ವಿದ್ಯಾರ್ಥಿಗಳ ಸಂಖ್ಯೆ ಸಹ ದ್ವಿಗುಣ । ಮೂರು ವಸತಿ ಶಾಲೆಗಳಲ್ಲಿ ಬಹುಮಹಡಿ ಕಟ್ಟಡಕ್ಕೆ ತಲಾ ₹ 2 ಕೋಟಿ ಅನುದಾನ
ತಾಲೂಕಿನ ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪಿಯುಸಿ ಭಾಗ್ಯ ಒದಗಿ ಬಂದಿದೆ. ಅಲ್ಲದೆ ಈ ಮೂರು ವಸತಿ ಶಾಲೆಗಳಲ್ಲಿ ಸಹ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಕ್ಕೆ ಸಹ ಸರ್ಕಾರ ಆದೇಶಿಸಿದೆ. ಈ ವರ್ಷದಿಂದ ತರಗತಿಗಳು ಸಹ ಆರಂಭವಾಗಿವೆ.
6ನೇ ತರಗತಿಯಿಂದ 10 ತರಗವತಿವರೆಗೆ ಇದ್ದ ವಸತಿ ಶಾಲೆಗಳನ್ನು ಪಿಯುಸಿವರೆಗೆ ಸಂಯೋಜಿಸಲಾಗಿದೆ. ಕುಕನೂರು ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುಕನೂರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುದರಮೋತಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್‌ಗಳನ್ನು ಪಿಯುಸಿ ಕಾಲೇಜುಗಳನ್ನಾಗಿ ಸಂಯೋಜಿಸಲಾಗಿದೆ. ಪ್ರಸಕ್ತ ವರ್ಷದಿಂದ ಪಿಯುಸಿ ತರಗತಿಗಳನ್ನು ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿ ಅಧೀನದಲ್ಲಿ ಆರಂಭಿಸಲಾಗಿದೆ. ಈಗಾಗಲೇ ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಪ್ರವೇಶಾತಿ ಸಹ ಪ್ರಾರಂಭವಾಗಿದೆ.ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣ:ಕುಕನೂರು, ತಳಕಲ್ಲ, ಕುದರಿಮೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಸಹ ದ್ವಿಗುಣ ಆಗಿದೆ.
ಯಲಬುರ್ಗಾ ಕ್ಷೇತ್ರದಲ್ಲಿ ಯಾವ ಮಗುವೂ ಸಹ ಶಿಕ್ಷಣದಿಂದ ವಂಚಿತವಾಗಬಾರದು. ಕ್ಷೇತ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಆ ನಿಟ್ಟಿನಲ್ಲಿ ಮೂರು ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಆರಂಭವಾಗಿವೆ. ವಸತಿ ಶಾಲೆಗಳಿಗೆ ಬೇಕಾದ ಅಗತ್ಯ ಸೌಲಭ್ಯ ಸಹ ಕಲ್ಪಿಸಲಾಗುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.