ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಉಪವಾಸ ನಿರತ ಮೂವರು ರೈತರು ಅಸ್ವಸ್ಥ

KannadaprabhaNewsNetwork |  
Published : Sep 23, 2026, 01:15 AM IST
6.ಉಪವಾಸ ನಿರತ ರೈತರು ಅಸ್ವಸ್ಥಗೊಂಡಿರುವುದು | Kannada Prabha

ಸಾರಾಂಶ

ಬಿಡದಿ- ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿ ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಅಡ್ಡ ನಿಲ್ಲಿಸಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಪೈಕಿ ಮೂವರು ರೈತರು ಅಸ್ವಸ್ಥಗೊಂಡರು. ತಕ್ಷಣ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ರೈತರು ಹೋರಾಟ ಮುಂದುವರೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಟೌನ್‌ಶಿಪ್‌ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಉಪವಾಸನಿರತ ಮೂವರು ರೈತರು ಅಸ್ವಸ್ಥರಾಗಿದ್ದಾರೆ.

ಕಂಚುಗಾರನಹಳ್ಳಿ ಗ್ರಾಮದ ವೀರೇಶ್ , ಚಿಕ್ಕಬೈರಮಂಗಲ ಗ್ರಾಮದ ನಾಗೇಶ್ ಕುಮಾರ್ ಹಾಗೂ ಕೆಂಪಶೆಟ್ಟಿದೊಡ್ಡಿ ಗ್ರಾಮದ ಕೃಷ್ಣಪ್ಪ ಅಸ್ವಸ್ಥಗೊಂಡಿದ್ದು, ಮೂವರನ್ನು ಬೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಬಿಡದಿ- ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿ ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಅಡ್ಡ ನಿಲ್ಲಿಸಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈ ಪೈಕಿ ಮೂವರು ರೈತರು ಅಸ್ವಸ್ಥಗೊಂಡರು. ತಕ್ಷಣ ಆ್ಯಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ರೈತರು ಹೋರಾಟ ಮುಂದುವರೆಸಿದರು.

ಪ್ರತಿಭಟನಾ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪನೆ:

ರೈತರು ಪ್ರತಿಭಟನಾ ಸ್ಥಳದಲ್ಲಿ ವಿಘ್ನ ವಿನಾಶಕ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಗಣಪತಿಯನ್ನು ಹಸಿರು ಪೇಟಾ ಹಾಗೂ ಹಸಿರು ಶಾಲುಗಳಿಂದ ಸಿಂಗರಿಸಿ, ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ರೈತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಪ್ರಾರ್ಥಿಸಲಾಯಿತು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಅಧಿವೇಶನ ಕರೆದಿರುವ ಮುಖ್ಯಮಂತ್ರಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಆದರೆ 18 ತಿಂಗಳಿಂದ ನಡೆಯುತ್ತಿರುವ ನಮ್ಮ ಹೋರಾಟ ಅವರಿಗೆ ಕಾಣುತ್ತಿಲ್ಲವೇ? ಸಮಯದ ಕೊರತೆಯಿದ್ದರೆ ಸಂಬಂಧಪಟ್ಟ ಸಚಿವರನ್ನು ಸ್ಥಳಕ್ಕೆ ಕಳುಹಿಸಿ, ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಲಿ ಎಂದು ರೈತರು ಒತ್ತಾಯಿಸಿದರು.

ಸರ್ಕಾರ ಸ್ಪಂದಿಸುವವರೆಗೂ ಹೋರಾಟ:

ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧದ ರೈತರ ಹೋರಾಟ 563ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ ಎಂದು ಬೈರಮಂಗಲದ ರೈತ ಪುರುಷೋತ್ತಮ ಆರೋಪಿಸಿದರು.

ಸರ್ಕಾರದಿಂದ ಕೇವಲ ಭರವಸೆಗಳು ಮಾತ್ರ ಸಿಗುತ್ತಿವೆ. ಮುಖ್ಯಮಂತ್ರಿ ಅವರು ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವುದಿಲ್ಲ ಹಾಗೂ ರೈತರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ, ಈವರೆಗೂ ಸಮಿತಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಅಥವಾ ಸಚಿವರು ರೈತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿಲ್ಲ ಎಂದು ದೂರಿದರು.

ಸರ್ಕಾರದಿಂದ ಸೂಕ್ತ ಸ್ಪಷ್ಟನೆ ದೊರೆಯದ ಹಿನ್ನೆಲೆಯಲ್ಲಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಪುರುಷೋತ್ತಮ ಎಚ್ಚರಿಸಿದರು.

ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಜೀವನ ಹಾಗೂ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಈ ವಿಚಾರದಲ್ಲಿ ಸತ್ಯಾಸತ್ಯತೆ ಏನೆಂಬುದು ಸ್ಪಷ್ಟವಾಗಬೇಕು. ತಪ್ಪು ರೈತರದ್ದೋ ಅಥವಾ ಸರ್ಕಾರದ್ದೋ ಎಂಬುದು ಜನರಿಗೆ ತಿಳಿಯಬೇಕು ಎಂದರು.

ರೈತರ ಹೋರಾಟಕ್ಕೆ ಸರ್ಕಾರದ ಬೆಂಬಲವೂ ಇಲ್ಲ, ವಿರೋಧ ಪಕ್ಷಗಳ ಬೆಂಬಲವೂ ಸಮರ್ಪಕವಾಗಿ ಸಿಗುತ್ತಿಲ್ಲ. ರೈತರ ಪರವಾಗಿ ಧ್ವನಿ ಎತ್ತಲು ಯಾರೂ ಮುಂದೆ ಬರುತ್ತಿಲ್ಲ ಎಂದು ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ದಬ್ಬಾಳಿಕೆಗೆ ಜಗ್ಗುವುದಿಲ್ಲ:

ಸರ್ಕಾರದ ದಬ್ಬಾಳಿಕೆಗೆ ನಾವು ಜಗ್ಗುವುದಿಲ್ಲ. ರೈತರನ್ನು ವಾಮಮಾರ್ಗದಲ್ಲಿ ಬದಲಾಯಿಸಬಹುದು ಎಂದು ಸರ್ಕಾರ ಭಾವಿಸಿದ್ದರೆ ಅದು ಅವರ ಮೂರ್ಖತನ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ. ಸರ್ಕಾರ ರೈತರ ಭಾವನೆಗಳಿಗೆ ಸ್ಪಂದಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ಹಾಗೂ ಧರಣಿ ಸೇರಿದಂತೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.

- ನಾಗರಾಜು, ರೈತ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿ.ಎಫ್: ಕಾರ್ಮಿಕರ ವೇತನ‌ಮಿತಿ ₹ 25,000ಕ್ಕೆ ಹೆಚ್ಚಳ: ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ
ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ: ಡಾ. ಕಣ್ಣೂರ್