ಮೂವರ ಶವ ಪತ್ತೆ, ಇನ್ನಿಬ್ಬರಿಗೆ ಶೋಧ

KannadaprabhaNewsNetwork | Published : Jul 4, 2024 1:03 AM

ಸಾರಾಂಶ

ನದಿ ತೀರದಲ್ಲಿ ಇಸ್ಪಿಟ್ ಆಡಲು ಹೋಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದರೆಂಬ ಕಾರಣಕ್ಕೆ ಅವರಿಂದ ತಪ್ಪಿಸಿಕೊಂಡು ತೆಪ್ಪದಲ್ಲಿ ಹೋಗುತ್ತಿದ್ದಾಗ ಎಂಟು ಜನರಿದ್ದ ತೆಪ್ಪ ಮಂಗಳವಾರ ಮಗುಚಿ ನದಿಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಮತ್ತಿಬ್ಬರ ಮೃತ ದೇಹ ಪತ್ತೆಯಾಗಿದೆ. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು ಕಣ್ಮರೆಯಾದ ಇನ್ನಿಬ್ಬರ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ

ನದಿ ತೀರದಲ್ಲಿ ಇಸ್ಪಿಟ್‌ ಆಡಲು ಹೋಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದರೆಂಬ ಕಾರಣಕ್ಕೆ ಅವರಿಂದ ತಪ್ಪಿಸಿಕೊಂಡು ತೆಪ್ಪದಲ್ಲಿ ಹೋಗುತ್ತಿದ್ದಾಗ ಎಂಟು ಜನರಿದ್ದ ತೆಪ್ಪ ಮಂಗಳವಾರ ಮಗುಚಿ ನದಿಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಮತ್ತಿಬ್ಬರ ಮೃತ ದೇಹ ಪತ್ತೆಯಾಗಿದೆ. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದ್ದು ಕಣ್ಮರೆಯಾದ ಇನ್ನಿಬ್ಬರ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

ಮಂಗಳವಾರ ಕೊಲ್ಹಾರದ ಪುಂಡಲೀಕ ಮಲ್ಲಪ್ಪ ಯಂಕಂಚಿ (36) ಮೃತದೇಹ ಪತ್ತೆಯಾಗಿತ್ತು. ಬುಧವಾರ ಕೊಲ್ಹಾರದ ತೌಫೀಕ್ ಚೌಧರಿ(42), ದಶರಥ ಗೌಡರ ಸೂಳಿಬಾವಿ (66) ಎಂಬುವವರ ಮೃತದೇಹ ಪತ್ತೆಯಾಗಿವೆ. ಕಾಣೆಯಾದ ದಶರಥ ಗೌಡರ ಸೂಳಿಬಾವಿ, ರಫೀಕ್ ಬಾಂಬೆ ಅವರಿಗಾಗಿ ಶೋಭ ಕಾರ್ಯ ಮುಂದುವರಿದಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದೆ.

ಸಚಿವ ಶಿವಾನಂದ ಭೇಟಿ:

ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಕಾರ್ಯಾಚರಣೆ ಬಗ್ಗೆ ಎಸ್ಪಿ, ಡಿಸಿ ಅವರಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು, ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಈ ದುರ್ಘಟನೆ ನಡೆಯಬಾರದಿತ್ತು. ಮೇಲ್ನೋಟಕ್ಕೆ ಅವರು ಇಸ್ಪೀಟ್ ಆಡುವಾಗ ಪಿಎಸ್‌ಐ ರೇಡ್ ಮಾಡಿದ್ರು ಎನ್ನಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರಿಂದಲೂ ಮಾಹಿತಿ ಪಡೆಯುವೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಪರಿಹಾರದ ಬಗ್ಗೆ ಮಾಹಿತಿ ನೀಡುತ್ತೇನೆ. ಘಟನೆಯಲ್ಲಿ ಎರಡು ವರ್ಷನ್‌ ಇವೆ. ಇಸ್ಪೀಟ್ ಆಡುತ್ತಿದ್ದರು ಎನ್ನುವ ಮಾತುಗಳಿವೆ. ಜನರ ವರ್ಸನ್ ಬೇರೆ ಇದೆ. ಸರ್ಕಾರದಿಂದ ಪರಿಹಾರ ಕೊಡಲು ಬಂದ್ರೆ ಪರಿಹಾರ ಕೊಡ್ತೇವೆ. ಯಾವ ರೀತಿ ಸಹಾಯ ಮಾಡಲು ಸಾಧ್ಯ ಸಹಾಯ ಮಾಡುತ್ತೇನೆ. ಮೃತ ದೇಹಗಳು ಸಿಗುತ್ತವೆ. ಈಜು ಬರೋರು ಈಜಿ ಹೊರಗೆ ಬಂದಿದ್ದಾರೆ. ಈಜು ಬಾರದವರು ಸಿಕ್ಕಿಕೊಂಡಿದ್ದಾರೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್ (ಜೂಜು) ಹೆಚ್ಚಾಗಿದೆ ಎನ್ನುವ ಆರೋಪ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಣ್ಯರೇ ಗ್ಯಾಂಬ್ಲಿಂಗ್ ಆಡಿಸುತ್ತಾರೆ ಎನ್ನುವ ಮಾಹಿತಿ ಇದೆ. ಜನರು ಸಾಕ್ಷಿ ಸಮೇತ ಮಾಹಿತಿ ಕೊಡ್ತಿಲ್ಲ. ಈ ವಿಚಾರ ಐಜಿ, ಎಸ್ಪಿ ಜೊತೆಗೆ ಹಂಚಿಕೊಂಡಿದ್ದೇನೆ. ನಾನು ಸಹ ಐಜಿ ಅವರಿಗೆ ಮಾಹಿತಿ ಹಂಚಿಕೊಂಡಿದ್ದೇನೆ. ಎಷ್ಟೇ ಬಲಾಢ್ಯರಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಯಾರೇ ಆದರೂ ಜೂಜು ಆಡಿಸಬಾರದು. ಈ ಘಟನೆ ಸಮಾಜವೇ ತಲೆ ತಗ್ಗಿಸುವಂತದ್ದು ಎಂದು ನೊಂದು ನುಡಿದರು.

ಮೃತರ ಕುಟುಂಬಸ್ಥರಿಂದ ಪಿಎಸ್‌ಐ ವಿರುದ್ಧ ಗಂಭೀರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕುಟುಂಬಸ್ಥರು ದೂರು ನೀಡಿದರೆ ಪಿಎಸ್‌ಐ ವಿರುದ್ಧ ತನಿಖೆ ನಡೆಸಲಾಗುತ್ತದೆ. ದೂರು ನೀಡದೆ ಇದ್ದರೂ ಪಿಎಸ್‌ಐ ವಿರುದ್ಧ ತನಿಖೆಗೆ ನಡೆಸುತ್ತೇವೆ ಎಂದ ಅವರು, ಪೊಲೀಸರು ಜೂಜು ಆಡಿಸುವಾಗ ಹಿಡಿಯದೇ ಇದ್ದರೆ ಸಣ್ಣ ಪುಟ್ಟ ಜನ ಜೂಜಲ್ಲಿ ಭಾಗಿಯಾಗುತ್ತಾರೆ. ತನಿಖೆ ಬಳಿಕ ಸತ್ಯ ಬಯಲಿಗೆ ಬರಲಿದೆ. ಇಡೀ ಘಟನೆ ಸಿಎಂ ಗಮನಕ್ಕೆ ತಂದಿದ್ದೇನೆ. ಡಿಸಿ, ಎಸ್ಪಿ ತನಿಖೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಕಾರ್ಯಾಚರಣೆ ಸ್ಥಗಿತ:

ಬುಧವಾರ ಬೆಳಗ್ಗೆ ಎರಡು ಮೃತದೇಹಗಳು ದೊರೆತಿವೆ. ಆದರೆ, ಇನ್ನುಳಿದ ಎರಡು ಶವಗಳಿಗಾಗಿ ಆರು ಬೋಟ್‌, ಈಜು ತಜ್ಞರು, ಸ್ಥಳೀಯ ಮೀನುಗಾರರು ಹಾಗೂ ತೆಪ್ಪಗಳಿಗೆ ಮೀನು ಹಿಡಿಯುವ ಕೊಕ್ಕೆಗಳನ್ನು ಹಾಕಿ ಕಾರ್ಯಾಚರಣೆ ನಡೆಸಿದರೂ ಶವಗಳು ದೊರೆಯಲಿಲ್ಲ. ಕಾರ್ಯಾಚರಣೆ ವೇಳೆ ವಿಪರೀತ ಗಾಳಿ ಬೀಸುತ್ತಿರುವ ಕಾರಣಕ್ಕೆ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ರಭಸವಾದ ಗಾಳಿ ಬೀಸಿದಾಗ ಕಾರ್ಯಾಚರಣೆ ಬೋಟ್‌ಗಳು ಅಲುಗಾಡಿ ಕಾರ್ಯಾಚರಣೆಗೆ ಅಡ್ಡಿ ಉಂಟಾಯಿತು. ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಶವ ಸಿಗದ ಕಾರಣಕ್ಕೆ ಕಾರ್ಯಾಚರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.

---

ಕುಟುಂಬದ ಆಕ್ರಂದನ:

ತೆಪ್ಪ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮೃತರ ಕುಟುಂಬಸ್ಥರು ಪೊಲೀಸರು ನನ್ನ ಮಗನ ಹಿಡಿಯ್ಯಾಕ ಹೋಗದೇ ಇದ್ದಿದ್ರ ನನ್ನ ಮಗ ಸಾಯ್ತಾ ಇರಲಿಲ್ಲ ಎಂದು ರೋದಿಸುತ್ತಿದ್ದ ದೃಶ್ಯಗಳು ಮನ ಕಲಕುವಂತಿದ್ದವು.

---

ಸತ್ತಿದ್ದಾನೆ ಎಂದು ತಿಳಿದಿದ್ದ ಪೊಲೀಸರು!

ಮಂಗಳವಾರ ನಡೆದ ಈ ಘಟನೆಯಲ್ಲಿ ಎಂಟು ಜನರು ಇದ್ದರು. ಎಂಟು ಜನರಲ್ಲಿ ತೆಪ್ಪದಲ್ಲಿ ಬರುವಾಗ ತೆಪ್ಪ ಮಗುಚಿ ಆರು ಜನರು ನೀರು ಪಾಲಾಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ ಎಂದು ಪೊಲೀಸರು ತಿಳಿದುಕೊಂಡಿದ್ದರು. ಆದರೆ, ಬಸೀರ್ ಹೊನವಾಡ ಎಂಬಾತ ಬದುಕಿದ್ದಾನೆ ಎಂದು ಬುಧವಾರ ತಿಳಿಯಿತು. ಈ ಬಗ್ಗೆ ಬಸೀರ್‌ ಮಾತನಾಡಿದ್ದು, ನಾನು ಇಸ್ಪೀಟ್ ಆಡೋಕೆ ಹೋಗಿರಲಿಲ್ಲ. ಅಲ್ಲಿ ನನ್ನ ಜಮೀನಿದೆ. ಆಗಾಗ ಅಲ್ಲಿ ಇಸ್ಪೀಟ್ ಗ್ಯಾಂಗ್ ಬಂದು ಜೂಜಾಡುತ್ತಿತ್ತು. ಹೀಗಾಗಿ ನೋಡಲು ಹೋಗಿದ್ದೆ ಎಂದು ಮಾಹಿತಿ ನೀಡಿದ್ದಾನೆ.

----

ರಕ್ಷಣೆಗೆ ಮುಂದಾದವರ ಮೊಬೈಲ್‌

ತೆಗೆದುಕೊಂಡ ಹೋದ ಪೊಲೀಸರು

ಮಂಗಳವಾರ ಸಂಜೆ 4:30ರ ವೇಳೆಗೆ ಡಾಬಾದಲ್ಲಿ ಊಟಕ್ಕೆ ಕುಳಿತಿದ್ದೆವು. ಏಳೆಂಟು ಜನ ಪೊಲೀಸರ ತಂಡ ನದಿಯತ್ತ ತೆರಳುತ್ತಿತ್ತು.

ನಮ್ಮ ಜೊತೆಗಿದ್ದ ಓರ್ವ ಗೆಳೆಯನನ್ನು ಪೊಲೀಸರು ಕರೆದುಕೊಂಡು ಹೋದರು. ನಾವು ಕೂಡ ಅವರನ್ನು ಹಿಂಬಾಲಿಸಿದೆವು. ನದಿ ತಟದಲ್ಲಿ ಏಳೆಂಟು ಜನರ ಗುಂಪು ಇಸ್ಪೀಟ್ ಆಟವಾಡುತ್ತಿತ್ತು. ಪೊಲೀಸರನ್ನು ಕಂಡೊಡನೆ ಅವರೆಲ್ಲ ನದಿಯತ್ತ ಓಡಿದರು. ತೆಪ್ಪದಲ್ಲಿ ಕುಳಿತು ನದಿಯ ಆಚೆ ದಡದತ್ತ ತೆಪ್ಪದಲ್ಲಿ‌ ಹೊರಟರು. ನದಿ ಮಧ್ಯಭಾಗದಲ್ಲಿ ತೆಪ್ಪ ಮಗುಚಿತು. ತೆಪ್ಪದಲ್ಲಿ ಇದ್ದವರೆಲ್ಲ ನದಿಯ ಪಾಲಾಗಿದ್ದರು. ಅವರನ್ನು ರಕ್ಷಿಸಿ ಎಂದು ಪೊಲೀಸರು ನಮಗೆ ಬೇಡಿಕೊಂಡರು. ನಮ್ಮ ಬಳಿ ಇದ್ದ ಸಾವಿರಾರು ರುಪಾಯಿ ಬೆಲೆಯ ಮೊಬೈಲ್‌ಗಳನ್ನು ಪೊಲೀಸರಿಗೆ ಕೊಟ್ಟು, ತೆಪ್ಪದಲ್ಲಿ‌ ನದಿಯಲ್ಲಿ ಹೋದೆವು. ಅಲ್ಲಿ ನಮಗೆ ಓರ್ವ ಮಾತ್ರ ಕಾಣಿಸಿದ. ಆತನನ್ನು ತೆಪ್ಪದಲ್ಲಿ ಕುಳಿತು ನದಿಯ ತಟಕ್ಕೆ ಒತ್ತಿಕೊಂಡು ಹೋದೆವು. ಆಚೆ ದಡದಲ್ಲಿದ್ದ ಇಬ್ಬರು ಬಂದು ಆತನನ್ನು ಎಳೆದುಕೊಂಡು ರಕ್ಷಣೆ ಮಾಡಿದರು. ನದಿಯಲ್ಲಿ ಬಿದ್ದಿದ್ದ ಇನ್ನಿತರರು ನಮಗೆ ಕಾಣಿಸಲಿಲ್ಲ. ಇಷ್ಟರ ಮಧ್ಯೆ ಪೊಲೀಸರು ಅಲ್ಲಿಂದ ಓಡಿ ಹೋದರು. ನಮ್ಮ ಮೊಬೈಲ್ ಸಹ ಪೊಲೀಸರ ಬಳಿ ಇವೆ.

ಪೊಲೀಸ್ ಸಿಬ್ಬಂದಿ ಮೊಬೈಲ್‌ಗಳು ಸಹ ಸ್ವಿಚ್ ಆಫ್ ಆಗಿವೆ. ನಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಪೊಲೀಸರ ಮನವಿಯ ಮೇರೆಗೆ ನದಿಯಲ್ಲಿ ಮುಳುಗುತ್ತಿರುವ ರಕ್ಷಣೆಗೆ ನಾವು ಹೋಗಿದ್ದೆವು. ಈಗ ನಮ್ಮ ಮೊಬೈಲ್‌ಗಳನ್ನು ವಾಪಸ್ ನೀಡಬೇಕೆಂದು ರಕ್ಷಣೆ ಮುಂದಾದ ಶಿವಾನಂದ ಹುದ್ದಾದ ಹಾಗೂ ಶ್ರೀಧರ ಅಂಬಿಗೇರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

---

₹3 ಲಕ್ಷ ವೈಯಕ್ತಿಕ ಪರಿಹಾರ ನೀಡುವೆ: ಸಚಿವರು

ಮೃತಪಟ್ಟ ಮೂವರ ಹಾಗೂ ಕಾಣೆಯಾದರ ಕುಟುಂಬದವರಿಗೆ ₹3 ಲಕ್ಷ ವೈಯಕ್ತಿಕ ಪರಿಹಾರ ನೀಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ತೆಪ್ಪ ದುರಂತದಲ್ಲಿ ಸಾವನಪ್ಪಿದ ಪುಂಡಲೀಕ ಯಂಕಂಚಿ, ತೌಫಿಕ ಚೌದರಿ, ಮಹಿಬೂಬ ವಾಲಿಕಾರ ಹಾಗೂ ಕಾಣೆಯಾದ ದಶರಥ ಗೌಡರ ಸೂಳಿಬಾವಿ, ರಫೀಕ್ ಬಾಂಬೆ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ನಾನು ವೈಯಕ್ತಿಕವಾಗಿ ₹3 ಲಕ್ಷ ಪರಿಹಾರ ನೀಡುತ್ತೇನೆ. ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ ಸೇರಿದಂತೆ ಅನೇಕರು ಇದ್ದರು.

Share this article