ಸಮುದ್ರದ ಸುಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಾವು

KannadaprabhaNewsNetwork |  
Published : Nov 02, 2026, 03:45 AM IST
ಮೃತಪಟ್ಟ ಯುವತಿ  | Kannada Prabha

ಸಾರಾಂಶ

ಬೆಂಗಳೂರಿನ ಶೋಭಾ ದಾಸ(೨೨), ಅಕ್ರಂ(೨೭), ವಿಶ್ವೇಶ ಎ.ಕೆ.(೨೪) ಮೃತಪಟ್ಟ ಪ್ರವಾಸಿಗರು. ಅಕ್ರಂ ಮಾರ್ಗಮಧ್ಯೆ ಸಾವಿಗೀಡಾಗಿದ್ದು, ವಿಶ್ವೇಶ ಅಲೆಗೆ ಸಿಲುಕಿ ನಾಪತ್ತೆಯಾಗಿ ಮೃತಪಟ್ಟವರು. ಪುನೀತ್(೨೨), ಸ್ನೇಹಾ ಪ್ರಾಯ(೨೨), ಹರ್ಬಜ್ ಪ್ರಾಯ(೩೧) ಜೀವಾಪಾಯದಿಂದ ಪಾರಾಗಿ ಬಂದಿದ್ದಾರೆ.

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಓರ್ವ ಪ್ರವಾಸಿ ಯುವತಿ, ಇಬ್ಬರು ಯುವಕರು ಸಾವಿಗೀಡಾದ ಘಟನೆ ಭಾನುವಾರ ಬೆಳಗ್ಗೆ ಇಲ್ಲಿನ ದುಬ್ಬನಸಶಿ ಕಡಲತೀರದಲ್ಲಿ ನಡೆದಿದೆ.ಬೆಂಗಳೂರಿನ ಶೋಭಾ ದಾಸ(೨೨), ಅಕ್ರಂ(೨೭), ವಿಶ್ವೇಶ ಎ.ಕೆ.(೨೪) ಮೃತಪಟ್ಟ ಪ್ರವಾಸಿಗರು. ಅಕ್ರಂ ಮಾರ್ಗಮಧ್ಯೆ ಸಾವಿಗೀಡಾಗಿದ್ದು, ವಿಶ್ವೇಶ ಅಲೆಗೆ ಸಿಲುಕಿ ನಾಪತ್ತೆಯಾಗಿ ಮೃತಪಟ್ಟವರು. ಪುನೀತ್(೨೨), ಸ್ನೇಹಾ ಪ್ರಾಯ(೨೨), ಹರ್ಬಜ್ ಪ್ರಾಯ(೩೧) ಜೀವಾಪಾಯದಿಂದ ಪಾರಾಗಿ ಬಂದಿದ್ದಾರೆ.

ಘಟನೆಯ ಹಿನ್ನೆಲೆ: ಬೆಂಗಳೂರಿನಿಂದ ಒಟ್ಟು ೧೬ ಜನ ಖಾಸಗಿ ಕಂಪನಿಯ ಉದ್ಯೋಗಿಗಳ ತಂಡ ಇಲ್ಲಿಗೆ ಪ್ರವಾಸಕ್ಕಾಗಿ ಬಂದಿದ್ದು, ಭಾನುವಾರ ಬೆಳಗ್ಗೆ ಸಮುದ್ರದಲ್ಲಿ ಈಜಾಡಲು ತೆರಳಿದ್ದರು. ಆಗ ರಭಸದ ಅಲೆಗೆ ಹಲವರು ಸಿಲುಕಿದ್ದರು. ಓರ್ವ ಸುಳಿಗೆ ಸಿಲುಕಿ ನಾಪತ್ತೆಯಾದರೆ ಇನ್ನೂ ಮೂವರು ದಡಕ್ಕೆ ಬಂದಿದ್ದು, ತಕ್ಷಣ ಖಾಸಗಿ ಮತ್ತು ೧೦೮ ಆ್ಯಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಓರ್ವ ಯುವತಿ ಮಾರ್ಗಮಧ್ಯದಲ್ಲೆ ಮೃತಪಟ್ಟಿದ್ದರು.

ಉಳಿದ ಇಬ್ಬರಿಗೆ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಕಳುಹಿಸಿದ್ದರು. ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಿದ್ದರಿಂದ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇವರಲ್ಲಿ ಓರ್ವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.

ತುರ್ತು ಚಿಕಿತ್ಸೆ ಕೊಡಿಸಲು ಖಾಸಗಿ ಮತ್ತು ೧೦೮ ಆ್ಯಂಬುಲೆನ್ಸ್‌ನವರು ತಕ್ಷಣ ಸ್ಪಂದಿಸಿ ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಇಲ್ಲಿನ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಅವರು ವಿಷಯ ತಿಳಿಯುತ್ತಲೇ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಿ ಜೀವ ಉಳಿಸಿದ್ದು, ಇವರಿಗೆ ಆಸ್ಪತ್ರೆಯ ನರ್ಸ್ ಹಾಗೂ ಸಿಬ್ಬಂದಿ ಸಹಾಯ ಮಾಡಿದ್ದಾರೆ. ಸ್ಥಳಕ್ಕೆ ಪಿಎಸ್ಐ ಅನಿಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಸ್ವಸ್ಥರಾದವರ ಚಿಕಿತ್ಸೆಗೆ ನೆರವಾಗಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಸಾವಿಗೆ ಜಿಲ್ಲಾಡಳಿತ ಹೊಣೆಯೇ?: ದುಬ್ಬನಸಶಿ ಕಡಲತೀರದಲ್ಲಿ ಈ ಹಿಂದೆ ಮೀನುಗಾರಿಕೆಗೆ ಸೀಮಿತವಾಗಿತ್ತು. ಇತ್ತೀಚೆಗೆ ಬಂದರು ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಜಾಗವನ್ನು ಆಕ್ರಮಿಸಿ ನಿಯಮ ಮೀರಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಅಲೆಗಳ ಅಬ್ಬರ, ಅಪಾಯದ ಬಗ್ಗೆ ತಿಳಿಹೇಳುವವರೇ ಇಲ್ಲದೆ ಪ್ರವಾಸಿಗರು ಸಮುದ್ರಕ್ಕೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಅಕ್ರಮ ರೆಸಾರ್ಟ್ ತೆರವಿಗೆ ನ್ಯಾಯಾಲಯದ ಆದೇಶವಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳದೆ ಮೌನ ವಹಿಸಿದ್ದು, ಈ ಅವಘಡಕ್ಕೆ ಜಿಲ್ಲಾಡಳಿವೇ ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್