ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ । 23ರಿಂದ 25ರವರೆಗೆ ಆಯೋಜನೆ । ಬಡವರಿಗೆ ಹೆಚ್ಚು ಅನುಕೂಲ
ಕನ್ನಡಪ್ರಭ ವಾರ್ತೆ ಹಾಸನನಗರದ ಕೆ.ಆರ್.ಪುರಂ ಬಳಿ ಇರುವ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ಜೂ.೨೩ ರಿಂದ ೨೪ರ ವರೆಗೂ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಶಾಸಕ ಹಾಗೂ ಸಂಜೀವಿನಿ ಸಹಕಾರಿ ಆಸ್ಪತೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಚ್.ಪಿ.ಸ್ವರೂಪ್ ತಿಳಿಸಿದರು.
ನಗರದ ಸಂಜೀವಿನಿ ಆಸ್ಪತ್ರೆಯ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಕ್ರೋ ಲ್ಯಾಬ್ಸ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಹಾಸನ ಹೊಯ್ಸಳ, ರೋಟರಿ ಕ್ಲಬ್ ಹಾಸನ ಟೈಗರ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ, ಜೈಪುರ್ ಸಹರಾ ಗ್ರೂಪ್ ಆಫ್ ಇಂಡಸ್ಟ್ರೀಸ್, ಇನ್ ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್, ಯೂತ್ ಹ್ಯಾಂಡ್ ಫೌಂಡೇಷನ್, ಕನ್ನಡ ರಕ್ಷಣಾ ವೇದಿಕೆ, ಭಾರತ ಸೇವಾ ದಳ ಇವರ ಸಂಯುಕ್ತ ಆಶ್ರಯದಲ್ಲಿ ಜೂ.೨೩, ೨೪ ಹಾಗೂ ೨೫ ರಂದು ಮೂರು ದಿನಗಳ ಕಾಲ ಉಚಿತ ಕೃತಕ ಕೈ ಕಾಲು ಮುಂಗೈ ಬೃಹತ್ ಶಿಬಿರವನ್ನು ಏರ್ಪಡಿಸಲಾಗಿದೆ. ಮುಂಗೈ, ಕೃತಕ ಕಾಲುಗಳು, ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್ಸ್‌ಗಳು ಉಚಿತವಾಗಿ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೮೪೪೦೪೬೫೨೭, ೯೪೪೯೬೪೪೨೬೭ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಸಂಜೀವಿನಿಯ ನರ್ಸಿಂಗ್ ಕಾಲೇಜಿನಲ್ಲಿ ಮೈಕ್ರೋ ಲ್ಯಾಬ್ಸ್ ಕಂಪನಿಯು ಇದ್ದು, ಈ ಹಿಂದೆ ದಿವಂಗತ ಎಚ್.ಎಸ್.ಪ್ರಕಾಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲರ ಸಹಕಾರದಲ್ಲಿ ಹೆಲ್ತ್ ಕ್ಯಾಂಪ್ ಕೂಡ ಮಾಡಲಾಗಿತ್ತು. ಈ ಬಾರಿ ಮೈಕ್ರೋ ಲ್ಯಾಬ್ಸ್ ಸಹಕಾರದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತವಾಗಿ ಕೃತಕ ಕೈಕಾಲು ಜೋಡಣೆ ಮಾಡಲಾಗುತ್ತಿದೆ. ಈ ಅವಕಾಶವನ್ನು ಹಾಸನ ಜಿಲ್ಲೆಯ ಜನರು ಉಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸ್ವರೂಪ್ ಮನವಿ ಮಾಡಿದರು.
‘ರೋಟರಿಯವರು ನಮಗೆ ಆರು ಡಯಾಲೀಸಸ್ ಮಿಷನ್ ಅನ್ನು ಕೊಡುಗೆಯಾಗಿ ಕೊಟ್ಟಿದ್ದು, ಸಂಜೀವಿನಿ ಆಸ್ಪತ್ರೆಯಿಂದ ಕೃತಜ್ಞತೆ ತಿಳಿಸುತ್ತೇವೆ. ನಾವು ಡಯಾಲೀಸಸ್‌ಗೆ ವೆಚ್ಚವಾಗಿ ೧ ಸಾವಿರ ರು. ತೆಗೆದುಕೊಳ್ಳಲಾಗುತ್ತಿದ್ದು, ಯಾರಾದರೂ ಬಡವರು ಬಂದರೆ ಕಡಿಮೆ ಶುಲ್ಕ ಪಡೆಯುತ್ತೇವೆ’ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಗಣ್ಯರು, ವೈದ್ಯರು ಶಿಬಿರದ ಮಾಹಿತಿ ನೀಡಿದರು.
ಸಂಜೀವಿನಿ ಸಹಕಾರಿ ಆಸ್ಪತೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಉಪಾಧ್ಯಕ್ಷ ಎಚ್.ಆರ್. ಸುರೇಶ್, ಖಜಾಂಚಿ ಎಚ್.ಎನ್. ದೇವೇಗೌಡ, ಮಾಜಿ ಅಧ್ಯಕ್ಷ ಎಚ್.ಜೆ. ಗಣೇಶ್, ಕಾರ್ಯಾಧ್ಯಕ್ಷ ಡಿ.ಅರುಣ್ ಕುಮಾರ್, ಬಿ.ಜಿ.ಶ್ರೀಧರ್, ಬಿ.ಎನ್.ಜಯರಾಮ್, ಜಿ.ಎಸ್.ವಿಮಾಲ, ರೋಟರಿ ಕ್ಲಬ್ ಹಾಸನ ಹೊಯ್ಸಳದ ಮೋಹನ್, ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು, ಇತರರು ಹಾಜರಿದ್ದರು.