ಪಣಂಬೂರು ಬೀಚ್‌ನಲ್ಲಿ ಈಜಲು ತೆರಳಿದ ಮೂವರು ಸಮುದ್ರಪಾಲು

KannadaprabhaNewsNetwork |  
Published : Mar 04, 2024, 01:15 AM ISTUpdated : Mar 04, 2024, 01:07 PM IST
11 | Kannada Prabha

ಸಾರಾಂಶ

ಮಿಶೋ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್ (20), ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಕಂಪೆನಿಯಲ್ಲಿ ಮೇಲ್ವಿಚಾರಕ ನಾಗರಾಜ್ (24) ಸಮುದ್ರ ಪಾಲಾದವರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಹೊರ ವಲಯದ ಪಣಂಬೂರು ಬೀಚ್‌ನಲ್ಲಿ ಭಾನುವಾರ ಸಂಜೆ ಮೂವರು ಸ್ಥಳೀಯ ಯುವಕರು ನೀರು ಪಾಲಾಗಿರುವ ದಾರುಣ ಘಟನೆ ಸಂಭವಿಸಿದೆ.

ಮಿಶೋ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್ (20), ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಕಂಪೆನಿಯಲ್ಲಿ ಮೇಲ್ವಿಚಾರಕ ನಾಗರಾಜ್ (24) ಸಮುದ್ರ ಪಾಲಾದವರು.

ರಜಾ ದಿನವಾದ ಕಾರಣ ಭಾನುವಾರ ವಿಹಾರಕ್ಕಾಗಿ ಪಣಂಬೂರು ಬೀಚ್‌ಗೆ ಬಂದಿದ್ದರು. ಸಂಜೆ ವೇಳೆ ಯುವಕರು ನೀರಿನಲ್ಲಿ ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ಅಲೆ ಬಂದು ಬಡಿದಿದೆ. ಈ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಮೂವರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

ಸಂಜೆಯ ವೇಳೆ ಬೃಹತ್ ಅಲೆಗಳು ಬಡಿಯುತ್ತಿದ್ದುದರಿಂದ ನೀರಿನಿಂದ ಮೇಲೆ ಬರುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್‌ಗಳು ಸೂಚನೆ ನೀಡಿದ್ದರು. ಆದರೂ ಅದನ್ನು ಅವರು ಲೆಕ್ಕಿಸದೆ ಮುಂದುವರಿದಿದ್ದರು. 

ಭಾನುವಾರವಾದ ಕಾರಣ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರು. ನಾಪತ್ತೆಯಾದವರನ್ನು ರಾತ್ರಿಯ ತನಕ ಹುಡುಕಾಟ ನಡೆಸಲಾಯಿತಾದರೂ ಅವರು ಪತ್ತೆಯಾಗಿಲ್ಲ. 

ಪಣಂಬೂರು ಪೊಲೀಸರು ಪ್ರಕರಣ ದಾಖಲಾಗಿದೆ. ವಾರದ ಹಿಂದೆ ಹಳೆಯಂಗಡಿ ಬಳಿ ನದಿಯಲ್ಲಿ ಸುರತ್ಕಲ್ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಮಾಸುವ ಮುನ್ನವೇ ಮತ್ತೆ ಅಂಥದ್ದೇ ಘಟನೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

ನಾಪತ್ತೆಯಾಗಿದ್ದ ಚೈತ್ರಾ ಕತಾರ್‌ಗೆ: ಇಂದು ಪೊಲೀಸರಿಗೆ ಪತ್ರ ನಿರೀಕ್ಷೆ

ಉಳ್ಳಾಲ: ನಾಪತ್ತೆಯಾಗಿದ್ದ ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿನಿ ಚೈತ್ರಾಳನ್ನು ಆಕೆಯ ಸ್ನೇಹಿತ ಶಾರೂಕ್ ತನ್ನ ಸಂಬಂಧಿಕನ ನೆರವಿನೊಂದಿಗೆ ಕತಾರ್‌ಗೆ ಕಳುಹಿಸಿದ್ದಾನೆ. ಕತಾರ್ ತಲುಪಿರುವ ಚೈತ್ರಾ, ಸೋಮವಾರ (ಮಾ.4) ಭಾರತೀಯ ದೂತವಾಸದ ಮೂಲಕ ತಾನು ಸ್ವ-ಇಚ್ಛೆಯಿಂದ ವಿದೇಶಕ್ಕೆ ತೆರಳಿದ್ದೇನೆ ಎಂದು ಲಿಖಿತವಾಗಿ ಮಂಗಳೂರು ಕಮಿಷನರ್‌ಗೆ ಪತ್ರವನ್ನು ಫ್ಯಾಕ್ಸ್ ಮಾಡಲಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಚೈತ್ರಾಳನ್ನು ಶೋಧ ನಡೆಸುತ್ತಿದ್ದ ಉಳ್ಳಾಲ ಪೊಲೀಸರ ತಂಡ, ಮಧ್ಯ ಪ್ರದೇಶದಿಂದ ಶಾರೂಕ್‍ನನ್ನು ವಶಕ್ಕೆ ಪಡೆದಿದ್ದಾರೆ.

ಚೈತ್ರಾ, ಫೆ.17ರಂದು ಮಾಡೂರಿನ ಬಾಡಿಗೆ ಮನೆಯಿಂದ ಸ್ಕೂಟರ್‌ನನಲ್ಲಿ ಸುರತ್ಕಲ್‍ ವರೆಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ತೆರಳಿದ್ದಳು. ಸ್ಕೂಟರ್ ಸುರತ್ಕಲ್‍ನಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ನಾಪತ್ತೆ ಪ್ರಕರಣ ಎಂದು ದೂರು ದಾಖಲಿಸಲಾಗಿತ್ತು.

ಆದರೆ ಲವ್ ಜೆಹಾದ್ ನಡೆದಿದೆ ಎಂದು ಆರೋಪಿಸಿ ಉಳ್ಳಾಲ ಪೊಲೀಸ್‌ ಠಾಣೆಯ ಎದುರು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಹೇಳಿಕೆ ನೀಡಿದ ಬಳಿಕ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಆಕೆಯ ಮೊಬೈಲ್ ಲೊಕೇಷನ್ ಆಧಾರದಲ್ಲಿ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಕಲೆ ಹಾಕಲಾಯಿತು. 

ಈ ನಡುವೆ ಆಕೆ ಮೆಜೆಸ್ಟಿಕ್‍ನಿಂದ ಬಸ್ ಇಳಿದು ಹೋಗಿರುವ ಬಗ್ಗೆ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು, ಬೆಂಗಳೂರು ವ್ಯಾಪ್ತಿಯಲ್ಲಿ ಆಕೆಯ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದರು. 

ಚೈತ್ರಾ ಮತ್ತು ಶಾರೂಖ್ ಬೆಂಗಳೂರಿನಿಂದ ಗೋವಾಕ್ಕೆ ತೆರಳಿ ಬಳಿಕ ಮಧ್ಯಪ್ರದೇಶಕ್ಕೆ ತೆರಳಿರುವ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ಶಾರೂಕ್‍ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭ ಚೈತ್ರಾ, ದಿಲ್ಲಿ ಮೂಲಕ ಕತಾರ್ ತಲುಪಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಶಾರೂಕ್ ಬೆಂಗಳೂರಿಗೆ ತಲುಪಿದ್ದ ಚೈತ್ರಾಳನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದು, ಬಳಿಕ ಮಧ್ಯಪ್ರದೇಶದಲ್ಲಿ ಕಣ್ಣೂರು ಮೂಲದ ಸ್ನೇಹಿತನೊಬ್ಬ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. 

ಬಳಿಕ ಶಾರೂಕ್, ಕತಾರ್‌ನಲ್ಲಿ ನೆಲೆಸಿರುವ ಹತ್ತಿರದ ಸಂಬಂಧಿಯೊಬ್ಬ ಚೈತ್ರಾಳಿಗೆ ವಿಸಿಟಿಂಗ್ ವೀಸಾ ಮತ್ತು ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾನೆ. ಅಲ್ಲಿಂದ ದಿಲ್ಲಿ ವಿಮಾನ ನಿಲ್ದಾಣದ ಮೂಲಕ ಕತಾರ್‌ಗೆ ಚೈತ್ರಾಳನ್ನು ಕಳುಹಿಸಿರುವ ಮಾಹಿತಿ ಸಿಕ್ಕಿದೆ. 

ಕತಾರ್ ತಲುಪಿರುವ ಚೈತ್ರಾ ಸೋಮವಾರ ಭಾರತದ ರಾಯಭಾರ ಕಚೇರಿಗೆ ತೆರಳಿ ಅಲ್ಲಿಂದ ಮಂಗಳೂರು ಪೊಲೀಸ್ ಕಮಿಷನರ್‌ಗೆ ತಾನು ಸ್ವ ಇಚ್ಛೆಯಿಂದ ತೆರಳಿರುವ ವಿಚಾರವನ್ನು ಲಿಖಿತವಾಗಿ ನೀಡುವ ಸಾಧ್ಯತೆ ಇದೆ.

ಶಾರೂಕ್ ಅಪರಾಧ ಪ್ರಕರಣದಲ್ಲಿ ವಿದೇಶದಲ್ಲಿ ಬಂಧಿತನಾಗಿರುವ ವಿಚಾರದಲ್ಲಿ ವಿದೇಶಕ್ಕೆ ತೆರಳಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ದಿಲ್ಲಿಯ ಏರ್‌ಪೋರ್ಟ್‌ಗೆ ಬಿಟ್ಟು ಬಂದ ಬಳಿಕ ಮಧ್ಯಪ್ರದೇಶದಲ್ಲಿದ್ದ ಸ್ನೇಹಿತ ಮನೆಗೆ ವಾಪಾಸ್ಸಾದಾಗ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!