ಕೋಲಾಟ ಪರಂಪರೆ ಉಳಿಕೆಗೆ ಪಡುಕುಡೂರಿನ ಮೂರು ಕುಟುಂಬಗಳ ಪ್ರಯತ್ನ

KannadaprabhaNewsNetwork |  
Published : Dec 10, 2025, 02:00 AM IST
ಕೋಲಾಟ  | Kannada Prabha

ಸಾರಾಂಶ

ಪಡುಕುಡೂರಿನ ಹಿರಿಜೀವ ಕಾಳಿ ಅವರ ಕುಟುಂಬವು ಸುಮಾರು ಎರಡು ಶತಮಾನಗಳಿಂದ ಕೋಲಾಟದ ಪರಂಪರೆ ಉಳಿಸಿಕೊಂಡು ಬರುತ್ತಿದೆ. ಕಾಲದ ವೇಗಕ್ಕೆ ತಲೆಬಾಗದೆ, ತಲೆಮಾರಿನಿಂದ ತಲೆಮಾರಿಗೆ ಈ ಕಲೆ ಹಸ್ತಾಂತರಿಸುವ ಕೆಲಸವು ಇವರ ಮೂಲಕ ಇಂದು ಕೂಡ ಮುಂದುವರಿದಿದೆ.

ರಾಂ‌ ಅಜೆಕಾರು ಕಾರ್ಕಳ

ತುಳುನಾಡಿನ ವೈವಿಧ್ಯಮಯ ಜನಪದ ಪರಂಪರೆಯ ಮುಖ್ಯ ಅಂಗವಾಗಿದ್ದ ಕೋಲಾಟ ಇಂದು ಸಂಸ್ಕೃತಿಯ ಅಂಚಿನಲ್ಲೇ ನಿಂತಿದೆ. ಒಂದು ಕಾಲದಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಗ್ರಾಮಗಳಲ್ಲಿ ಮನೆಮನೆಗೆ ಪ್ರತಿಧ್ವನಿಯಾಗಿದ್ದ ಕೋಲಾಟದ ಹಾಡುಗಳು, ಪದ್ಯಗಳು, ಲಯಬದ್ಧ ಸಾಲುಗಳು ಇಂದು ಬಹುತೇಕ ನಾಪತ್ತೆಯಾಗುವ ಹಂತಕ್ಕೇರಿವೆ. ಕಾಲ ಬದಲಾವಣೆ, ಯುವ ತಲೆಮಾರಿನ ಗಮನ ಬೇರೆಡೆ ತಿರುಗಿರುವುದು, ಗ್ರಾಮೀಣ ಜೀವನದ ಬದಲಾವಣೆ ಇವನ್ನೆಲ್ಲ ದಾಟಿ ಈಗ ಸಂಪ್ರದಾಯ ಉಳಿದಿರುವುದು ಕೇವಲ ಮೂರು ಕುಟುಂಬಗಳು ಜೀವಂತವಾಗಿಟ್ಟುಕೊಂಡಿರುವ ಶ್ರಮದಿಂದ ಮಾತ್ರ. ಈ ಕುಟುಂಬಗಳಿರುವುದು ಹೆಬ್ರಿ ತಾಲೂಕಿನ ಪಡುಕುಡೂರಿನಲ್ಲಿ .ಕಂಬಳದಂತೆ ಶತಮಾನಗಳಿಂದ ಆಚರಿಸಲಾಗುತ್ತಿರುವ ಪ್ರಮುಖ ಸಂಪ್ರದಾಯಗಳಿಗೆ ಕೋಲಾಟ ಊರಿನ ಸೌಹಾರ್ದ ಮತ್ತು ಸಾಂಸ್ಕೃತಿಕ ಬಾಂಧವ್ಯಕ್ಕೆ ಸೇತುವೆಯಾಗಿತ್ತು. ವಿಶೇಷವಾಗಿ ಕೊಡಮಣಿತ್ತಾಯ ಕಂಬಳದ ಸಮಯದಲ್ಲಿ ಕೋಲಾಟದ ನಿರಂತರ ಹಾಡು, ಅದರ ಲಯಬದ್ಧ ಹೆಜ್ಜೆ ಮತ್ತು ಪರಂಪರಾತ್ಮಕ ರೂಪವು ಪಡುಕುಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಒಂದು ಜೀವಂತ ಉತ್ಸವದಂತೆ ಕಾಣಿಸುತ್ತಿತ್ತು.

200 ವರ್ಷಗಳ ಇತಿಹಾಸ: ಪಡುಕುಡೂರಿನ ಹಿರಿಜೀವ ಕಾಳಿ ಅವರ ಕುಟುಂಬವು ಸುಮಾರು ಎರಡು ಶತಮಾನಗಳಿಂದ ಕೋಲಾಟದ ಪರಂಪರೆ ಉಳಿಸಿಕೊಂಡು ಬರುತ್ತಿದೆ. ಕಾಲದ ವೇಗಕ್ಕೆ ತಲೆಬಾಗದೆ, ತಲೆಮಾರಿನಿಂದ ತಲೆಮಾರಿಗೆ ಈ ಕಲೆ ಹಸ್ತಾಂತರಿಸುವ ಕೆಲಸವು ಇವರ ಮೂಲಕ ಇಂದು ಕೂಡ ಮುಂದುವರಿದಿದೆ. ಕಾಳಿ ಅವರೊಂದಿಗೆ ಕುಟುಂಬದ ಮಹಿಳೆಯರಾದ ಶೋಭಕ್ಕ, ಸುಗಂಧಿ, ಗುಲಾಬಿ, ಬೊಮ್ಮಿ, ಬೇಬಿ ಎಲ್ಲರೂ ಸೇರಿ ಕೋಲಾಟದ ಹಾಡುಗಳನ್ನು ಜೀವಂತಗೊಳಿಸುತ್ತಿದ್ದಾರೆ. ಇವರ ತಂಡವು ಹಾಡಿನೊಂದಿಗೆ ಆಟವಾಡಿ, ಕೋಲಾಟದ ನೈಜ ಪರಂಪರಾ ರೂಪ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.ಕೊಡಮಣಿತ್ತಾಯ ಕಂಬಳದ ವಾರ ಬಂದರೂ ಸಾಕು ಕೋಲಾಟದ ತಂಡ ಪಡುಕುಡೂರಿನಿಂದ ತಮ್ಮ ಸಂಪ್ರದಾಯದ ಮೆರವಣಿಗೆ ಆರಂಭಿಸುತ್ತದೆ. ಮುನಿಯಾಲು, ಎಳಗೋಳಿ ಸೂರಿ ಮಣ್ಣು, ಪಡುಕುಡೂರು ದೊಡ್ಡ ಮನೆ, ಪಟ್ಲೆರ್ ಮನೆ, ಪೊಸಟ ಸೇರಿದಂತೆ ಅನೇಕ ಮನೆ ಹಾಗೂ ಗುತ್ತುಮನೆಗಳನ್ನು ಕಾಲ್ನಡಿಗೆಯಲ್ಲೇ ಸಂದರ್ಶಿಸುತ್ತಾರೆ. ಪ್ರತಿ ಮನೆಗೆ ಬಂದಾಗ ಹಾಡಿನ ಸದ್ದು, ಕೋಲಾಟದ ಲಯ, ಗಜ್ಜೆಗಳ ಧ್ವನಿ ಊರನೂರು ಮನೆಯಲ್ಲಿ ಮರುಉತ್ಸಾಹ ಉಂಟುಮಾಡುತ್ತದೆ. ‘ಕೋಲಾಟದ ಹಾಡಿನ ಪ್ರತಿಧ್ವನಿಯಿಂದ ಊರು ಜೀವಂತವಾಗುತ್ತದೆ’ ಎನ್ನುವುದು ಸ್ಥಳೀಯರ ಮಾತು.ಈಗ ಉಳಿದಿರುವ ಪರಂಪರೆಕೋಲಾಟದ ಬಳಿಕ ಮನೆ ಮಾಲೀಕರು ಸಂಪ್ರದಾಯದಂತೆ ಅಕ್ಕಿ ಬತ್ತ, ತೆಂಗು, ಅಡಕೆ, ಹಣ, ವೀಳ್ಯದೆಲೆ ನೀಡುವುದು ಇಂದಿಗೂ ಉಳಿದಿರುವ ರೂಢಿ. ಈ ಸಂಪ್ರದಾಯದ ಮೂಲಕ ಊರಿನ ಬಾಂಧವ್ಯ, ಸಹಕಾರ, ಸಮೂಹ ಬದುಕಿನ ಅನುಬಂಧಗಳು ಶಕ್ತಿಯಾಗುತ್ತವೆ.

ಕಟ್ಟುನಿಟ್ಟಿನ ನಿಯಮಗಳ ಪಾಠ: ಕಾಳಿ ಕುಟುಂಬವು ಸಂಪ್ರದಾಯವು ಕೇವಲ ಹಾಡು ಆಟವಲ್ಲ, ಅದು ಶ್ರದ್ಧೆಯ ವಿಷಯ ಕೂಡ ಎಂಬುದನ್ನು ಅಚ್ಚುಕಟ್ಟಾಗಿ ಮೆರೆಯುತ್ತದೆ. ಇದಲ್ಲದೇ ಅವರು ಪಾಲಿಸುತ್ತಿರುವ ಕೆಲವು ಶತಮಾನಗಳಿಂದ ಬಂದ ನಿಯಮಗಳು ಇಂದಿಗೂ ಅಚರಿಸುತ್ತಾರೆ. ಅಕ್ಕಿ ಭತ್ತವನ್ನು ಕೈಯಲ್ಲಿ ಹಿಡಿಯಬಾರದು, ಯಾವುದೇ ಮನೆಗೆ ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ, ಗಾಡಿ ಅಥವಾ ಎರಡು ಚಕ್ರ ವಾಹನ ಬಳಸದೆ, ಸಂಪೂರ್ಣ ಕಾಲ್ನಡಿಗೆಯಲ್ಲೇ ಸಂಚಾರ, ಸೂತಕ ಇರುವ ಮನೆಗಳ ಸಮೀಪ ಮಾತನಾಡದೇ ಗೌರವ ತೋರಿಸುವುದು, ಪ್ರತಿನಿತ್ಯ ಸರಾಸರಿ 10 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಂಚಾರ, ಕೋಲಾಟದ ಕೋಲುಗಳನ್ನು ತುಳಸಿ ಕಟ್ಟೆಯ ಬಳಿಯಲ್ಲಿ ದೀಪವಿಟ್ಟು, ಸುಣ್ಣಬೊಟ್ಟು ಹಾಕಿ, ತೆಂಗಿನೆಣ್ಣೆ ಹಚ್ಚಿ ಪೂಜಿಸುವುದು ಸಂಪ್ರದಾಯ.

ಕಂಬಳದ ದಿನ ಪೂಜಿಸಿದ ಕೋಲುಗಳನ್ನು ಮನೆಯ ಪುಣ್ಯದ ಸ್ಥಳದಲ್ಲಿ ವರ್ಷಪೂರ್ತಿ ಇರಿಸಲಾಗುತ್ತದೆ. ಮುಂದಿನ ಕಂಬಳದ ಸಂದರ್ಭದಲ್ಲಿ ಮರುಪೂಜೆ ಮೂಲಕ ಅವುಗಳನ್ನು ಪುನಃ ಬಳಕೆಗೊಳಿಸಲಾಗುತ್ತದೆ.

ತುಳುನಾಡಿನ ಜನಪದ ಸಾಹಿತ್ಯದಲ್ಲಿ ಪ್ರತಿ ಸಮುದಾಯಕ್ಕೂ ತಮಗನುಗುಣವಾದ ಕೋಲಾಟದ ಹಾಡುಗಳಿವೆ. ನಾಗ, ಕಾಡ್ಯ, ದೇವಿ, ದೈವ, ಗುತ್ತಿನ ಮನೆ ಪ್ರತಿ ಸಮೂಹಕ್ಕೆ ಅವರದೇ ವಿಶೇಷ ಪದ್ಯಗಳು. ಗುತ್ತಿನ ಮನೆಗಳಲ್ಲಿ ದೇವತೆಗಳಿಗೆ ನಡೆಯುವ ಪೂಜಾ ವಿಧಿವಿಧಾನದ ಸಂದರ್ಭದಲ್ಲಿ, ಅದರ ಪರಂಪರೆಯ ಹಾಡುಗಳನ್ನು ಹಾಡುವುದು ಇಲ್ಲಿ ವಿಶೇಷ.

ಕುಟುಂಬಗಳೆ ಆಧಾರ:

ಒಂದು ಕಾಲದಲ್ಲಿ ಊರು ತಿಂಗಳು, ಹಬ್ಬಗಳು, ಮೆರವಣಿಗೆಗಳು ಎಲ್ಲೆಡೆ ಕೇಳಿಸುತಿದ್ದ ಕೋಲಾಟದ ಹಾಡುಗಳು ಇಂದು ಮೂರು ಮನೆಗಳಲ್ಲಿ ಮಾತ್ರ ಶಕ್ತಿ ಉಳಿಸಿಕೊಂಡಿವೆ. ತರಬೇತಿ, ಆಸಕ್ತಿ ಮತ್ತು ಕಾಲದ ಕೊರತೆ ಇವೆಲ್ಲವು ಸೇರಿ ಸಂಪ್ರದಾಯ ನಿಧಾನವಾಗಿ ನಶಿಸುತ್ತಿರುವುದು ಚಿಂತಾಜನಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ