕಟ್ಟಿಕೊಂಡು ತೆಗ ಸ್ವಾವಲಂಭಿಗಳಾಲು ಹೆಜ್ಜೆ ಇಡಬೇಕು ಎಂದರು.ಜಿಪಂ ಸಿಇಒ ಅಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ಮಹಿಳೆಯರ ಆಸಕ್ತಿ, ಉದ್ದೇಶ ಮತ್ತು ಕೌಶಲ್ಯಕ್ಕೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ. ಉತ್ಪನ್ನ ತಯಾರಿಕೆ ನಂತರ ಬ್ರ್ಯಾಡಿಂಗ್ ಮತ್ತು ಮಾರುಕಟ್ಟೆ ಕಂಡುಕೊಳ್ಳುವುದು ಮುಖ್ಯವಾದ ಕೆಲಸ ಆ ಬಗೆಯೂ ಆಲೋಚನೆ ಮಾಡಲಾಗಿದೆ ಎಂದರು.
ತೆಂಗಿನ ಚಿಪ್ಪಿನಿಂದ ಕಲಾಕೃತಿ ಮಾಡಿದರೆ ತೆಂಗು ಅಭಿವೃದ್ಧಿ ಮಂಡಳಿ ಮೂಲಕ ಅದಕ್ಕೆ ಮಾರುಕಟ್ಟೆ ಕಂಡುಕೊಳ್ಳಲಾಗುವುದು. ಅಂತೇಯೆ ಎಲ್ಲಾ ಉತ್ಪನ್ನಗಳಿಗೂ ಸೂಕ್ತ ಮಾರುಕಟ್ಟೆ ದೊರಕಿಸಲಾಗುವುದು, ಮನೆ ಚಾವಣಿ ಮೇಲೆ ಅಣಬೆ ಬೆಳೆದು ಲಕ್ಷಾಂತರ ಸಂಪಾದನೆ ಮಾಡುತ್ತಿದ್ದಾರೆ. ಆಸಕ್ತಿ ಇದ್ದವರಿಗೆ ಅಣಬೆ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು.ಸ್ಮಿತಾ ಪುಟ್ಟಣ್ಣಯ್ಯ ಮಾತನಾಡಿ, ಸಾಲ ಪಡೆದು ಹಬ್ಬ ಹರಿದಿನ ಮಾಡುತ್ತೇವೆ. ಹಣ ಬಂದಾಗ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಹೆಣ್ಮಕ್ಕಳೇ ಸ್ಟಾಂಗ್ ಗುರು ಎನ್ನುವ ರೀತಿಯಲ್ಲಿ ಬದುಕಬೇಕು. ಅಣ್ಣ ದರ್ಶನ್ ಪುಟ್ಟಣ್ಣಯ್ಯ ಬಹಳ ಮುಂದಾಲೋಚನೆಯಿಂದ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸ್ವಾವಲಂಬನೆ ಬದುಕು ರೂಪಿಸುವ ಇಚ್ಚೆಯ ಜತೆಗೆ ಕ್ಷೇತ್ರದ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಸಹಾಯಕ ನಿರ್ದೇಶಕ ಸುರೇಂದ್ರ, ಸೆಲ್ಕೂ ಫೌಡೇಶನ್ ಮುಖ್ಯಸ್ಥ ನಾಗೇಶ್, ಕಿರು ಉದ್ಯಮಿಗಳಾದ ಪದ್ಮಾಕ್ಷಿ, ಗಿರಿಜಾ ಇತರರು ಇದ್ದರು.