ಮಾದಾರ ಶ್ರೀಗಾಗಿ ಟಿಕೆಟ್ ಘೋಷಣೆ ತಡವಾಗ್ತಿದೆಯಾ?

KannadaprabhaNewsNetwork |  
Published : Mar 14, 2024, 02:04 AM IST
ಮಾದಾರ ಶ್ರೀ | Kannada Prabha

ಸಾರಾಂಶ

ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಹೆಸರು ಅಂತಿಮಗೊಳಿಸಲು ಬಿಜೆಪಿ ಏನಾದರೂ ಕಸರತ್ತು ನಡೆಸುತ್ತಿದೆಯೇ ಎಂಬ ಅನುಮಾನಗಳು ಮೂಡಿವೆ.

ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಕಣಕ್ಕಿಳಿಸುವ ಕರ್ನಾಟಕದ ಮೊದಲನೆ ಪಟ್ಟಿಯನ್ನು ಬಿಜೆಪಿ ಬುಧವಾರ ಸಂಜೆ ಬಿಡುಗಡೆ ಮಾಡಿದ್ದು ಚಿತ್ರದುರ್ಗ ಕ್ಷೇತ್ರಕ್ಕೆ ಯಾರು ಎಂಬುದನ್ನು ಹೇಳಲಾಗಿಲ್ಲ. ಹಾಗಾಗಿ ಇರುವ ಮೂರು ಮಂದಿ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ಎಂಬ ಪ್ರಶ್ನೆಗೆ ಉತ್ತರ ಗೌಪ್ಯ. ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಹೆಸರು ಅಂತಿಮಗೊಳಿಸಲು ಬಿಜೆಪಿ ಏನಾದರೂ ಕಸರತ್ತು ನಡೆಸುತ್ತಿದೆಯೇ ಎಂಬ ಅನುಮಾನಗಳು ಮೂಡಿವೆ.

ಕೇಂದ್ರದ ಹಾಲಿ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ದನ ಸ್ವಾಮಿ ಹಾಗೂ ಯುವ ಮುಖಂಡ ರಘು ಚಂದನ್ ಸದ್ಯ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅದೇಕೋ ಎ.ನಾರಾಯಣಸ್ವಾಮಿ ಈ ಬಾರಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಎರಡು ತಿಂಗಳ ಹಿಂದೆ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ದರು. ಈ ಕಾರಣಕ್ಕಾಗಿಯೇ ಉಳಿದ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದರು. ಮಾಜಿ ಸಂಸದ ಜನಾರ್ದನ ಸ್ವಾಮಿ ಕಳೆದ ಎರಡು ದಿನಗಳಿಂದ ಹೈಕಮಾಂಡ್ ಮಟ್ಟದ ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಮಾದಾರಚೆನ್ನಯ್ಯ ಸ್ವಾಮೀಜಿ ಕಣಕ್ಕಿಳಿಸುವ ಇಂಗಿತ ಕೂಡ ಬಿಜೆಪಿಗೆ ಇದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಮಾದಾರಶ್ರೀ ಹೆಸರು ಸುಳಿದಾಡಿತ್ತು. ಅಂತಿಮವಾಗಿ ಆನೇಕಲ್ ನಿಂದ ನಾರಾಯಣಸ್ವಾಮಿ ಆಗಮಿಸಿ ಗೆದ್ದು ಕೇಂದ್ರದಲ್ಲಿ ಸಚಿವರಾಗಿದ್ದರು. ಚಿತ್ರದುರ್ಗ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲು ಆಗಿರುವುದರಿಂದ ಕಾಂಗ್ರೆಸ್ ಪಕ್ಷ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಏನಾದರೂ ಮಾದಿಗರೇತರಿಗೆ ಟಿಕೆಟ್ ನೀಡಲು ಮುಂದಾದಲ್ಲಿ ಬೋವಿ ಸಮುದಾಯದ ಜನಾರ್ದನಸ್ವಾಮಿ ಇಲ್ಲವೇ ರಘುಚಂದನ್ ಹೆಸರುಗಳು ಮುಂಚೂಣಿಗೆ ಬರುತ್ತವೆ.

ಕಳೆದ ಚುನಾವಣೆಯಲ್ಲಿಯೇ ಸ್ಪೃಶ್ಯರು ವರ್ಸೆಸ್ ಅಸ್ಪೃಶ್ಯರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿದ್ದವು. ಬಿಜೆಪಿಯಿಂದ ನಾರಾಯಣಸ್ವಾಮಿ ಗೆದ್ದಿದ್ದರು. ಹಾಗಾಗಿ ಈ ಬಾರಿ ಯಾವ ಫಾರ್ಮುಲಾ ಪಕ್ಷಗಳು ಅನುಸರಿಸುತ್ತವೆ ಎಂಬುದು ಮಾತ್ರ ಇನ್ನೂ ನಿಗೂಢ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ