ಕಲಬುರಗಿ: ಹದಿನೆಂಟು ವರುಷಗಳ ನಂತರ ಕಲಬುರಗಿಯಲ್ಲಿ ಮಕ್ಕಳ ತಜ್ಞರ ರಾಜ್ಯ ಸಮ್ಮೇಳನಕ್ಕೆ ಮುಹೂರ್ತ ಕೂಡಿ ಬಂದಿದೆ. ಶುಕ್ರವಾರದಿಂದ 3 ದಿನಗಳ ಕಾಲ ಸಮ್ಮೇಳನಕ್ಕೆ ಕಲಬುರಗಿ ಆತಿಥ್ಯ ನೀಡಲಿದೆ ಎಂದು ಸಮ್ಮೇಳದ ಸಂಘಟನಾ ಉಸ್ತುವಾರಿಗಳಾದ ಖ್ಯಾತ ಮಕ್ಕಳ ತಜ್ಞ ಡಾ. ಶರಣಗೌಡ ಪಾಟೀಲ್, ಡಾ. ನಾಗನಾಥ ಗಚ್ಚಿನಮನಿ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 42ನೇ ರಾಜ್ಯ ಮಕ್ಕಳ ತಜ್ಞರ ಸಮ್ಮೇಳನಕ್ಕೆ ಕಲಬುರಗಿ ಸಜ್ಜಾಗಿದೆ. ರಾಂಪೂರೆ ವೈದ್ಯ ವಿದ್ಯಾಲಯದ ಮುಖ್ಯ ಸಹಯೋಗತ್ವದಲ್ಲಿ ಹಾಗೂ ಜಿಮ್ಸ್, ಇಎಸ್‌ಐಸಿ, ಕೆಬಿಎನ್ ವೈದ್ಯ ವಿದ್ಯಾಲಯಗಳ ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಸಮ್ಮೇಳನದಲ್ಲಿ ದೇಶ ಹಾಗೂ ವಿದೇಶಗಳಿಂದ 800ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ. ನೂರಕ್ಕೂ ಹೆಚ್ಚು ಪ್ರಬಂಧಗಳ ಮಂಡನೆಯಾಗಲಿದೆ. ಜೊತೆಗೆ ಮಕ್ಕಳ ರೋಗ-ರುಜಿನಗಳ ರಂಗದಲ್ಲಿನ ಇತ್ತೀಚಿಗಿನ ಬೆಳವಣಿಗೆಗಳನ್ನು ಚರ್ಚಿಸಲು 7 ಗೋಷ್ಠಿಗಳೂ ನಡೆಯಲಿವೆ ಎಂದರು. ಡಾ. ಉಪೇಂದ್ರ ಕೆ, ಡಾ. ಅಮಡೇಕರ್, ಡಾ. ತನು ಸಿಂಗಾನಿಯಾ, ಡಾ. ಧೀರಜ ಗುಪ್ತಾ, ಡಾ. ಬಾಲಸುಬ್ರಹ್ಮಣ್ಯಂ ಥಂಗವೇಲು, ಡಾ. ಸುಚಿತ್ರ ರಂಜೀತಾ ಚೆನ್ನೈ, ಎನ್‌ಎಂಸಿ ಅಧ್ಯಕ್ಷ ಡಾ. ಗಂಗಾಧರ ಬಿಎನ್, ಡಾ. ಬಸವರಾಜ, ಡಾ. ಪರಮೇಶ, ಡಾ. ಜಗದೀಶ ಚಿನ್ನಪ್ಪ, ಡಾ. ಎಸ್‌ಜಿ ಕಾಸಿ ಸೇರಿದಂತೆ ಹೆಸರಾಂತ ಮಕ್ಕಳ ತಜ್ಞರು ಸಮ್ಮೇಳನದ 3 ದಿನಗಳಲ್ಲಿ ಪಾಲ್ಗೊಂಡು ಚಿಂತನ- ಮಂಥನದಲ್ಲಿ ವಿಷಯ ಮಂಡಿಸಲಿದ್ದಾರೆ. ಕಕ ಭಾಗವನ್ನು ಕಾಡುತ್ತಿರುವ ಮಕ್ಕಳ ಅಪೌಷ್ಟಿಕತೆ, ನವಜಾತ ಶಿಶುಗಳ ಮರಣ ಪ್ರಮಾಣ ಕಮ್ಮಿ ಮಾಡುವ ಹಾಗೂ ಮಕ್ಕಳ ಆರೋಗ್ಯ ಸಂಬಂಧಿ ಅಗತ್ಯ ಕ್ರಮಗಳಿಗೆ ಈ ಭಾಗದ ವೈದ್ಯರನ್ನು ಅಣಿಗೊಳಿಸುವುದೇ ಸಮಾವೇಶದ ಉದ್ದೇಶವಾಗಿದೆ. ಎಂದು ಡಾ. ಶರಣಗೌಡ, ಡಾ. ಗಚ್ಚಿನಮನಿ ಹೇಳಿದರು. ಅನುವಂಶಿಕವಾಗಿ ಕಲ್ಯಾಣ ಭಾಗದ ಮಕ್ಕಳನ್ನು ಕಾಡುತ್ತಿದೆ ಥಲಸ್ಸೇಮಿಯಾ! ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳನ್ನು ಹೆಚ್ಚಿಗೆ ಥಲಸ್ಸೇಮಿಯಾ ರೋಗ ಕಾಡುತ್ತಿದೆ. ಸಂಬಂಧಿಗಳಲ್ಲಿಯೇ ಮದುವೆ ಆಗುವುದರಿಂದಲೇ ಅಂತಹ ದಂಪತಿಯಿಂದ ಜನಿಸುವ ಮಕ್ಕಳಿಗೆ ಬರುವ ಮಾರಕ ರೋಗ ಇದು. ರಕ್ತ ಹೀನತೆಯೇ ಈ ರೋಗದ ಲಕ್ಷಣ. ಮಕ್ಕಳು ಬದುಕಬೇಕಾದರೆ ಅವರಿಗೆ ಮಾಸಿಕ ರಕ್ತ ಪೂರಣ ಮಾಡಲೇಬೇಕು. ಇಂತಹ ರೋಗ ಈ ಭಾಗದಲ್ಲಿ ಹೆಚ್ಚಿದೆ. ಇದಕ್ಕೆ ಬಂಧುಗಳಲ್ಲಿ ನಡೆಯುವ ಹೆಚ್ಚಿನ ಮದುವೆಗಳೇ ಕಾರಣವೆಂದು ತಜ್ಞರಾದ ಡಾ. ಗಚ್ಚಿನಮನಿ ಹೇಳಿದರು. ಇದಲ್ಲದೆ ಅಪೌಷ್ಟಿಕತೆ, ಅನಿಮಿಯಾಗಳೂ ಮಕ್ಕಳನ್ನು ಹೆಚ್ಚು ಕಾಡುತ್ತಿವೆ. ಇವೆಲ್ಲವನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅವರು ತಿಳಿಸದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಉದ್ಘಾಟನೆ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಸಮ್ಮೇಳನವನ್ನು ಶುಕ್ರವಾರ ಸಂಜೆ 7 ಗಂಟೆಗೆ ಪಿಡಿಎ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಇವರೊಂದಿಗೆ ವೇದಿಕೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಗಂಗಾಧರ, ಭಾರತೀಯ ಮಕ್ಕಳ ತಜ್ಞರ ಸಂಘದ ಅಧ್ಯಕ್ಷ ಡಾ. ಉಪೇಂದ್ರ ಕಿಂಜವಾಡೇಕರ್, ಡಾ. ಜಿವಿ ಬಸವರಾಜ ಪಾಲ್ಗೊಳ್ಳುತ್ತಿದ್ದಾರೆ. ಹೈಕಶಿ ಸಂಸ್ಥೆಯ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ್, ಡಾ. ಎಸ್‌ಆರ್ ಹರವಾಳ್, ಡಾ. ಜಗನ್ನಾಥ ವಿಜಾಪೂರೆ, ಡಾ. ಎಸ್‌ಎಂ ಪಾಟೀಲ್ ಉಪಸ್ಥಿತರಿರುತ್ತಾರೆ.