ಕನ್ನಡಪ್ರಭ ವಾರ್ತೆ ಬೆಳಗಾವಿ
ಮನುಷ್ಯ ಕೇವಲ ತನ್ನ ಸ್ವಾರ್ಥಕ್ಕಾಗಿ ಜೀವಿಸದೇ ಸಮಾಜಕ್ಕಾಗಿ ಬದುಕಬೇಕು. ಮನುಷ್ಯನ ಶರೀರ ಇರುವುದೇ ಪರೋಪಕಾರಕ್ಕಾಗಿ. ಪ್ರಾಣಿ, ಪಶು, ಪಕ್ಷಿಗಳು ತಮಗಾಗಿ ಅಲ್ಲದೆ ಪ್ರಕೃತಿಗಾಗಿ ಬದುಕುವಂತೆ ಮನುಷ್ಯ ಸಹ ತನಗಾಗಿ ಅಲ್ಲದೇ ಜನಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.ಬೈಲಹೊಂಗಲ ತಾಲೂಕಿನ ಮರಡಿನಾಗಲಾಪೂರದ ಗದ್ದಿಕರವಿನಕೊಪ್ಪ ಕ್ರಾಸ್ ಬಳಿ ಗುರು ರೋಡ್ ಲೈನ್ಸ್ ನ ಗುರುದೇವ ಪಾಟೀಲ ಅವರು ನಿರ್ಮಿಸಿದ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಸೇವಾ ಮನೋಭಾವ ಬರುವುದು ಸಂಸ್ಕಾರ ಬಲದಿಂದ ಮಾತ್ರ. ವ್ಯಕ್ತಿ ಸಂಸ್ಕಾರವಂತನಾದರೆ ಆತ ಮಹಾದೇವನಾಗಬಲ್ಲ ಎಂದು ಹೇಳಿದರು.
ಕಲ್ಯಾಣ ಮಂಟಪ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಭಾಜಪಾ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಆಭಾರಿಯಾಗಿದ್ದೇನೆ. ಇಲ್ಲಿಯ ಜನತೆಯ ಪ್ರೀತಿ ಆಶೀರ್ವಾದದಿಂದಲೇ ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯಿತು. ಬೆಳಗಾವಿಗರ ಪ್ರೀತಿ, ಆಶೀರ್ವಾದ ಸದಾ ನನ್ನ ಹೃದಯದಲ್ಲಿದೆ ಎಂದರು.ಇದೇ ವೇಳೆ ಮೈತ್ರಾದೇವಿ ಯಡಿಯೂರಪ್ಪ ಭೋಜನಾಲಯ ಉದ್ಘಾಟಿಸಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ ಭೂಮಿ, ಪ್ರಕೃತಿ, ನೆಲ, ಜಲ ಇವುಗಳನ್ನು ತಾಯಿ ಸ್ವರೂಪದಲ್ಲಿ ನೋಡುವುದು ಭಾರತೀಯ ಸಂಸ್ಕೃತಿ. ಇದೇ ಸಂಸ್ಕೃತಿಯಲ್ಲಿ ಬೆಳೆದಿರುವ ನಾವು ನಾಡಿನ ನೆಲ ಮತ್ತು ಜಲಗಳ ಸಂರಕ್ಷಣೆಗಾಗಿ ಕಟಿಬದ್ಧರಾಗಬೇಕು. ಬಿ.ಎಸ್.ಯಡಿಯೂರಪ್ಪನವರು ಕೇವಲ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಂಬಿಕೆಯನ್ನಿಟ್ಟು ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸಿದರು. ನಾನು ಸಹ ಅದೇ ದಾರಿಯಲ್ಲಿ ಮುಂದುವರೆಯುತ್ತೇನೆ ಎಂದರು.
ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ ಬಡವರು, ದೀನ ದಲಿತರು, ರೈತರು ಹಾಗೂ ನೊಂದವರ ಪರವಾಗಿ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿನಲ್ಲಿ ಕಲ್ಯಾಣ ಮಂಟಪ ಲೋಕಾರ್ಪಣೆಯಾಗುತ್ತಿರುವುದು ಸಂತೋಷದ ಸಂಗತಿ. ಇದು ಕೇವಲ ಮದುವೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜ ಸುಧಾರಣೆಯ ಕಾರ್ಯಗಳಿಗೂ ಉಪಯೋಗವಾಗಲಿ ಎಂದರು.ನಿಡಸೋಶಿ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮುರುಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಧಾರವಾಡ ಮುರುಗಾ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಗುರು ಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜ ಯೋಗೇಂದ್ರ ಸ್ವಾಮೀಜಿ, ಶೇಗುಣಿಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ, ಅರಳಿ ಕಟ್ಟಿ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ನಿವೃತ್ತ ಮುಖ್ಯ ಅಭಿಯಂತರ ವಿರೂಪಾಕ್ಷಿ ಯಮಕನಮರಡಿ, ಮಾಜಿ ಸಂಸದ ಮಂಗಲ ಅಂಗಡಿ, ಶಾಸಕ , ವಿಟ್ಟಲ್ ಹಲಗೆಕರ್, ಮಾಜಿ ಶಾಸಕರಾದ ವಿ.ಐ. ಪಾಟೀಲ, ಜಗದೀಶ ಮೆಟ್ಟಿಗುಡ್, ಸಂಜಯ ಪಾಟೀಲ, ಅನಿಲ ಬೆನಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗುರು ರೋಡ್ ಲೆನ್ಸ್ ನ ಗುರುದೇವ ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ನಯನ ಗಿರಿಗೌಡರ ಪ್ರಾರ್ಥಿಸಿದರು. ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿದರು.