ಮಹಿಳೆ ಕೊಲೆ ಪ್ರಕರಣ: ಮೂವರು ಬಂಧನ

KannadaprabhaNewsNetwork | Published : Nov 6, 2024 12:30 AM

ಸಾರಾಂಶ

ಪೆಟ್ರೋಲ್‌ ಸುರಿದು ಪತ್ನಿಯನ್ನೇ ಸುಟ್ಟ ಪತಿ, ಮೈದುನ, ಗೆಳೆಯನ ಹೆಡಮುರಿ ಕಟ್ಟಿದ ಖಾಕಿ. ಹೆಂಡತಿಯನ್ನು ಭೀಕರವಾಗಿ ಕೊಂದು ಬೀಚ್‌ನಲ್ಲಿ ವಿಹಾರ ಮಾಡಿಕೊಂಡಿದ್ದ ಪತಿ. ಅ. 31 ರಂದು ಇಟಗಾ (ಕೆ) ಗ್ರಾಮದ ಹೊಲದಲ್ಲಿ ಮಹಿಳೆ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ. ಕೊಲೆಯಾದ ಮಹಿಳೆ ಯಾರೆಂದು ಗುರುತು ಸಿಗದಂತೆ ಸುಟ್ಟು ಹಾಕಿದ್ದ ಹಂತಕರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಇಟಗಾ (ಕೆ) ಗ್ರಾಮದಲ್ಲಿ ಅಪರಿಚಿತ ಹೆಣ್ಣು ಮಗಳ ಶವ ಪತ್ತೆಯಾದ ಪ್ರಕರಣ ಭೇದಿಸಿದ ಕಲಬುರಗಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಂತಕರ ಹೆಡೆಮುರಿ ಕಟ್ಟಿದ್ದಾರೆ.

ಕಳೆದ ಅ.31ರಂದು ಇಟಗಾ (ಕೆ) ಗ್ರಾಮದ ಹೊಲದಲ್ಲಿ ಮಹಿಳೆ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರಿಗೆ ಆರಂಭದಲ್ಲಿ ಸುಟ್ಟ ಸ್ಥಿತಿಲ್ಲಿ ಕಂಡಿದ್ದ ಮಹಿಳೆ ಶವದ ಗುರುತು ಪತ್ತೆ ಹಚ್ಚುವುದೂ ಸವಾಲಿನ ಕೆಲಸವಾಗಿತ್ತು. ಆದರೆ ವೈಜ್ಞಾನಿಕ ವಿಧಿ ವಿಧಾನ ಬಳಸಿ ಮಹಿಳೆ ಪತ್ತೆ ಹಚ್ಚಿರುವ ಕಲಬುರಗಿ ಪೊಲೀಸರು ಪ್ರಕರಣ ಪತ್ತೆಯಾದ 4 ದಿನದಲ್ಲೇ ಹಂತಕರ ಹೆಡೆಮುರಿ ಕಟ್ಟಿದ್ದಾರೆಂದು ಕಲಬುರಗಿ ನಗರ ಪೊಲೀಸ್‌ ಆಯುಕ್ತ ಡಾ. ಶರಣಪ್ಪ ಢಗೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶರಣಪ್ಪ, ಈ ಕೊಲೆ ಪ್ರಕರಣ ಸವಾಲಿನದಾಗಿತ್ತು. ಆದಾಗ್ಯೂ ವೈಜ್ಞಾನಿಕವಾಗಿ ನಾವು ಮುಂದಡಿ ಇಟ್ಟು ಜ್ಯೋತಿ (29) ಎಂಬುವವರೇ ಬರ್ಬರವಾಗಿ ಕೊಲೆಯಾದ ಗೃಹಿಣಿ ಎಂಬುದನ್ನು ಪತ್ತೆ ಹಚ್ಚಿದ್ದೇವೆ. ಇವರ ಪತಿ, ಮೈದುನ ಹಾಗೂ ಅವರ ಗೆಳೆಯ ಸೇರಿಕೊಂಡು ಈ ಭೀಕರ ಕೊಲೆ ಮಾಡಿರೋದನ್ನೂ ಪತ್ತೆ ಹಚ್ಚಿದ್ದೇವೆಂದು ಪ್ರಕರಣದ ಮಾಹಿತಿ ನೀಡಿದ್ದಾರೆ.

ಜೀವನಾಂಶ, ಆಸ್ತಿ ಪಾಲು ಕೇಳಿದಕ್ಕೆ ಭೀಕರ ಕೊಲೆ:

ಕಿರುಕುಳ, ಜೀವನಾಂಶ ಮತ್ತು ಆಸ್ತಿಯಲ್ಲಿ ಪಾಲು ಕೇಳುತ್ತಿದ್ದ ಕಾರಣಕ್ಕೆ ಜ್ಯೋತಿ ಅವರನ್ನು ಕೊಲೆ ಮಾಡಬೇಕಾಯಿತು ಎಂದು ವಿಚಾರಣೆ ವೇಳೆ ಪತಿ ಮಂಜುನಾಥ ಚಿನಮಳ್ಳಿ ಪೊಲೀಸರಿಗೆ ತಿಳಿಸಿದ್ದಾನೆಂದು ಗೊತ್ತಾಗಿದೆ.

ಉಸಿರು ಗಟ್ಟಿಸಿ ಸಾಯಿಸಿ ಸುಟ್ಟರು:

ಮಂಜುನಾಥ ಈತ ತನ್ನ ಸಹೋದರ ಹಾಗೂ ಗೆಳೆಯ ಟ್ರ್ಯಾಕ್ಟರ್‌ ಚಾಲಕರ ಜೊತೆ ಕೂಡಿಕೊಂಡು ಉಪಾಯವಾಗಿ ಜ್ಯೋತಿಯನ್ನು ಮನೆಯಿಂದ ಕಾರಿನಲ್ಲಿ ಕರೆದೊಯ್ದು ದಾರಿಯಲ್ಲೇ ಉಸಿರು ಗಟ್ಟಿಸಿ ಸಾಯಿಸಿದ್ದಾರೆ. ಸಾಕ್ಷಿ ನಾಶ ಮಾಡಲು ಶವವನ್ನು ಇಟಗಾ ಬಲಿ ನಿರ್ಜನ ಪ್ರದೇಶದ ಹೊಲದಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಇವೆಲ್ಲ ಸಂಗತಿಗಳನ್ನು ಪೊಲೀಸರು ಸಾಕ್ಷಿ ಸಮೇತ ಪತ್ತೆ ಹಚ್ಚಿದ್ದಾರೆ. ಇದು ಸವಾಲಿನ ಪ್ರಕರಣವಾದರೂ ತುಂಬ ಜಾಣತನದಿಂದ ತನಿಖೆ ಮಾಡಿ ಹಂತಕರನ್ನು ಬಂಧಿಸಲಾಗಿದೆ ಎಂದು ಕಮೀಶ್ನರ್‌ ಡಾ. ಶರಣಪ್ಪ ಹೇಳಿದ್ದಾರೆ. ಅ.31 ರಂದು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೀಚ್‌ನಲ್ಲಿ ತಲೆ ಮರೆಸಿಕೊಡಿದ್ದ ಹಂತಕರು!

ಪ್ರಕರಣದಲ್ಲಿ ಕೊಲೆಗೀಡಾದ ಜ್ಯೋತಿ ಇವರ ಪತಿರಾಯ ಖಣದಾಳ ಮೂಲದ ಟ್ರ್ಯಾಕ್ಟರ್‌ ಚಾಲಕ ಮಂಜುನಾಥ ಚಿನಮಳ್ಳಿ (41), ಈತನ ತಮ್ಮ ಪ್ರಶಾಂತ ಚಿನಮಳ್ಳಿ (35) ಹಾಗೂ ಇವರಿಬ್ಬರ ಗೆಳೆಯ ಟ್ರ್ಯಾಕ್ಟರ್‌ ಚಾಲಕ ವಿಜಯಕುಮಾರ್‌ ಬೆಣ್ಣೂರ (27) ಎಂದು ಗುರುತಿಸಲಾಗಿದೆ.

ಖಣದಾಳ ಮೂಲದ ಈ ಮೂವರು ಟ್ರ್ಯಾಕ್ಟರ್‌ ಚಾಲಕರು ಸೇರಿ ಜ್ಯೋತಿಯನ್ನು ಬರ್ಬರವಾಗಿ ಕೊಲೆ ಮಾಡಿರೋದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆರೋಪಿಗಳ ವಿಚಾರಣೆ ನೆಸಿರುವ ಪೊಲೀಸರ ಮುಂದೆ ಇವರು ಮೂವರು ಹಂತಕರು ತಾವೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಮೂವರೂ ಹಂತಕರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗಣಪತಿಪುಳಿ ಬೀಚ್‌ನ ಗಣೇಶಕೃಪ ಲಾಡ್ಜ್‌ನಲ್ಲಿ ವಾಸವಾಗಿದ್ದರು. ಈ ಮೂವರನ್ನು ಅಲ್ಲಿಯೇ ಪೊಲೀಸರು ಬಂಧಿಸಿದ್ದಾರೆ.

Share this article