ಮಂಡ್ಯ ವಿವಿ ಅಕ್ರಮಗಳ ತನಿಖೆಗೆ ತ್ರಿಸದಸ್ಯ ಸಮಿತಿ ರಚನೆ

KannadaprabhaNewsNetwork |  
Published : Nov 01, 2026, 03:00 AM IST
೩೦ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಂಡ್ಯ ವಿವಿಯ ಹಗರಣಗಳ ಬಗ್ಗೆ ನಿರಂತರವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರವು ತನಿಖೆಗಾಗಿ ಸಮಿತಿ ರಚಿಸಿದ್ದು, ಇದರಿಂದ ವಿವಿಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಹಗರಣಗಳ ಸತ್ಯಾಂಶ ಮತ್ತು ಅವುಗಳ ಹಿಂದಿರುವ ವ್ಯಕ್ತಿಗಳ ಮುಖವಾಡ ಅನಾವರಣಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳು ಮತ್ತು ಹಗರಣಗಳ ತನಿಖೆಗಾಗಿ ರಾಜ್ಯ ಸರ್ಕಾರವು ತ್ರಿಸದಸ್ಯ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ ಎಂದು ವಿಧಾನಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರು ತಿಳಿಸಿದರು.

ಮಂಡ್ಯ ವಿವಿಯ ಹಗರಣಗಳ ಬಗ್ಗೆ ನಿರಂತರವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರವು ತನಿಖೆಗಾಗಿ ಸಮಿತಿ ರಚಿಸಿದ್ದು, ಇದರಿಂದ ವಿವಿಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಹಗರಣಗಳ ಸತ್ಯಾಂಶ ಮತ್ತು ಅವುಗಳ ಹಿಂದಿರುವ ವ್ಯಕ್ತಿಗಳ ಮುಖವಾಡ ಅನಾವರಣಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಾವಣಗೆರೆ ವಿವಿ ಕುಲಪತಿ ಸಮಿತಿ ಅಧ್ಯಕ್ಷ:ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಯನ್ನು ತ್ರಿಸದಸ್ಯ ತನಿಖಾ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಆಡಳಿತ) ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಅವರು ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಪ್ರಸ್ತಾಪಿತ ದೂರುಗಳ ಬಗ್ಗೆ ನಿಯಮಾನುಸಾರ ತನಿಖೆ ನಡೆಸಿ ಒಂದು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಮಂಡಿಸಲಿದೆ ಎಂದರು.

ಮಂಡ್ಯ ವಿವಿಯಲ್ಲಿ ನಡೆದಿರುವ ಹತ್ತಾರು ಹಗರಣಗಳ ಬಗ್ಗೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯಲಾಗಿತ್ತು. ಇದೀಗ ಸರ್ಕಾರವು ರಚಿಸಿರುವ ತ್ರಿಸದಸ್ಯ ಸಮಿತಿಯ ಆದೇಶದಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳಲ್ಲಿ ೧೩ ಅಂಶಗಳನ್ನು ಉಲ್ಲೇಖಿಸಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ಒಂದು ಹಂತದ ಜಯವಾಗಿದೆ ಎಂದು ತಿಳಿಸಿದರು.

ಶುಲ್ಕಗಳು ದುಬಾರಿ:

ಮಂಡ್ಯ ವಿವಿಯಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕಗಳು ದುಬಾರಿಯಾಗಿವೆ. ವೇಳಾಪಟ್ಟಿಯಂತೆ ಬೋಧನೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಬೌದ್ಧಿ, ಕ್ರೀಡೆ, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಪಠ್ಯೇತರ ಚಟುವಟಿಕೆಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್ಥಿಕ ಶಿಸ್ತು ಇಲ್ಲ:

ವಿದ್ಯಾರ್ಥಿಗಳಿಂದ ಮತ್ತು ವಿವಿಯ ಸಂಪನ್ಮೂಲಗಳಿಂದ ಸಂಗ್ರಹಿಸಿದ ಹಣವನ್ನು ಮನಬಂದಂತೆ ಖರ್ಚು ಮಾಡಲಾಗುತ್ತಿದೆ. ವಿವಿಯ ಪ್ರವೇಶ ದ್ವಾರ ಮತ್ತು ರಸ್ತೆ ಕಾಮಗಾರಿ ₹೫ ಕೋಟಿ ಹಣವನ್ನು ನಿಯಮ ಮೀರಿ ಖರ್ಚು ಮಾಡಲಾಗಿದೆ. ೪ಜಿ ರಿಯಾಯಿತಿ ಇಲ್ಲದ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಜತೆಗೆ, ಟೆಂಡರ್‌ದಾರರಿಗೆ ನಿಯಮಮೀರಿ ಹೆಚ್ಚುವರಿ ಹಣ ನೀಡಲಾಗಿದೆ ಎಂದು ಆರೋಪಿಸಿದರು.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಸರ್ಕಾರ ನಿರ್ಧರಿಸಿರುವ ಮೀಸಲು(ಕ್ರೀಡೆ, ಎನ್‌ಎಸ್‌ಎಸ್, ಮಿಲಿಟರಿ, ಸ್ವಾತಂತ್ರ್ಯ ಯೋಧರು, ವಿಶೇಷಚೇತನರು ಇತರೆ) ನಿಯಮಗಳನ್ನು ಅನುಸರಿಸುತ್ತಿಲ್ಲ. ಪಿಎಚ್‌ಡಿ ಪ್ರವೇಶ, ಸಂಶೋಧನಾ ಮಾರ್ಗದರ್ಶಕರ ನೇಮಕಾತಿ, ಪಿಎಚ್‌ಡಿ ಸಂಶೋಧನಾ ಕೇಂದ್ರಗಳ ಆಯ್ಕೆಯಲ್ಲಿ ನಿಯಮಗಳನ್ನು ಅನುಸರಿಸಿಲ್ಲ. ವಿವಿಗೆ ಸಂಬಂಧಿಸಿದಂತೆ ಯಾವುದೇ ಸಮಿತಿಗಳನ್ನು ನಿಯಮಾನುಸಾರ ರಚಿಸಿಕೊಂಡಿಲ್ಲ ಎಂದು ದೂರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ