ದೇವರ ವಿಗ್ರಹ ಕದಿಯುತ್ತಿದ್ದ ಪ.ಬಂಗಾಳದ ಮೂವರ ಸೆರೆ

KannadaprabhaNewsNetwork |  
Published : Sep 03, 2025, 02:00 AM IST
PROPERTY PARADE | Kannada Prabha

ಸಾರಾಂಶ

ಆರೋಪಿಗಳಿಂದ ಜಪ್ತಿ ಮಾಡಲಾದ ವಿಗ್ರಹಗಳನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇವಾಲಯಗಳ ಬಾಗಿಲು ಮುರಿದು ವಿಗ್ರಹಗಳು, ಹುಂಡಿ ಹಣ ಕಳವು ಮಾಡುತ್ತಿದ್ದ ಹೊರ ರಾಜ್ಯದ ಮೂವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹6.50 ಲಕ್ಷ ಮೌಲ್ಯದ 12 ದೇವರ ವಿಗ್ರಹಗಳು, ಪೂಜಾ ಸಾಮಗ್ರಿ, 1 ಆಟೋರಿಕ್ಷಾ ಜಪ್ತಿ ಮಾಡಲಾಗಿದೆ.

ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್‌ ರಭಿ (22), ಈತನ ಸಹೋದರ ಮೊಹಮ್ಮದ್‌ ಯೂನಸ್‌ (20) ಹಾಗೂ ಮೊಹಮ್ಮದ್‌ ಬಾಬು (20) ಬಂಧಿತರು.

ಆರೋಪಿಗಳು ಜು.29ರ ರಾತ್ರಿ ಕಾಡುಗೋಡಿ ವ್ಯಾಪ್ತಿಯ ಖಾಜಿಸೊನ್ನೇನಹಳ್ಳಿ ಗ್ರಾಮದ ಮುನೇಶ್ವರಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ದೇವರ ವಿಗ್ರಹಗಳು, ಹುಂಡಿ ಹಣ ಹಾಗೂ ಗಂಟೆಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದೇವಸ್ಥಾನದ ಅಚರ್ಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಜನ ಸಂಚಾರ ಕಡಿಮೆ ಇರುವ ಪ್ರದೇಶ ಟಾರ್ಗೆಟ್‌:

ಆರೋಪಿಗಳು ಕಳೆದ ನಾಲ್ಕೈದು ವರ್ಷಗಳಿಂದ ಕಾಡುಗೋಡಿಯ ಶೀಗೆಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮೂವರು ಸಹ ನಗರದ ವಿವಿಧೆಡೆ ತಳ್ಳುವ ಗಾಡಿಯಲ್ಲಿ ಕಸ ಹಾಗೂ ಗುಜರಿ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಅಂತೆಯೇ ಜನದಟ್ಟಣೆ ಕಡಿಮೆ ಇರುವ ಪ್ರದೇಶಗಳ ದೇವಸ್ಥಾನಗಳನ್ನು ಟಾರ್ಗೆಟ್‌ ಮಾಡಿ ಕಳವು ಮಾಡುತ್ತಿದ್ದರು. ಕಟ್ಟಿಂಗ್ ಪ್ಲೇಯರ್‌, ಆಕ್ಸೆಲ್‌ ಬ್ಲೇಡ್, ಕಬ್ಬಿಣದ ರಾಡ್ ಬಳಸಿಕೊಂಡು ದೇವಾಲಯಗಳ ಬಾಗಿಲು ಮುರಿದು ಪಂಚಲೋಹ, ಹಿತ್ತಾಳೆಯ ದೇವರ ವಿಗ್ರಹಗಳು, ಪೂಜಾ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಗುಜರಿ ವ್ಯಾಪಾರಿಯಿಂದ 12 ದೇವರ ವಿಗ್ರಹಗಳು, ಪೂಜಾ ಸಾಮಾಗ್ರಿ ಹಾಗೂ ದಿಣ್ಣೂರು ಪ್ಲಾಂಟೇಷನ್‌ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಆಟೋ ರಿಕ್ಷಾವನ್ನು ಜಪ್ತಿ ಮಾಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಿ ವ್ಯಾಪಾರಿಗೆ

ವಿಗ್ರಹಗಳ ಮಾರಾಟ

ಆರೋಪಿಗಳು ತಾವು ಕದ್ದ ದೇವರ ವಿಗ್ರಹಗಳನ್ನು ಈರಂಡಹಳ್ಳಿಯ ಗುಜರಿ ವ್ಯಾಪಾರಿಯೊಬ್ಬನಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಆಟೋ ಕಳವು, ಹೊಸಕೋಟೆ ಠಾಣೆಯ ವ್ಯಾಪ್ತಿಯ ದೇವಸ್ಥಾನ ಕಳವು, ಕಾಡುಗೋಡಿ ಠಾಣೆ ವ್ಯಾಪ್ತಿಯ ಎರಡು ದೇವಸ್ಥಾನಗಳ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 4 ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ