ಕನ್ನಡಪ್ರಭ ವಾರ್ತೆ ಕವಿತಾಳ
ಕ್ರಿಮಿನಾಶಕ ಸಿಂಪಡಿಸಿದ್ದ ಚವಳೆಕಾಯಿ ಪಲ್ಯ ಸೇವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಸಮೀಪದ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡ ಮಹಿಳೆ ಮತ್ತು ಇಬ್ಬರು ಮಕ್ಕಳಿಗೆ ರಾಯಚೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಡ್ಡೋಣಿ ತಿಮ್ಮಾಪುರ ಗ್ರಾಮದ ರಮೇಶ ನಾಯಕ (38) ಅವರ ಪುತ್ರಿಯರಾದ ನಾಗಮ್ಮ (8) ಮತ್ತು ದೀಪಾ (6) ಮೃತ ದುರ್ದೈವಿಗಳು.
ರಮೇಶ ಅವರ ಪತ್ನಿ ಪದ್ಮಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಸೇರಿ ಇಬ್ಬರು ಮಕ್ಕಳನ್ನು ರಾಯಚೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹತ್ತಿ ಬೆಳೆ ನಡುವೆ ನಾಟಿ ಮಾಡಿದ್ದ ಚವಳೆಕಾಯಿ ತಂದು ಪಲ್ಯ ಮಾಡಿ ಸೋಮವಾರ ರಾತ್ರಿ ರೊಟ್ಟಿ, ಚವಳೆಕಾಯಿ ಪಲ್ಯ, ಅನ್ನ ಮತ್ತು ಸಾಂಬಾರು ಸೇವಿಸಿದ ನಾಲ್ವರಲ್ಲಿ ಹೊಟ್ಟೆನೋವು, ವಾಂತಿ ಬೇಧಿ ಕಾಣಿಸಿಕೊಂಡಿದೆ ತಡರಾತ್ರಿ ಲಿಂಗಸುಗೂರಿಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ರಮೇಶ ನಾಯಕ ಮತ್ತು ಪುತ್ರಿ ನಾಗಮ್ಮ ಮಂಗಳವಾರ ನಸುಕಿನ ವೇಳೆ ಮೃತಪಟ್ಟಿದ್ದಾರೆ. ರಾಯಚೂರು ಆಸ್ಪತ್ರೆಗೆ ಸಾಗಿಸುವಾಗ ಪುತ್ರಿ ದೀಪಾ ಮೃತಳಾಗಿದ್ದಾಳೆ.
ಹತ್ತಿ ಬೆಳೆ ನಡುವೆ ಖಾಲಿ ಜಾಗದಲ್ಲಿ ಚವಳೆಕಾಯಿ ಬೆಳೆದ ರಮೇಶ ನಾಯಕ ಹತ್ತಿ ಬೆಳೆಗೆ ಉಂಟಾದ ಕೀಟಗಳ ನಿಯಂತ್ರಣಕ್ಕಾಗಿ ಶನಿವಾರ ಹತ್ತಿ ಗಿಡಗಳಿಗೆ ಗುಳಿಗೆ ಇಟ್ಟಿದ್ದರು ಎನ್ನಲಾಗಿದೆ. ಅದರ ನಡುವೆ ಬೆಳೆದ ಚವಳೆಕಾಯಿಯನ್ನು ಸೋಮವಾರ ಮನೆಗೆ ತಂದು ಪಲ್ಯ ಮಾಡಿಕೊಂಡು ಸೇವಿಸಿದ್ದಾರೆ. ಇಬ್ಬರು ಮಕ್ಕಳು ಬದನೆಕಾಯಿ ಪಲ್ಯ ಸೇವಿಸಿದ್ದು, ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಗ್ರಾಮಸ್ಥರು ಹೇಳಿದರು.ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿರವಾರ ಸಿಪಿಐ ಎಂ.ಶಶಿಕಾಂತ ಮತ್ತು ಕವಿತಾಳ ಠಾಣೆ ಪಿಎಸ್ ಐ ವೆಂಕಟೇಶ ನಾಯಕ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.