ಉದ್ಯೋಗ ಅರಸಿ ಗುಳೆ ಹೊರಟ ಸಾವಿರಾರು ಕಾರ್ಮಿಕರು!

KannadaprabhaNewsNetwork |  
Published : Nov 11, 2024, 12:51 AM ISTUpdated : Nov 11, 2024, 12:52 AM IST
ಚಿತ್ರ 10ಬಿಡಿಆರ್‌777ಮಾರುತಿ ರಾಠೋಡ, ಕಾರ್ಮಿಕ ಮುಖಂಡ | Kannada Prabha

ಸಾರಾಂಶ

ಸಾಲದ ಸುಳಿಯಲ್ಲಿ ಸಿಲುಕಿ ಸಾವಿರಾರು ಕಾರ್ಮಿಕರು ಪ್ರತಿ ವರ್ಷ ಜೀತದಾಳುಗಳಂತೆ ಒಲ್ಲದ ಮನಸ್ಸಿಂದ ಕಬ್ಬು ಕಟಾವಿಗೆ ಗುಳೆ ಹೋಗುವಂಥ ದುರಂತದ ಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಔರಾದ್‌

ಸರ್ಕಾರ ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಮನೆ ಬಾಗಿಲಲ್ಲಿ ಸೌಲಭ್ಯ ನೀಡಿದೆ. ಹಲವು ಉಚಿತ ಭಾಗ್ಯಗಳನ್ನು ನೀಡಿದ್ರೂ ಕಬ್ಬು ಕಟಾವು ಕಾರ್ಮಿಕರ ಭಾಗ್ಯದಲ್ಲಿ ಬವಣೆ ಮಾತ್ರ ತಪ್ಪುತ್ತಿಲ್ಲ. ಉದ್ಯೋಗ ಅರಸಿ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಕ್ಷೇತ್ರದಿಂದ ಹೊರ ಹೋಗ್ತಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿ ಸಾವಿರಾರು ಕಾರ್ಮಿಕರು ಪ್ರತಿ ವರ್ಷ ಜೀತದಾಳುಗಳಂತೆ ಒಲ್ಲದ ಮನಸ್ಸಿಂದ ಕಬ್ಬು ಕಟಾವಿಗೆ ಗುಳೆ ಹೋಗುವಂಥ ದುರಂತದ ಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಗಳು ಲಾರಿ ಮಾಲೀಕರಿಗೆ ಮುಂಗಡ ಹಣ ಕೊಡ್ತಾರೆ. ಲಾರಿ ಮಾಲೀಕರು ಕಾರ್ಮಿಕ ಮುಖ್ಯಸ್ಥನ ಮೂಲಕ ಕಾರ್ಮಿಕರಿಗೆ ಒಂದು ಜೋಡಿಗೆ ತಲಾ ಒಂದು ಲಕ್ಷ ರು. ಮುಂಗಡ ಪಡೆದು ಕೊಡುತ್ತಾರೆ.

ಹೀಗೆ ಹಣ ನೀಡುವ ಕಾರ್ಖಾನೆಗಳು ಮೂರು ತಿಂಗಳಲ್ಲಿ ಕೆಲಸ ಮಾಡಿ ಸಾಲ ತಿರಿಸುವಂತೆ ಹೇಳ್ತಾರೆ. ಆದ್ರೆ ಅಷ್ಟೊಂದು ಕೆಲಸ ಆಗದೆ ಇದ್ದಾಗ ಬಾಕಿ ಉಳಿದ ಹಣದ ಜೊತೆಗೆ ಮತ್ತೊಂದಿಷ್ಟು ಹಣವನ್ನು ಕಾರ್ಮಿಕರಿಗೆ ನೀಡಿ ಸಾಲದ ಭಾರ ಹಾಕಿ ಅವರನ್ನು ಮತ್ತೆ ಕಬ್ಬು ಕಟಾವಿಗೆ ಬರುವಂತೆ ಅಸಹಾಯಕರಾಗಿ ಮಾಡ್ತಾರೆ ಎಂಬ ಆರೋಪವಿದೆ. ಇದರತ್ತ ಸರ್ಕಾರ ಚಿತ್ತ ಹರಿಸಬೇಕಿದೆ. ಇಲಾಖೆಗಳು ಗಂಭೀರವಾಗಬೇಕಿದೆ.

ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ:

ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ಕಬ್ಬು ಕಟಾವಿಗೆ ಔರಾದ್‌ ತಾಲೂಕಿನಿಂದ ಅಂದಾಜು ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಹೊರಗೆ ಹೋಗ್ತಾರೆ. ಈ ಎಲ್ಲ ಕಾರ್ಮಿಕರು ಮನೆಗೆ ಬೀಗ ಹಾಕಿ ಮುಂದಿನ ನಾಲ್ಕು ತಿಂಗಳು ಕೆಲಸ ಅರಸಿ ಕಬ್ಬಿನ ಗದ್ದೆಗಳಲ್ಲೇ ಗುಡಿಸಲು ಹಾಕಿಕೊಂಡು ಜೀವನ ಮಾಡ್ತಾರೆ.

ಯಾದಗಿರಿ, ಕಲಬುರಗಿ, ವಿಜಯಪುರ, ಮಹಾರಾಷ್ಟ್ರದ ಲಾತೂರ, ಧಾರಾಶಿವ ಜಿಲ್ಲೆಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಕಬ್ಬು ಕಟಾವಿಗೆ ಹೋಗ್ತಾರೆ. ಚಳಿ, ಮಳೆ ಎನ್ನದೆ ಕಷ್ಟಪಟ್ಟು ಕೆಲಸ ಮಾಡ್ತಾರೆ. ಈ ವೇಳೆಯಲ್ಲಿ ಜೊತೆಯಲ್ಲಿ ತಮ್ಮ ಮಕ್ಕಳನ್ನು ಕರಕೊಂಡು ಹೋಗ್ತಾರೆ ಇದರಿಂದ ಮಕ್ಕಳು ಶಾಲೆಯಿಂದ ದೂರವಾಗಿ ಶಿಕ್ಷಣದಿಂದ ವಂಚಿತರಾಗಿ ಅನಕ್ಷರಸ್ಥರಾಗುತ್ತಿರುವ ದುರದೃಷ್ಟಕರ ಸಂಗತಿ ಕೂಡ ಬೆಳೆದುಕೊಂಡು ಬಂದಿದೆ.

ಪ್ರತಿ ವರ್ಷ ಕಾರ್ಮಿಕರಿಗೆ ಕಿರಿಕಿರಿ:

ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ನೀಡುವ ಮುಂಗಡ ಹಣದಲ್ಲಿ ಉಳಿದುಕೊಂಡ ಬಾಕಿ ಹಣ ವಾಪಸ್‌ ಪಡೆಯಲು ತಿಂಗಳುಗಟ್ಟಲೇ ಕಾರ್ಮಿಕರನ್ನು ಕೂಡಿ ಹಾಕಿ ವಸೂಲಿ ಮಾಡಿದ ಹಲವು ಪ್ರಕರಣಗಳು ಪೊಲೀಸ್‌ ಠಾಣೆ ಮೆಟ್ಟಿಲೇರಿ ಮುಗಿದಿವೆ. ಮಹಿಳೆಯರು ಮಕ್ಕಳೆನ್ನದೆ ಬಡ ಕಾರ್ಮಿಕ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿಸಿ ಶೋಷಣೆ ಮಾಡುವ ಘಟನೆಗಳು ಕೇಳಿ ಬಂದಿವೆ.

ಉಚಿತ ಮನೆ, ವಿದ್ಯುತ್‌ ಉಚಿತ, ಗೃಹ ಲಕ್ಷ್ಮಿ ಯೋಜನೆಯ ಮಾಸಿಕ ಅನುದಾನ ಹಾಗೂ ಪಡಿತರ ಆಹಾರ ಧಾನ್ಯಗಳು ಉಚಿತವಾಗಿ ಸರ್ಕಾರ ನೀಡಿದರೂ ಕಬ್ಬು ಕಟಾವು ಕಾರ್ಮಿಕರು ಈ ಜಾಲದಿಂದ ಹೊರ ಬರದೆ ವಿಲವಿಲ ಒದ್ದಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ ಎಂದು ಕಾರ್ಮಿಕರ ಬವಣೆಯ ಕುರಿತು ಹೇಳುತ್ತಾರೆ ಸ್ಥಳೀಯ ಮುಖಂಡ ಶಿವಾಜಿರಾವ್‌ ಪಾಟೀಲ್‌.ಇನ್ನು, ಕಾರ್ಮಿಕ ಮುಖಂಡ ಮಾರುತಿ ರಾಠೋಡ, ಸರ್ಕಾರ ಕಬ್ಬು ಕಟಾವು ಕಾರ್ಮಿಕರಿಗೆ ಗುರುತಿನ ಚೀಟಿಯಾಗಲಿ, ವಿಮೆ ಸೌಲಭ್ಯವಾಗಲಿ ಅಥವಾ ಸರ್ಕಾರದಿಂದ ನೀಡುವ ಸೌಲಭ್ಯಗಳ ಮಾಹಿತಿಯಾಗಲಿ ನೀಡುವುದಿಲ್ಲ. ಕಾರ್ಮಿಕ ಇಲಾಖೆ ವಿಸ್ತರಣಾಧಿಕಾರಿ ಬಹುತೇಕ ಕಾರ್ಮಿಕರಲ್ಲದವರಿಗೆ ಸೌಲಭ್ಯಗಳು ನೀಡಿದ್ದಾರೆ ಎಂದು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!