ಸಾಲ ವಸೂಲು ನೆಪದಲ್ಲಿ ಬೆದರಿಕೆ, ಕ್ರಿಮಿನಲ್‌ ಕೇಸ್‌ ಸಲ್ಲದು

KannadaprabhaNewsNetwork |  
Published : Oct 26, 2025, 02:00 AM IST
25ಕೆಡಿವಿಜಿ1-ಚನ್ನಗಿರಿ ತಾ. ಸಂಗಹಳ್ಳಿ ಗ್ರಾಮದ ರೈತ ಎಸ್.ಬಿ.ಅಶೋಕ, ಭೀರಪ್ಪ ಸಂಗಹಳ್ಳಿ, ನಾಗಣ್ಣ ಸುದ್ದಿಗೋಷ್ಟಿಯಲ್ಲಿ ಹಂಸತಾರಕಂ ವಿರುದ್ಧ ಆರೋಪ ಮಾಡಿ, ಅಳಲು ತೋಡಿಕೊಳ್ಳುತ್ತಿರುವುದು. | Kannada Prabha

ಸಾರಾಂಶ

ತನ್ನ ಮದುವೆಗೆ 2018ರಲ್ಲಿ ಪಡೆದಿದ್ದ ₹1 ಲಕ್ಷ ಸಾಲದ ಹಣ ಮರು ಪಾವತಿಸಿದ್ದರೂ ಭದ್ರತೆಗೆ ನೀಡಿದ್ದ ನನ್ನ ಬ್ಯಾಂಕ್ ಖಾತೆಯ ಖಾಲಿ ಚೆಕ್ ವಾಪಸ್ ನೀಡದೇ, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಸಲಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ತಮಗೆ ನ್ಯಾಯ ಕೊಡಿಸುವಂತೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಛಲವಾದಿ ಸಮಾಜದ ಬಡರೈತ ಎಸ್.ಬಿ.ಅಶೋಕ ಒತ್ತಾಯಿಸಿದ್ದಾರೆ.

- ಮದುವೆಗೆ ಪಡೆದಿದ್ದ ₹1 ಲಕ್ಷ ತೀರಿಸಿದ್ದರೂ ₹5 ಲಕ್ಷ ಕೊಡುವಂತೆ ಕಿರಿಕ್‌: ಬಡರೈತ ಎಸ್.ಬಿ. ಅಶೋಕ್‌ ಆರೋಪ

- ಕಾಗದ ಪತ್ರಗಳ ಕದಿಯಲು ಮನೆಗೆ ನುಗ್ಗಿದ್ದರೆಂದು ಕೆ.ಹಂಸತಾರಕಂ ನಾರಾಯಣ ಮೂರ್ತಿ ಸುಳ್ಳು: ಬೀರಪ್ಪ ಕಿಡಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ತನ್ನ ಮದುವೆಗೆ 2018ರಲ್ಲಿ ಪಡೆದಿದ್ದ ₹1 ಲಕ್ಷ ಸಾಲದ ಹಣ ಮರು ಪಾವತಿಸಿದ್ದರೂ ಭದ್ರತೆಗೆ ನೀಡಿದ್ದ ನನ್ನ ಬ್ಯಾಂಕ್ ಖಾತೆಯ ಖಾಲಿ ಚೆಕ್ ವಾಪಸ್ ನೀಡದೇ, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬೆದರಿಸಲಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ತಮಗೆ ನ್ಯಾಯ ಕೊಡಿಸುವಂತೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಛಲವಾದಿ ಸಮಾಜದ ಬಡರೈತ ಎಸ್.ಬಿ.ಅಶೋಕ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿರಡೋಣಿ ಗ್ರಾಮದ ಕೆ.ಹಂಸತಾರಕಂ ನಾರಾಯಣ ಮೂರ್ತಿ ಎಂಬವರ ಬಳಿ ನನ್ನ ಮದುವೆಗೆಂದು ಶೇ.2 ಬಡ್ಡಿಯಂತೆ ₹1 ಲಕ್ಷ ರು. ಸಾಲ ಪಡೆದಿದ್ದೆ. ಅದಕ್ಕೆ ಆಧಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪುಣ್ಯಸ್ಥಳ ಶಾಖೆಯ ಖಾಲಿ ಚೆಕ್‌ (ನಂ.528040) ಸಹಿ ಮಾಡಿಸಿಕೊಂಡು ಪಡೆದಿದ್ದರು ಎಂದರು.

ತಾನು, ಸಹೋದರ ಕುಲುಮೇನಹಳ್ಳಿ ಗ್ರಾಮದ ರಿ.ಸ.ನಂ.59ರ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿ, ಬತ್ತ ಬೆಳೆದಿದ್ದೆವು. ಬೆಳೆದ ಬತ್ತವನ್ನು ಬತ್ತದ ವ್ಯಾಪಾರಿ ಕೆ.ಹಂಸತಾರಕಂ ಅವರಿಗೆ 4 ಬೆಳೆಯ ಬತ್ತ ಮಾರಾಟ ಮಾಡಿ, ನಮಗೆ ನೀಡಿದ್ದ ₹1 ಲಕ್ಷ ಹಣ ಹೊಂದುವಂತೆ ಬತ್ತ ಹಾಗೂ ಉಳಿದ ₹70 ಸಾವಿರ ಸಾಲದ ಹಣವನ್ನು ತಮ್ಮ ತಂದೆ ಬಸವರಾಜಪ್ಪ, ತಾಯಿ ಮಂಜಮ್ಮ ಜೊತೆಗೆ ಹೋಗಿ ಕೆ.ಹಂಸತಾರಕಂ ನಾರಾಯಣ ಮೂರ್ತಿ ಅವರ ಸಂಪೂರ್ಣ ಸಾಲ ತೀರುವಳಿ ಮಾಡಿದ್ದೆವು ಎಂದು ತಿಳಿಸಿದರು.

ಪಡೆದ ಸಾಲ ಮರು ಪಾವತಿಸಿದ್ದರಿಂದ ಈ ಹಿಂದೆ ಸಹಿ ಮಾಡಿ, ನೀಡಿದ್ದ ಬ್ಯಾಂಕ್‌ನ ಖಾಲಿ ಚೆಕ್ ಕೇಳಲು ಹೋಗಿದ್ದೆವು. ಆಗ ಕೆ.ಹಂಸತಾರಕಂ ತಮ್ಮ ಮನೆ ಮೇಲೆ 2 ತಿಂಗಳ ಹಿಂದೆ ಆದಾಯ ತೆರಿಗೆ ಇಲಾಖೆಯವರು ರೈಡ್ ಮಾಡಿದ್ದರು. ಹಾಗಾಗಿ ಮನೆಯಲ್ಲಿದ್ದ ಎಲ್ಲ ಖಾಲಿ ಚೆಕ್‌, ಪ್ರಾಮಿಸರಿ ನೋಟ್‌ಗಳನ್ನು ಮಗ ಸುಟ್ಟು ಹಾಕಿದ್ದಾನೆಂದು ನಮಗೆ ಹೇಳಿದ್ದರು. ಅವರ ಮಾತನ್ನು ನಂಬಿ ನನ್ನ ಕೆಲಸದಲ್ಲಿ ತೊಡಗಿದ್ದೆ. 2 ವರ್ಷಗಳ ನಂತರ ನನ್ನ ಬಳಿ ಬಂದ ಹಂಸತಾರಕಂ ನನ್ನ ಖಾತೆಗಳು ಆದಾಯ ತೆರಿಗೆ ಇಲಾಖೆಯವರು ರೈಡ್ ಮಾಡಿದ ದಿನದಿಂದ ಇದುವರೆಗೆ ಹಣ ವರ್ಗಾವಣೆ ಮಾಡದೇ, ಹಾಗೆ ನಿರ್ಬಂಧ (ಲಾಕ್) ಆಗಿವೆ. ನನ್ನ ಬಳಿ ₹5 ಲಕ್ಷಕ್ಕೂ ಅಧಿಕ ಹಣವಿದೆ. ಅದನ್ನು ನಿನ್ನ ಖಾತೆಗೆ ಹಾಕುವೆ. ಅದನ್ನು ಬಿಡಿಸಿಕೊಡುವಂತೆ ಹೇಳಿದ್ದರಿಂದ ಹಾಗೆಯೇ ಮಾಡಿದ್ದಾಗಿ ಎಸ್‌.ಬಿ. ಅಶೋಕ್‌ ತಿಳಿಸಿದರು.

ಹಂಸತಾರಕಂ ಮಾತಿಗೆ ಕಿವಿಗೊಟ್ಟು 24.1.2022ರಂದು ₹1.25 ಲಕ್ಷ ಹಾಕಿದ್ದರಿಂದ ನನ್ನ ಚೆಕ್‌ ಮೂಲಕ ಅದೇ ದಿನ, ನಂತರ 25.1.2022ರಂದು ₹50 ಸಾವಿರ, ಅದೇ ದಿನ ₹25 ಸಾವಿರ ಹೀಗೆ ಪೂರ್ತಿ ಹಣ ಬಿಡಿಸಿಕೊಟ್ಟಿದ್ದೇನೆ. ಹಂಸತಾರಕಂ ಕೋರಿಕೆ ಮೇರೆಗೆ 27.1.2022ರಂದು ₹2.30 ಲಕ್ಷವನ್ನು ಖಾತೆಗೆ ಹಾಕಿದ್ದರು. ತಾವೇ ಕರೆದುಕೊಂಡು ಹೋಗಿ, ಬ್ಯಾಂಕ್‌ನಲ್ಲಿ ಚೆಕ್ ಮೂಲಕ 28.1.2022ರಂದು 50 ಸಾವಿರ, ಅದೇ ದಿನ 50 ಸಾವಿರ ಚೆಕ್ ಮೂಲಕ ಬಿಡಿಸಿಕೊಟ್ಟಿದ್ದೇನೆ. 28.1.2022ರಂದು ಮತ್ತೆ ₹50 ಸಾವಿರ, ₹50 ಸಾವಿರ, 20.1.2022ರಂದು ₹30 ಸಾವಿರ ಹೀಗೆ ಸಂಪೂರ್ಣ ಹಣ ಬಿಡಿಸಿಕೊಟ್ಟಿದ್ದೇನೆ. ಮತ್ತೆ 12.7.2022ರಂದು ನನ್ನ ಖಾತೆಗೆ ₹1.5 ಲಕ್ಷ ಹಾಕಿದ್ದರು. ಆಗಲೂ ₹50 ಸಾವಿರ, 13.7.2022ರಂದು ₹50 ಸಾವಿರ, 14.7.2022ರಂದು ₹50 ಸಾವಿರ ಬಿಡಿಸಿಕೊಟ್ಟು ಮನೆಗೆ ವಾಪಸಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಹಣದ ವ್ಯವಹಾರ ಇಲ್ಲ ಎಂದು ಅಶೋಕ್‌ ಸ್ಪಷ್ಟಪಡಿಸಿದರು.

ಆದರೆ, 2018ರಲ್ಲಿ ನನ್ನ ವಿವಾಹಕ್ಕೆ ಪಡೆದಿದ್ದ ₹1 ಲಕ್ಷ ಸಾಲಕ್ಕೆ ಭದ್ರತೆಯಾಗಿ ನೀಡಿದ್ದ ನನ್ನ ಚೆಕ್ ವಾಪಸ್‌ ಕೊಡದಿದ್ದನ್ನು ಕೇಳಿದರೂ ಮಗ ಸುಟ್ಟು ಹಾಕಿದ್ದೇನೆಂದಿದ್ದ ಹಂಸತಾರಕಂ ಅದೇ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಜರುಪಡಿಸಿ, ಹಿಂಬರಹ ಪಡೆದು, ನನಗೆ 18.11.2024ರಂದು ನೋಂದಾಯಿತ ಅಂಚೆ ಮೂಲಕ ₹5.05 ಲಕ್ಷ ನೀಡಬೇಕೆಂದೂ, ಹಣ ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ನಾವು ಹಂಸ ತಾರಕಂ ಅವರಿಗೆ ಯಾವುದೇ ಹಣ ಕೊಡುವುದಿಲ್ಲ. ಆದರೂ, ಕೇಸ್ ದಾಖಲಿಸುವುದಾಗಿ ₹1 ಲಕ್ಷ ಸಾಲ ತೀರುವಳಿ ಮಾಡಿದ 8 ವರ್ಷಗಳ ನಂತರ ಸುಳ್ಳಿನಿಂದ ಕೂಡಿದ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಜೀವನದಲ್ಲೇ ನಾನು ಒಮ್ಮೆಗೆ ₹5 ಲಕ್ಷ ಹಣ ನೋಡಿಲ್ಲ. ಈಗ ಅಷ್ಟೊಂದು ಸಾಲ ಮಾಡಿದ್ದೇನೆಂದರೆ ಇಡೀ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎಂದು ಅಶೋಕ ಕಣ್ಣೀರಿಟ್ಟರು.

ಕಾಗದ ಪತ್ರ ಕಳ್ಳರೆಂದು ಸುಳ್ಳು ಆರೋಪ:

ನೊಂದ ಮತ್ತೋರ್ವ ರೈತ, ಕುರುಬ ಸಮುದಾಯದ ಬೀರಪ್ಪ ಸಂಗಹಳ್ಳಿ ಮಾತನಾಡಿ, ನಾವು ಸಾಲ ತೀರಿಸಿದ್ದರೂ ನಮ್ಮ ಕಾಗದ ಪತ್ರ ಮರಳಿಸುತ್ತಿಲ್ಲ. ಸಾಲ ತೀರಿಸಿದ್ದರೂ ತೀರಿಲ್ಲವೆಂದು ಹಂಸತಾರಕಂ ಹೇಳುತ್ತಿದ್ದಾರೆ. ಇದೇ ಹಂಸತಾರಕಂರ ಮನೆಯಲ್ಲಿ ಈಚೆಗೆ ಕಳ್ಳರು ಮನೆಗೆ ನುಗ್ಗಿ ಸುಲಿಗೆ ಮಾಡಿದ್ದರು. ಆಗ ವಿನಾಕಾರಣ ನಾವು ಪತ್ರ ಕದಿಯಲು ಬಂದಿದ್ದೇವೆಂದು ನಮ್ಮನ್ನು ಪೊಲೀಸರು ಠಾಣೆಗೆ ಕರೆದೊಯ್ಯುವಂತೆ ಮಾಡಿದ್ದರು. ನಾವು ನಮ್ಮೆಲ್ಲಾ ಬೆರಳಚ್ಚು ನೀಡಿ ಬಂದಿದ್ದೆವು. ಆದರೆ, ಕಳ್ಳರು ಸಿಕ್ಕಿಬಿದ್ದ ಕಾರಣ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದು ಸಾಬೀತಾಯಿತು. ಖಾಲಿ ಬಾಂಡ್ ಪೇಪರ್‌ ಮೇಲೆ ನಮ್ಮ ಸಹಿ ಮಾಡಿಸಿಕೊಂಡಿದ್ದಾರೆ. 12 ಗುಂಟೆ ಜಮೀನೇ ನನಗೆ ಆಧಾರ. ಹೆಂಡತಿ, ಇಬ್ಬರು ಮಕ್ಕಳನ್ನು ಸಾಕಬೇಕು. ಆದರೆ, ಹಂಸತಾರಕಂ ವರ್ತನೆ ನಮ್ಮಲ್ಲಿ ಭಯ ಹುಟ್ಟುಹಾಕಿದೆ ಎಂದು ಅಳಲು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಅಶೋಕ್‌ ತಾಯಿ ಮಂಜುಳಮ್ಮ, ಮಕ್ಕಳಾದ ಚಾರಿತ್ರ್ಯ, ವೈಶ್ವಿಕ್‌, ಎಸ್.ಬಿ.ಅಶೋಕ, ನಾಗಣ್ಣ ಇತರರು ಇದ್ದರು.

- - -

(ಬಾಕ್ಸ್‌) * 15-20 ಮಂದಿಗೆ ಮೋಸ ರೈತ ಅಶೋಕ್‌ ಪತ್ನಿ ಕಾವ್ಯ ಮಾತನಾಡಿ, ಹೃದಯಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಇರುವ ತನ್ನ ಪತಿ ಅಶೋಕ ಅವರಿಗೆ ಕೆ.ಹಂಸತಾರಕಂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಒಂದುವೇಳೆ ಪತಿಗೆ ಏನಾದರೂ ಅನಾಹುತವಾದರೆ ಕೆ.ಹಂಸತಾರಕಂ ನೇರ ಹೊಣೆ. ಇದೇ ರೀತಿ ಸುಮಾರು 15-20 ಬಡ, ಅನಕ್ಷರಸ್ಥ ರೈತರು, ದಲಿತರು, ಶೋಷಿತರು, ಹಿಂದುಳಿದ ವರ್ಗದ ರೈತ ಕುಟುಂಬಗಳಿಗೆ ಹಂಸತಾರಕಂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

- - -

-25ಕೆಡಿವಿಜಿ1.ಜೆಪಿಜಿ:

ಚನ್ನಗಿರಿ ತಾಲೂಕಿನ ಸಂಗಹಳ್ಳಿ ಗ್ರಾಮದ ರೈತ ಎಸ್.ಬಿ.ಅಶೋಕ, ಭೀರಪ್ಪ ಸಂಗಹಳ್ಳಿ, ನಾಗಣ್ಣ ಅವರು ಹಂಸತಾರಕಂ ಧನದಾಹಿತ್ವದ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ