ಅಜೀಜಅಹ್ಮದ ಬಳಗಾನೂರ
ಗಣೇಶನ ಮೂರ್ತಿ ರೂಪಿಸಿ ಭಕ್ತರ ಮನೆ-ಮಂದಿರಗಳಿಗೆ ಸಂಭ್ರಮ ತುಂಬಿಸುವ ಕೈಗಳಲ್ಲೀಗ ಲೆಕ್ಕಾಚಾರದ ಆತಂಕ. ವರ್ಷವಿಡೀ ಮಣ್ಣು ಹದಗೊಳಿಸಿ, ರೂಪ ಕೊಟ್ಟು, ಬಣ್ಣ ಬಳಿದು ಹಬ್ಬಕ್ಕಾಗಿ ಸಿದ್ಧಪಡಿಸಿದ ಮೂರ್ತಿಗಳು ಮಾರಾಟವಾಗುತ್ತವೆಯೋ ಇಲ್ಲವೋ ಎಂಬ ಚಿಂತೆ ಒಂದೆಡೆಯಾದರೆ, ಲಕ್ಷಾಂತರ ರುಪಾಯಿ ಸಾಲ ಮಾಡಿ ತೊಡಗಿಸಿದ ಬಂಡವಾಳ ಮರಳುತ್ತದೆಯೇ ಎಂಬ ಭಯ ಮತ್ತೊಂದೆಡೆ.
ವರ್ಷವಿಡೀ ದುಡಿಮೆ: ಕೊಲ್ಕತ್ತಾ ಸೇರಿದಂತೆ ವಿವಿಧೆಡೆಯಿಂದ 10ಕ್ಕೂ ಅಧಿಕ ತಂಡಗಳು ಗಣೇಶೋತ್ಸವಕ್ಕೆ ಎರಡರಿಂದ ಮೂರು ತಿಂಗಳು ಮುಂಚಿತವಾಗಿಯೇ ಹುಬ್ಬಳ್ಳಿಗೆ ಆಗಮಿಸಿವೆ. ಮರಾಠಾ ಗಲ್ಲಿ, ನವನಗರ, ಹಳೇಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ಬಾಡಿಗೆ ಪಡೆದು ತಾತ್ಕಾಲಿಕ ಕಾರ್ಯಾಗಾರ ತೆರೆದಿರುವ ತಂಡಗಳು ಬೃಹತ್ ಹಾಗೂ ವೈವಿಧ್ಯಮಯ ವಿನ್ಯಾಸದ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆ ಪ್ರವೇಶಿಸಿವೆ.ಹೊಸ ವಿನ್ಯಾಸ, ದೊಡ್ಡ ಗಾತ್ರ ಹಾಗೂ ಆಕರ್ಷಕ ಅಲಂಕಾರಗಳೊಂದಿಗೆ ಹೊರಗಿನಿಂದ ಬಂದವರು ಗ್ರಾಹಕರ ಗಮನ ಸೆಳೆಯುತ್ತಿರುವುದು ದಶಕಗಳಿಂದ ಇದೇ ಕಾಯಕವನ್ನು ನಂಬಿಕೊಂಡಿರುವ ಸ್ಥಳೀಯರಿಗೆ ನೇರ ಸವಾಲಾಗಿದೆ. "ನಾವು ವರ್ಷವಿಡೀ ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತೇವೆ. ಹೊರಗಿನಿಂದ ಬರುವವರು ಮೂರು ತಿಂಗಳು ಕೆಲಸ ಮಾಡಿ ಹಣ ಸಂಪಾದಿಸಿಕೊಂಡು ಮರಳುತ್ತಾರೆ. ಅವರೊಂದಿಗೆ ಬೆಲೆ ಹಾಗೂ ವಿನ್ಯಾಸದಲ್ಲಿ ಪೈಪೋಟಿ ನಡೆಸುವುದು ಕಷ್ಟವಾಗುತ್ತಿದೆ ಎನ್ನುವುದು ಸ್ಥಳೀಯ ಮೂರ್ತಿಕಾರ ಅಳಲು.
ಸ್ಥಳೀಯರ ಮಾರುಕಟ್ಟೆ: ಹೊರರಾಜ್ಯದ ಕಲಾವಿದರನ್ನು ಸಂಪೂರ್ಣವಾಗಿ ತಡೆಯುವುದಕ್ಕಿಂತ ಸ್ಥಳೀಯರಿಗೆ ಆದ್ಯತೆ ನೀಡುವ ವ್ಯವಸ್ಥೆ ರೂಪಿಸಬೇಕು ಎಂಬುದು ಮೂರ್ತಿಕಾರರ ಒತ್ತಾಯ. ಕಡಿಮೆ ಬಡ್ಡಿ ದರದ ಸಾಲ, ತರಬೇತಿ, ಶಾಶ್ವತ ಕಾರ್ಯಾಗಾರ, ಮಾರಾಟ ಮಳಿಗೆ ಹಾಗೂ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿರುವ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯ ಕಲೆ ಮೂರು ತಿಂಗಳ ಪೈಪೋಟಿಯ ನಡುವೆ ನಲುಗುವ ಆತಂಕವಿದೆ.₹25 ಲಕ್ಷ ಹೂಡಿಕೆ: ಹಳೇ ಮೇದಾರ ಓಣಿಯ ಬಸವರಾಜ ಕುಂಬಾರ ಅವರು ಈ ಬಾರಿ 80ಕ್ಕೂ ಅಧಿಕ ಬೃಹತ್ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಸುಮಾರು ₹25 ಲಕ್ಷ ಹೂಡಿಕೆ ಮಾಡಿದ್ದು, ಈ ವರೆಗೆ 25ರಿಂದ 30 ಮೂರ್ತಿಗಳು ಮಾತ್ರ ಮಾರಾಟವಾಗಿವೆ. ₹10-12 ಲಕ್ಷದಷ್ಟು ಹಣ ವಾಪಸ್ ಬಂದಿದ್ದು, ಸಾಲ ಪಡೆದು ಹೂಡಿಕೆ ಮಾಡಿರುವ ಕಾರಣ ಉಳಿದ ಮೂರ್ತಿಗಳ ಮಾರಾಟದ ಬಗ್ಗೆ ಆತಂಕ ಎದುರಾಗಿದೆ.ಪಿಒಪಿ ಮೂರ್ತಿಗಳ ಮಾರಾಟಕ್ಕೆ ನಿರ್ಬಂಧ ಇರುವುದರಿಂದ ಸ್ಥಳೀಯರಿಗೆ ಉತ್ತಮ ಆದಾಯದ ನಿರೀಕ್ಷೆಯಿತ್ತು. ಆ ನಿರೀಕ್ಷೆ ಸುಳ್ಳಾಗಿದೆ. ಹೊರರಾಜ್ಯದ ಕಲಾವಿದರ ಹೆಚ್ಚಿದ ಪೈಪೋಟಿಯಿಂದ ಸ್ಥಳೀಯರಿಗೆ ತೀವ್ರ ಹಾನಿಯಾಗುತ್ತಿದೆ ಎಂದು ಗಣೇಶ ಮೂರ್ತಿ ತಯಾರಕ ಚೇತನ ಕುಂಬಾರ ತಿಳಿಸಿದರು.