ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನದಲ್ಲಿರುವ ಆಯಸ್ಕಾಂತೀಯ ಗುಣ ಎಲ್ಲರನ್ನೂ ಸೆಳೆಯುತ್ತದೆ. ಕರಾವಳಿಯ ಮಣ್ಣಿನ ಸತ್ವವನ್ನು ಸಂಪೂರ್ಣವಾಗಿ ಹೀರಿಕೊಂಡು ಯಕ್ಷಗಾನ ಬೆಳೆದಿದೆ ಎಂದು ಪುತ್ತೂರಿನ ಹಿರಿಯ ವಕೀಲ ಮಹೇಶ್ ಕಜೆ ಹೇಳಿದರು.ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ವತಿಯಿಂದ 32ನೇ ವರ್ಷದ ಮೂರು ದಿನಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವಕ್ಕೆ ಶುಕ್ರವಾರ ಎಸ್‌ಡಿಎಂ ಕಾಲೇಜು ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಯಕ್ಷಗಾನ ಪರಿಪೂರ್ಣ ಕಲೆಯಾಗಿದೆ. ಅಂತಃಸತ್ವದಿಂದ ಯಕ್ಷಗಾನ ಕಲೆ ಉಳಿದು ಬೆಳೆದಿದೆ. ಎಸ್‌ಡಿಎಂ ಕಾಲೇಜಿನಲ್ಲಿ ನಡೆಯುತ್ತಿರುವ ಯಕ್ಷೋತ್ಸವ ನಿತ್ಯೋತ್ಸವಾಗಲಿ ಎಂದರು.ಕಾಲೇಜು ಪ್ರಾಂಶುಪಾಲ ಡಾ.ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಯಕ್ಷೋತ್ಸವದ ನಿಕಟಪೂರ್ವ ಸಂಚಾಲಕ ನರೇಶ್ ಮಲ್ಲಿಗೆ ಮಾಡು ಹಾಗೂ ಪದೋನ್ನತಿ ಹೊಂದಿದ ರಂಜಿತ್ ನಾಯ್ಕ ಅವರನ್ನು ಗೌರವಿಸಲಾಯಿತು. ಯಕ್ಷೋತ್ಸವ ಸಂಚಾಲಕ ಪುಷ್ಪರಾಜ್ ಕೆ., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಭಾಸ್ಕರ್ ರೈ ಕುಕ್ಕುವಳ್ಳಿ ಇದ್ದರು.ಪ್ರಾಧ್ಯಾಪಕಿ ಡಾ. ಚಂದ್ರಲೇಖ ಸ್ವಾಗತಿಸಿದರು. ಯಕ್ಷೋತ್ಸವದ ಕಾರ್ಯನಿರ್ವಹಣಾ ಕಾರ್ಯದರ್ಶಿ ದಿಶಾ ವಂದಿಸಿದರು. ವಿದ್ಯಾರ್ಥಿನಿ ಪ್ರಮಯಿ ನಿರೂಪಿಸಿದರು.
ಫೆ.25ರಂದು ಸಮಾರೋಪ ಸಮಾರಂಭ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ ಫೆ.25ರಂದು ಸಂಜೆ 6.30ಕ್ಕೆ ಯಕ್ಷೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಆಡಳಿತಾತ್ಮಕ ಸದಸ್ಯ ಟಿ. ಶ್ಯಾಮ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು. ಯಕ್ಷೋತ್ಸವ ಸಂಚಾಲಕ ಪ್ರೊ.ಪುಷ್ಪರಾಜ್ ಕೆ. ಮಾತನಾಡಿ, ಎಸ್‌ಡಿಎಂ ಕಾನೂನು ಕಾಲೇಜು ಪ್ರಸ್ತುತ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಯಕ್ಷೋತ್ಸವಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ. ಭಾಗವಹಿಸುವ ಎಲ್ಲ ತಂಡಗಳಿಗೆ ಕಾಲೇಜಿನ ವತಿಯಿಂದಲೇ ಯಕ್ಷಗಾನ ಪ್ರಸಂಗಗಳನ್ನು ನೀಡಲಾಗಿದೆ. ಎರಡು ಸುತ್ತಿನಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲ ಸುತ್ತಿನಲ್ಲಿ ಎಲ್ಲ ತಂಡಗಳು ತಮಗೆ ನೀಡಲಾದ ಪ್ರಸಂಗಗಳನ್ನು ಪ್ರದರ್ಶಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಐದು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆಗೊಳಿಸಲಾಗುವುದು. ಈ ಐದು ತಂಡಗಳು ‘ಸುಧನ್ವ ಮೋಕ್ಷ’ ಎಂಬ ಪ್ರಸಂಗ ಪ್ರದರ್ಶನ ಮಾಡಬೇಕು ಎಂದರು.ಎಲ್ಲ ಹಿಮ್ಮೇಳ ಕಲಾವಿದರಿಗೆ ಅವಕಾಶ ನೀಡುವ ದೃಷ್ಟಿಯಿಂದ ಒಂದು ತಂಡದಲ್ಲಿ ಭಾಗವಹಿಸಿದ ಹಿಮ್ಮೇಳ ಕಲಾವಿದರು ಇತರ ತಂಡಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಯಕ್ಷಗಾನ ಹಿರಿಯ ಕಲಾವಿದರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಒಟ್ಟು 11 ಕಾಲೇಜು ತಂಡಗಳು ಭಾಗವಹಿಸಲಿದ್ದು, 17 ಪ್ರದರ್ಶನ ನಡೆಯಲಿದೆ. 110 ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಯಕ್ಷೋತ್ಸವ ವಿದ್ಯಾರ್ಥಿ ಪ್ರತಿನಿಧಿಗಳಾದ ಸುಹಾಸ್, ದಿಶಾ, ಶಿವತೇಜ ಐತಾಳ್ ಇದ್ದರು.