ಪ್ರಜಾ ಸೇವೆ ಮೂಲಕ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಜನರ ಸಂಕಷ್ಟ ಆಲಿಸುವರು: ದರ್ಶನ್

KannadaprabhaNewsNetwork |  
Published : Sep 27, 2026, 01:15 AM IST
52 | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾ ಸೇವಾ ಆಂದೋಲನ ಎಂಬ ಮಹತ್ವದ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರವೇ ಜನರ ಮನೆ ಬಾಗಿಲಿಗೆ ಸೇವೆ ಒದಗಿಸಲು ಬಂದಿದೆ. ಈ ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸವಾಗಲಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಜನರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲಿಯ ಬೇಕಿಲ್ಲ, ಪ್ರಜಾ ಸೇವಾ ಆಂದೋಲನ ಮೂಲಕ ಎಲ್ಲ ಇಲಾಖೆಯ ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ಜನರ ಸಂಕಷ್ಟಗಳನ್ನು ಆಲಿಸಲಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾ ಸೇವಾ ಆಂದೋಲನ ಎಂಬ ಮಹತ್ವದ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರವೇ ಜನರ ಮನೆ ಬಾಗಿಲಿಗೆ ಸೇವೆ ಒದಗಿಸಲು ಬಂದಿದೆ. ಈ ಕಾರ್ಯಕ್ರಮದಲ್ಲಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕೆಲಸವಾಗಲಿದೆ, ಕೆಲವು ಸಮಸ್ಯೆಗಳಿಗೆ 15 ದಿನಗಳ ಕಾಲಾವಕಾಶದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಯಬೇಕು, ಇಲ್ಲವಾದಲ್ಲಿ ಅವರಿಗೆ ಸೂಕ್ತ ಕಾರಣ ನೀಡಿ ಹಿಂಬರಹವನ್ನು ನೀಡುವ ಮೂಲಕ ಅರ್ಜಿಗೆ ತಾರ್ಕಿಕ ಅಂತ್ಯ ದೊರಕಲಿದೆ, ಆದ್ದರಿಂದ ಸಾರ್ವಜನಿಕರು ತಾಳ್ಮೆಯಿಂದ ನಿಮ್ಮ ಸಂಕಷ್ಟವನ್ನು ಕಾರ್ಯಕ್ರಮದಲ್ಲಿ ಹೇಳಿಕೊಂಡು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದರು.

ದಸರಾ ಒಳಗೆ ಹುರ ಏತ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು.

ಹುರ ಏತ ನೀರಾವರಿ ಯೋಜನೆಯನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಿದ್ದು, ದಸರಾ ಹಬ್ಬದ ಒಳಗೆ ಹುರ, ಯಡಿಯಾಲ ಭಾಗದ 23 ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಲಿದೆ, ಈ ಯೋಜನೆ ಕಳಲೆ ಕೇಶವಮೂರ್ತಿ ರವರು ಶಾಸಕರಾಗಿದ್ದಾಗ ಅನುಷ್ಠಾನವಾಗಿತ್ತು, ಆದರೆ 2018 ರಿಂದ 2023ರ ವರೆಗೆ ಕೆಲಸ ನಿಂತು ಹೋಗಿದ್ದ ಪರಿಣಾಮ, 2023ರಲ್ಲಿ ಮತ್ತೆ ಕೆಲಸ ಪ್ರಾರಂಭವಾಗಿ ಈಗಾಗಲೇ ಪ್ರಾಯೋಗಿಕ ಪರೀಕ್ಷೆಯು ನಡೆದಿದೆ, ದಸರಾ ಒಳಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಹುಲ್ಲಹಳ್ಳಿ ಹೋಬಳಿಯಲ್ಲಿ ಮಾನವ- ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಚೈನ್ ಲಿಂಕ್ ಮೆಸ್ ಅಳವಡಿಕೆ ಕಾರ್ಯಕ್ರಮ ನಡೆಸಲಾಗಿದೆ, ಇನ್ನು ದೇವೇಗೌಡನಪುರ ಭಾಗದಲ್ಲಿ ಬಾಕಿ ಉಳಿದಿರುವ ಪ್ರದೇಶಗಳಿಗೆ ಚೈನ್ ಲಿಂಕ್ ಮೆಸ್ ಅಳವಡಿಕೆ ಮಾಡುವ ಮೂಲಕ ಮಾನವ ಪ್ರಾಣಿ ಸಂಘರ್ಷದ ದಿನನಿತ್ಯದ ಹೋರಾಟಕ್ಕೆ ಅಂತ್ಯ ಹಾಡಲಾಗುವುದು ಎಂದರು.

ಅಲ್ಲದೆ ಹುಲ್ಲಹಳ್ಳಿ ಭಾಗದಲ್ಲಿ ಎಸ್ಇಪಿ, ಟಿಎಸ್ಪಿ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕೆಲಸ ನಡೆದಿದೆ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಾಮಾನ್ಯ ವರ್ಗದ ಬೀದಿಯಲ್ಲೂ ಸಹ ಸಿಸಿ ರಸ್ತೆ ನಿರ್ಮಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ, ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ಜನರು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದರು.

ವಿಕಲಚೇತನರಿಗೆ ಮಾಸಾಸನ ಪ್ರಮಾಣ ಪತ್ರವನ್ನು ವಿತರಿಸಲಾಯಿತು, ಸುಮಾರು ನೂರಕ್ಕೂ ಹೆಚ್ಚು ಅರ್ಜಿಗಳು ನೋಂದಾವಣೆಗೊಂಡು ಶಾಸಕರ ಬಳಿ ಜನರು ತಮ್ಮ ಅಹವಾಲು ಸಲ್ಲಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ತಹಸೀಲ್ದಾರ್ ಸ್ಮಿತಾರಾಮು, ಉಪ ತಹಸಿಲ್ದಾರ್ , ಶಿರಸ್ತೆದಾರ್ ರಾಜು ಶಿವಕುಮಾರ್, ಪ್ರಕಾಶ್, ರಾಜು, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ಸರ್ ಅಹಮದ್, ಮುಖಂಡರಾದ ಕುರಿಹುಂಡಿ ರಾಜು, ಅಭಿನಂದನ್ ಪಟೇಲ್, ಹಾಡ್ಯ ಜಯರಾಮ, ಹಾಡ್ಯ ಗ್ರಾಮ ಮಾಜಿ ಅಧ್ಯಕ್ಷ ಹರೀಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಲೈಮಾಕ್ಸ್ ತಲುಪಿದ ಸಿಟಿ ಇನ್‌ಸ್ಟಿಟ್ಯೂಟ್ ಸಭೆ
ರಾಣೀಕೆರೆ ಒತ್ತುವರಿ ಸರ್ವೆ ಕಾರ್ಯಕ್ಕೆ ಗ್ರಹಣ