ಭಟ್ಕಳ:
ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ನಂಬಿಸಿ ಪರಾರಿಯಾಗಿದ್ದ ಆರೋಪಿಗಳ ಜಾಡು ಹಿಡಿದ ಭಟ್ಕಳ ಪೊಲೀಸರು ಪ್ರಕರಣ ನಡೆದ ಒಂದೇ ವಾರದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಮೂಲದ ಬಾಲಾಜಿ ಯಾನೆ ಗಣೇಶನ್, ತ್ಯಾಗರಾಜನ್, ಮಿಯಾನಾಥನ ಬಂಧಿತರು. ಮೂಲ ಆರೋಪಿ ಉದಯಕುಮಾರ್ ರೇಂಗರಾಜು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಹಿನ್ನೆಲೆ:ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸ್‌ನಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ (ಗ್ಲೋಬಲ್ ಇಂಟರ್‌ನ್ಯಾಷನಲ್) ಎಂಬ ಹೆಸರಿನಲ್ಲಿ ಗೃಹೋಪಯೋಗಿ ಮಳಿಗೆ ಆರಂಭಿಸಿದ್ದರು. ಸ್ಥಳೀಯ ಆರು ಮಂದಿ ಯುವಕ-ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾರುಕಟ್ಟೆ ದರಕ್ಕಿಂತ ಅರ್ಧ ಬೆಲೆಗೆ ವಸ್ತು ನೀಡುವುದಾಗಿ ಪ್ರಚಾರ ನಡೆಸಿ ಜನರನ್ನು ಸೆಳೆದಿದ್ದ. ಜನರಿಂದ ಮೊದಲು ಹಣ ಪಡೆದು ಕೆಲವು ದಿನಗಳ ಬಳಿಕ ವಸ್ತುಗಳನ್ನು ನೀಡುವದಾಗಿ ನಂಬಿಸಿದ್ದ. ಆರಂಭದಲ್ಲಿ ಬಂದ ಕೆಲ ಗ್ರಾಹಕರಿಗೆ ಅರ್ದ ಬೆಲೆ ಪಡೆದು ನಾಲ್ಕೇ ದಿನಗಳಲ್ಲಿ ಟಿವಿ, ಫ್ರಿಜ್, ಎಸಿ ಸೇರಿದಂತೆ ಕೆಲವು ವಸ್ತುಗಳನ್ನು ನೀಡಿಜನರ ನಂಬಿಕೆ ಗಳಿಸಿದ್ದರು. ನಂತರ ಮನೆಗೆ ಮನೆಗೆ ತೆರಳಿ ಭಿತ್ತಿಪತ್ರ ಹಂಚಿ ಆಕರ್ಷಕ ಆಫರ್‌ಗಳ ಪ್ರಚಾರ ನಡೆಸಿದ. ಅಲ್ಪಾವಧಿಯಲ್ಲಿ ನೂರಾರು ಜನರು ಬಲೆಗೆ ಸಿಲುಕಿದ್ದು, ಕೆಲವರು ಲಕ್ಷ ರೂ.ಗಳ ತನಕ ಮುಂಗಡ ಹಣ ನೀಡಿ ವಸ್ತು ಬುಕ್ ಮಾಡಿಕೊಂಡು ದಿನಾಂಕ ಪಡೆದು ತೆರಳಿದ್ದರು. ಆದರೆ ನ.5ರಂದು ಮೋಸಹೋಗಿದ್ದ ಗೊತ್ತಾದ ಬಳಿಕ ಜನರು ನಗರಠಾಣೆಗೆ ದೂರು ನೀಡಿದ್ದರು.
ಪತ್ತೆಗೆ ಬಲೆ ಬೀಸಿದ ಭಟ್ಕಳ ಪೊಲೀಸರು:ನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಯ ಜಾಡು ಹಿಡಿದ ಪೊಲೀಸರು ತಮಿಳು ನಾಡು, ಮೈಸೂರು ಸೇರಿದಂತೆ ವಿವಿಧೆಡೆ ತನಿಖೆ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ನ.12ರಂದು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳ ಜಾಡು ಹಿಡಿದು ಬಂಧಿಸಿದ್ದಾರೆ. ಕಾರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.