ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನಲ್ಲಿ ಕಾಟಿ, ಕಾಡಾನೆ ಕಾಟದೊಂದಿಗೆ ಈಗ ಕಾಳಿಂಗ ಸರ್ಪಗಳ ಭೀತಿಯೂ ಸೃಷ್ಟಿಯಾಗಿದ್ದು, ಜನರು ಜೀವ ಭಯದಲ್ಲೇ ಓಡಾಡುವಂತಾಗಿದೆ.ಹೌದು, ಕೇವಲ ಏಳು ತಿಂಗಳ ಅವಧಿಯಲ್ಲಿ ವಿವಿಧ ಗ್ರಾಮಗಳಲ್ಲಿ 11 ಕಾಳಿಂಗ ಸರ್ಪಗಳನ್ನು ಸೆರೆಹಿಡಿದು ಅಭಯಾರಣ್ಯಕ್ಕೆ ಬಿಡಲಾಗಿದ್ದರೆ, ಇನ್ನೂ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪಗಳು ಸೆರೆ ಕಾರ್ಯಾಚರಣೆ ವೇಳೆಗೆ ಕಣ್ಮರೆಯಾಗಿವೆ.
ದೇಶದಲ್ಲೇ ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಮಾತ್ರ ಹೆಚ್ಚಿನ ಕಾಳಿಂಗ ಸರ್ಪಗಳಿವೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ತಾಲೂಕಿನ ಪಶ್ಚಿಮ ಘಟ್ಟದಂಚಿನ ಹಾನುಬಾಳ್ ಹೋಬಳಿಯ ಕುಮಾರಹಳ್ಳಿ, ಬೈರಮುಡಿ, ಹೆತ್ತೂರು ಹೋಬಳಿಯ ಹೊಂಗಡಹಳ್ಳ, ಅತ್ತಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಮನೆಯ ಸೂರು, ದನದ ಕೊಟ್ಟಿಗೆ, ಸೌಧೆ ಕೊಟ್ಟಿಗೆಗಳಲ್ಲಿ ಕಂಡು ಬರುವ ವಿವಿಧ ಗಾತ್ರದ ಕಾಳಿಂಗ ಸರ್ಪಗಳನ್ನು ಉರಗ ತಜ್ಞರು ಸೆರೆಹಿಡಿದು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.ಭಯಭೀತರಾದ ಗ್ರಾಮಸ್ಥರು:
ಕಳೆದ ಮೂರು ದಿನಗಳ ಹಿಂದೆ ಕುಣಿಗಾಲ್ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಕಂಡುಬಂದಿತ್ತು. ಹರಗರಹಳ್ಳಿ ಗ್ರಾಮದ ಮಂಜುನಾಥ್ ಎಂಬುವವರ ಮನೆಯ ಮುಂಭಾಗದ ಹಣ್ಣಿನ ಮರವೊಂದರಲ್ಲೂ ಕಾಳಿಂಗಸರ್ಪ ಕಂಡು ಬಂದಿದೆ. ಮರುದಿನ ಇದೇ ಗ್ರಾಮದ ಭತ್ತದ ಗದ್ದೆಯಲ್ಲಿ ವ್ಯಕ್ತಿಯೊಬ್ಬರನ್ನು ಕಂಡು ಹೆಡೆ ಎತ್ತಿದೆ. ಬೆದರಿದ ವ್ಯಕ್ತಿ ಓಡುವ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಗ್ರಾಮಸ್ಥರು ತೋಟ, ಭತ್ತದ ಗದ್ದೆಗಳಿಗೆ ತೆರಳಲು ಭಯಪಡುವಂಥ ವಾತಾವರಣ ಸೃಷ್ಟಿಯಾಗಿದೆ. ಮನೆಗಳಿಗೆ ನುಗ್ಗುವ ವಿಷ ಸರ್ಪಗಳಿಂದ ರಕ್ಷಣೆ ಪಡೆಯುವುದು ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ.ಸಿಬ್ಬಂದಿಯೇ ಇಲ್ಲ:
ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಯದ್ದಾಗಿದೆ. ಆದರೆ, ಸ್ಥಳೀಯ ಇಲಾಖೆಯಲ್ಲಿ ಹಾವು ಹಿಡಿಯುವ ಪರಿಣಿತರೇ ಇಲ್ಲವಾಗಿದ್ದಾರೆ. ಉರಗ ತಜ್ಞರು ಭಾರೀ ಪ್ರಮಾಣದ ಹಾವುಗಳನ್ನು ಹಿಡಿಯುವ ವೇಳೆ ಅವಘಡ ಸಂಭವಿಸಿದರೆ ಹೊಣೆ ಯಾರು ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ.ಗಡಿ ಉಲ್ಲಂಘನೆ:
ಸಾಮಾನ್ಯವಾಗಿ ಕಾಳಿಂಗ ಸರ್ಪಗಳು ತಾವೇ ಸೃಷ್ಟಿಸಿಕೊಂಡ ಗಡಿರೇಖೆಯೊಳಗೆ ಬದುಕು ನಡೆಸುತ್ತವೆ, ಮತ್ತೊಂದು ಗಡಿರೇಖೆಯೊಳಗೆ ಪ್ರವೇಶಿಸಿದರೆ ಹಲವು ಸಮಸ್ಯೆಗಳನ್ನು ಅವು ಎದುರಿಸಬೇಕಾಗುತ್ತದೆ ಎಂಬುದು ಉರಗ ತಜ್ಞರ ಮಾತು. ಆದರೆ, ವಿವಿಧ ಗ್ರಾಮಗಳಲ್ಲಿ ಸೆರೆ ಹಿಡಿಯಲಾಗುವ ಎಲ್ಲ ತರಹದ ಹಾವುಗಳನ್ನು ರಾಷ್ಟ್ರೀಯ ಹೆದ್ದಾರಿ 75ರ ತಿರುವಿನ ಸಮೀಪವೇ ಬಿಡಲಾಗುತ್ತಿದೆ. ಹೀಗೆ ತಮ್ಮ ಗಡಿರೇಖೆ ಬದಲಿಸಿ ಬಿಡುವ ಹಾವುಗಳು ಕೆಲವೊಮ್ಮೆ ಸ್ವಸ್ಥಾನಕ್ಕೆ ಮರಳುತ್ತವೆ, ಮತ್ತೊಮ್ಮೆ ಮತ್ತೊಂದು ಹಾವಿನೊಂದಿಗೆ ಸೆಣಸಾಡಿ ಮರಣಹೊಂದುತ್ತವೆ ಎಂಬ ಮಾತಿದೆ.ಈ ಮಧ್ಯೆ ಪಶ್ಚಿಮಘಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸಹ ಇವುಗಳ ಗಡಿರೇಖೆಯನ್ನು ಅಳಿಸಿವೆ. ಇದರಿಂದಾಗಿ ಗ್ರಾಮಗಳ ಸಮೀಪ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿವೆ ಎಂಬ ದೂರು ಕೇಳಿ ಬರುತ್ತಿದೆ. ಈ ನಡುವೆ ಪಶ್ಚಿಮಘಟ್ಟವನ್ನು ಸೀಳಿಕೊಂಡ ಹೋಗಿರುವ ಮಂಗಳೂರು-ಹಾಸನ ರೈಲು ಮಾರ್ಗ ಸಹ ಕಾಳಿಂಗ ಸರ್ಪಗಳ ಸಾವಿಗೆ ಕಾರಣವಾಗುತ್ತಿದೆ. ವರ್ಷಕ್ಕೆ ಕನಿಷ್ಠ ಎರಡು ಕಾಳಿಂಗ ಸರ್ಪಗಳಾದರೂ ರೈಲಿಗೆ ಸಿಲುಕಿ ಸಾಯುತ್ತಿವೆ ಎಂದು ರೈಲ್ವೆಹಳಿಗಳ ಗಸ್ತುದಾರರು ಹೇಳುತ್ತಾರೆ.
----* ಹೇಳಿಕೆ-1ಸ್ಥಳೀಯ ಅರಣ್ಯ ಇಲಾಖೆಯಲ್ಲಿ ಉರಗ ತಜ್ಞರಿಲ್ಲ. ಸಾರ್ವಜನಿಕರು ಉರಗಗಳನ್ನು ಸೆರೆಹಿಡಿಯುವ ವೇಳೆ ರೇಕಾರ್ಡ್‌ಗಳನ್ನು ಸೆರೆಹಿಡಿದ ಪ್ರದೇಶ ಹಾಗೂ ಹಾವುಗಳನ್ನು ಬಿಟ್ಟ ಪ್ರದೇಶಗಳನ್ನು ನೋಂದಾಯಿಸಬೇಕಿದೆ, ಇದನ್ನು ಉರಗ ತಜ್ಞರು ಮಾಡುತ್ತಿಲ್ಲ.
ಹೇಮಂತ್ ಕುಮಾರ್, ವಲಯ ಅರಣ್ಯಾಧಿಕಾರಿ. ಸಕಲೇಶಪುರ* ಹೇಳಿಕೆ-2
ಕಳೆದೊಂದು ವಾರದಿಂದ ಗ್ರಾಮದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪದಿಂದಾಗಿ ಜನರು ತೋಟ, ಗದ್ದೆಗಳಿಗೆ ತೆರಳಲು ಭಯಪಡುವಂತಹ ವಾತವರಣ ಸೃಷ್ಟಿಯಾಗಿದೆ.ರೋಷನ್, ಹರಗರಹಳ್ಳಿ ಗ್ರಾಮಸ್ಥ* ಹೇಳಿಕೆ-3
ಭಾರೀ ಗಾತ್ರದ ಕಾಳಿಂಗ ಸರ್ಪಗಳನ್ನು ಸೆರೆಹಿಡಿದು ಸಾಗಿಸುವುದೇ ಒಂದು ಸವಾಲಿನ ಕೆಲಸ, ಈ ಮಧ್ಯೆ ಅರಣ್ಯ ಇಲಾಖೆಯ ಕಿರಿಕಿರಿ. ಇದರಿಂದಾಗಿ ಕೆಲವೊಮ್ಮೆ ಕರೆ ಬಂದರೂ ಹೋಗುವುದಿಲ್ಲ.- ಸಗೀರ್, ಉರಗತಜ್ಞ