ಎಂಎಡಿಬಿಯಲ್ಲಿ ಸರ್ಕಾರಕ್ಕೆ ಮೀಸಲಾಗಿರುವ ಹಣದಲ್ಲಿ ಐತಿಹಾಸಿಕ ರಾಮೇಶ್ವರ ದೇವಸ್ಥಾನದಿಂದ ನಡುಗಡ್ಡೆಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣದ ಸಲುವಾಗಿ ಸಲ್ಲಿಸಿರುವ ಪ್ರಸ್ತಾವನೆಗೆ ಸಿಎಂ ಡಿ.ಕೆ.ಶಿವಕುಮಾರ್ ಅನುಮೋದನೆ ದೊರೆತಿದೆ. ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಸಮೀಪ ತುಂಗಾನದಿಯಲ್ಲಿರುವ ನಡುಗಡ್ಡೆ ಜೋಗಿಕುತ್ರಿಗೆ ತೂಗು ಸೇತುವೆ ನಿರ್ಮಾಣದ ಸಲುವಾಗಿ ಎಂಎಡಿಬಿ ವತಿಯಿಂದ ₹3.30 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಂಎಡಿಬಿಯಲ್ಲಿ ಸರ್ಕಾರಕ್ಕೆ ಮೀಸಲಾಗಿರುವ ಹಣದಲ್ಲಿ ಐತಿಹಾಸಿಕ ರಾಮೇಶ್ವರ ದೇವಸ್ಥಾನದಿಂದ ನಡುಗಡ್ಡೆಗೆ ಸಂಪರ್ಕ ಕಲ್ಪಿಸಲು ತೂಗು ಸೇತುವೆ ನಿರ್ಮಾಣದ ಸಲುವಾಗಿ ಸಲ್ಲಿಸಿರುವ ಪ್ರಸ್ತಾವನೆಗೆ ಸಿಎಂ ಡಿ.ಕೆ.ಶಿವಕುಮಾರ್ ಅನುಮೋದನೆ ದೊರೆತಿದೆ. ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.
ಎಂಎಡಿಬಿ ವತಿಯಿಂದ ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಯ ರೋಗಿಗಳ ಪಾಲಕರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣದ ಸಲುವಾಗಿ ₹40 ಲಕ್ಷ , ಸಣ್ಣ ಸಂಕಗಳು, ಬಸ್ಟ್ಯಾಂಡ್, ರಸ್ತೆ ನಿರ್ಮಾಣದ ಸಲುವಾಗಿ ಒಟ್ಟು ₹8.51 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ಆಸಕ್ತಿ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಟೂರಿಸಂಗೆ ಉತ್ತಮ ಅವಕಾಶ ಇದ್ದರೂ ಈವರೆಗೆ ಆ ಬಗ್ಗೆ ಪ್ರಸ್ತಾವನೆ ನಡೆದಿಲ್ಲಾ. ರಾಜ್ಯದಲ್ಲಿ ಹಾಸನ ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಪ್ರಖ್ಯಾತ ಪೌರಾಣಿಕ ಮತ್ತು ಐತಿಹಾಸಿಕ ತಾಣಗಳಿವೆ. ಈ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಸಿಎಂ ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿ ತಾಲೂಕಿಗೂ ಭೇಟಿ ನೀಡುವ ಸಾಧ್ಯತೆ ಇದ್ದು ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರ ಕೋರಬೇಕಿದೆ ಎಂದೂ ಹೇಳಿದರು.
ವಿದ್ಯುತ್ ನಿಗಮದ ಖಾಸಗೀಕರಣದ ಬಗ್ಗೆ ಪ್ರಶ್ನಿಸಲು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಬಿಜೆಪಿಗೆ ನೈತಿಕ ಹಕ್ಕೇ ಇಲ್ಲಾ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ₹4 ಸಾವಿರ ಕೋಟಿ ಇದ್ದ ಅದಾನಿ ಸಂಪತ್ತು ₹12 ಲಕ್ಷ ಕೋಟಿಗೆ ಏರಿಕೆ ಆಗಿರುವುದು ಹೇಗೆ ಎಂದೂ ಪ್ರಶ್ನಿಸಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ನಿಲ್ಲುವುದಕ್ಕೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದೂ ಟೀಕಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಶಾಸಕರಾಗುವ ಅರ್ಹತೆಯೊಂದಿಗೆ ಆಸಕ್ತಿಯೂ ಇದೆ. ಈ ಬಗ್ಗೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಡಿ.ಎಸ್.ವಿಶ್ವನಾಥ ಶೆಟ್ಟಿ, ಎಚ್.ಬಿ.ಪದ್ಮನಾಭ್, ಟಿ.ಎಲ್.ಸುಂದರೇಶ್, ಕಿರಣ್ ಕಟ್ಟೆಹಕ್ಕಲು, ರಾಘವೇಂದ್ರ ಶೆಟ್ಟಿ ಬಿ.ಆರ್.ಜೀನಾ ವಿಕ್ಟರ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.