-ಜಿಲ್ಲೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಕಾರ್ಯಚಟುವಟಿಕೆಗಳು ಮೂಲೆಗುಂಪು । ಆಂತರಿಕ ಸಂಘರ್ಷ, ಪರಸ್ಪರ ವೈಮನಸ್ಸು ತುಂಬಿದ ಪಕ್ಷಗಳು
-----ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಜೆಸಿಬಿ ಕೆಟ್ಟುನಿಂತಿದ್ದು, ಇದು ರಾಜಕೀಯ ವಲಯವನ್ನು ಕಳೆಗುಂದುವಂತೆ ಮಾಡಿದೆ.
ಏನಿದು ಜೆಸಿಬಿ, ರಾಜಕೀಯ ವಲಯ ಎಂದು ಅಚ್ಚರಿಪಡಬೇಡಿ. ರಾಯಚೂರು ಜಿಲ್ಲೆಯ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲಾ ಸಮಿತಿ ಸೇರಿದಂತೆ ವಿವಿಧ ಘಟಕಗಳು ಕ್ರಿಯಾಶೀಲತೆಯನ್ನು ಕಳೆದುಕೊಂಡಿದ್ದರಿಂದ ರಾಜಕೀಯ ಚಟುವಟಿಕೆಗಳು ಸಂಪೂರ್ಣವಾಗಿ ಮೂಲೆಗುಂಪು ಸೇರಿದ್ದು, ಇದರಿಂದಾಗಿ ಮೂರು ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರಲ್ಲಿ ಕಸಿವಿಸಿ ಉಂಟಾಗುತ್ತಿದೆ.ಕೇಂದ್ರದಲ್ಲಿ ಮೈತ್ರಿ ಹೊಂದಿರುವ ಬಿಜೆಪಿ-ಜೆಡಿಎಸ್, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಗಳು ಜಿಲ್ಲೆಯಲ್ಲಿ ಮಾತ್ರ ಹೆಸರಿಗೆ ಸೀಮಿತಗೊಂಡಿದೆ. ಮೂರು ಪಕ್ಷಗಳಲ್ಲಿ ಗುಂಪುಗಾರಿಕೆ, ಆಂತರಿಕ ಸಂಘರ್ಷ, ಪರಸ್ಪರ ವೈಮನಸ್ಸಿನ ಮುಖಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿರುವುದರಿಂದ ಪಕ್ಷ ಸಂಘಟನೆ, ವಿವಿಧ ಘಟಕಗಳ ಬಲವರ್ಧನೆಗೆ ತೀವ್ರ ಹಿನ್ನಡೆ ಉಂಟಾಗುತ್ತಿದೆ.
ಬಣ ರಾಜಕೀಯಕ್ಕೆ ಒಣಗಿದ ಕೈ: ಆಡಳಿತರೂಢ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಆಂತರೀಕ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಎಂಎಲ್ಸಿ ಎ.ವಸಂತ ಕುಮಾರ ಹಾಗೂ ಸಚಿವ ಎನ್.ಎಸ್.ಬೋಸರಾಜು ಅವರ ಬಣರಾಜಕೀಯಕ್ಕೆ ಕೈ ಪಕ್ಷ ಒಣಗಿದೆ.ಕೈ ಪಕ್ಷದಿಂದ ಇಬ್ಬರು ಸಚಿವರು, ಮೂರು ಜನ ನಿಗಮ ಮಂಡಳಿಗಳ ಅಧ್ಯಕ್ಷ ಸೇರಿ ನಾಲ್ವರು ಶಾಸಕರು, ಮೂರು ಜನ ಎಂಎಲ್ಸಿ, ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ. ಹೀಗೆ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ಅದೇ ರೀತಿ ಗುಂಪುಗಾರಿಕೆ, ಸಂಘಟನೆಗೆ ಆದ್ಯತೆ ನೀಡದೇ ಕಾರ್ಯಕರ್ತರ ನಿರ್ಲಕ್ಷ್ಯ ತೋರುವಲ್ಲಿಯು ಮುಂದೆಯಿದೆ.
ನಾವೇನು ಕಡಿಮೆಯಿಲ್ಲ: ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯುವ ವಿಚಾರದಲ್ಲಿ ಕಾಂಗ್ರೆಸ್ ಗಿಂತ ನಾವೇನು ಕಡಿಮೆಯಿಲ್ಲ ಎನ್ನುವ ಮಟ್ಟಿಗೆ ಬಿಜೆಪಿ ಹಾಗೂ ಜೆಡಿಎಸ್ ಆಂತರಿಕ ಸಂಘರ್ಷಕ್ಕೊಳಗಾಗಿದೆ. ಬಿಜೆಪಿಯಿಂದ ಇತ್ತೀಚೆಗೆ ನಡೆದ ನೋಂದಣಿ ಅಭಿಯಾನವು ಯಶಸ್ಸು ಕಾಣದಕ್ಕೆ ಕಾರ್ಯಕರ್ತರು ತೀವ್ರ ಅಸಮಧಾನಗೊಂಡಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಒಬ್ಬರೇ ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವುದು ಜಿಲ್ಲೆಯಲ್ಲಿ ಜೆಡಿಎಸ್ ಮಂಕಾಗುವಂತೆ ಮಾಡಿದೆ.ಚಟುವಟಿಕೆಗಳು ಗೌಣ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿದ್ದ ಮೂರು ಪಕ್ಷಗಳು ನಂತರದ ದಿನಗಳಲ್ಲಿ ನಿಧಾನವಾಗಿ ಮಂದಗತಿಯತ್ತ ಸಾಗಿದವು. ವರ್ಷದ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕೊಂಚಮಟ್ಟಿಗೆ ಚಟುವಟಿಕೆಗಳು ನಡೆದರು ಸಹ ಪರಿಣಾಮಕಾರಿಯಾಗಿ ಜರುಗಲಿಲ್ಲ ಎನ್ನುವ ಕೊರಗು ಮುಖಂಡರಲ್ಲಿ ಮನೆ ಮಾಡಿದೆ. ಮೂರು ಪಕ್ಷಗಳಲ್ಲಿ ಹಿರಿಯರು-ಕಿರಿಯರು, ಕಾರ್ಯಕರ್ತರು, ಸದಸ್ಯರು ಯಾವ ಹುದ್ದೆಯಲ್ಲಿದ್ದಾರೆ? ಯಾರು ಹಾಲಿಗಳು?, ಯಾರು ಮಾಜಿಗಳು?, ಪಕ್ಷದಿಂದ ಯಾರಿಗೆ ಜವಾಬ್ದಾರಿ ವಹಿಸಲಾಗಿದೆ?. ಸಂಘಟನಾತ್ಮಕ ಸಭೆ-ಸಮಾರಂಭಗಳು, ಹೊಸ ನೋಂದಣಿ, ಸಮಾಲೋಚನೆಗಳು, ಸಾಮಾನ್ಯ ಸಭೆಗಳು, ವಿವಿಧ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇಗಳು ಗೌಣತಾಳಿವೆ.
-------------------.....ಬಾಕ್ಸ್.....
ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆ ಸ್ಥಗಿತರಾಯಚೂರು ಜಿಲ್ಲೆಯ ರಾಜಕೀಯ ವಲಯದ ಪರಿಸ್ಥಿತಿ ಗಮನಿಸಿದರೆ ಜೀವಂತವಾಗಿದೆಯೋ ಇಲ್ಲವೋ ಎನ್ನುವ ಅನುಮಾನಗಳು ಕಾಡಲಾರಂಭಿಸಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಚಟುವಟಿಕೆಗಳು ಸಂಪೂರ್ಣ ನಿಂತುಹೋಗಿವೆ. ಮುಂದಿನ ಆರು ತಿಂಗಳಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆಗಳಿದ್ದು, ಈಗಲಾದರು, ಪಕ್ಷಗಳು ಸಂಘಟನಾತ್ಮಕವಾಗಿ ಸಕ್ರಿಯಗೊಂಡರೆ ನಿಷ್ಠಾವಂತ ಕಾರ್ಯಕರ್ತರನ್ನು ಬದುಕಿಸಿದಂತಾಗುತ್ತದೆ ಎಂದು ಜಿಲ್ಲೆಯ ರಾಜಕೀಯ ವಿಶ್ಲೇಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
---------------29ಕೆಪಿಆರ್ಸಿಆರ್ 01: ಜೆಸಿಬಿ (ಜೆಡಿಎಸ್-ಕಾಂಗ್ರೆಸ್-ಬಿಜೆಪಿ)