ಅನಂತಕುಮಾರ ಹೆಗಡೆಗೆ ಟಿಕೆಟ್ ಸಸ್ಪೆನ್ಸ್

KannadaprabhaNewsNetwork |  
Published : Mar 14, 2024, 02:03 AM IST

ಸಾರಾಂಶ

ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕ್ಷೀಣಿಸಿದೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಹೆಚ್ಚಿರುವುದರಿಂದ ಸಹಜವಾಗಿ ಎಲ್ಲ ಆಕಾಂಕ್ಷಿಗಳು ಕೊನೇ ಗಳಿಗೆಯ ಪ್ರಯತ್ನ ಆರಂಭಿಸಿದ್ದಾರೆ.

ವಸಂತಕುಮಾರ್ ಕತಗಾಲ

ಕಾರವಾರ: ಲೋಕಸಭೆ ಸ್ಪರ್ಧಿಗಳ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಆದರೆ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಯ ಹೆಸರು ಪ್ರಕಟವಾಗದೆ ಇರುವುದರಿಂದ ಸಂಸದ ಅನಂತಕುಮಾರ ಹೆಗಡೆಗೆ ಟಿಕೆಟ್ ತಪ್ಪುವ ಸಾಧ್ಯತೆ ದಟ್ಟವಾಗಿದೆ.

ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ನೀಡುವುದಾದಲ್ಲಿ ಬುಧವಾರ ಬಿಡುಗಡೆಯಾದ ಪಟ್ಟಿಯಲ್ಲೇ ಅವರ ಹೆಸರು ಸೇರ್ಪಡೆಯಾಗಿರುತ್ತಿತ್ತು. ಜತೆಗೆ ಅನಂತಕುಮಾರ ಹೆಗಡೆ ಅವರ ಹಾಗೆ ಹಿಂದುತ್ವದ ಫೈಯರ್ ಬ್ರಾಂಡ್ ಆಗಿರುವ ಪ್ರತಾಪ ಸಿಂಹ, ನಳೀನಕುಮಾರ ಕಟೀಲ್ ಅವರಿಗೂ ಟಿಕೆಟ್ ನೀಡಲಾಗಿಲ್ಲ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸಹ ಟಿಕೆಟ್ ವಂಚಿತರಾಗಿದ್ದಾರೆ. ಹೀಗಿರುವಾಗ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕ್ಷೀಣಿಸಿದೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಹೆಚ್ಚಿರುವುದರಿಂದ ಸಹಜವಾಗಿ ಎಲ್ಲ ಆಕಾಂಕ್ಷಿಗಳು ಕೊನೇ ಗಳಿಗೆಯ ಪ್ರಯತ್ನ ಆರಂಭಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಹೆಗಡೆ ಬರಲೇ ಇಲ್ಲ. ಹೋಗಲಿ, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಒಂದು ಹೇಳಿಕೆಯನ್ನೂ ಕೊಡಲಿಲ್ಲ. ಇದಕ್ಕಿಂತ ಮೇಲಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿಂಬದಿಯಿಂದ ಬೆಂಬಲ ನೀಡಿದರು ಎಂಬ ಗಂಭೀರ ಆಪಾದನೆ ಅವರ ಮೇಲಿದೆ. ವಿಧಾನಸಭೆ ಚುನಾವಣೆ ಬಳಿಕ ಕಾರವಾರಕ್ಕೆ ಆಗಮಿಸಿದ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರನ್ನು ಬಹಿರಂಗವಾಗಿ ಆಲಂಗಿಸಿದ್ದು ಇದಕ್ಕೆ ಪುಷ್ಟಿ ನೀಡಿತ್ತು. ನರೇಂದ್ರ ಮೋದಿ ಪ್ರಚಾರಕ್ಕೆ ಅಂಕೋಲಾಕ್ಕೆ ಬಂದರೂ ಹೆಗಡೆ ಅತ್ತ ಸುಳಿಯಲಿಲ್ಲ. ನಾಲ್ಕೂವರೆ ವರ್ಷಗಳ ಕಾಲ ಪಕ್ಷಕ್ಕೆ ಅವರು ನೀಡಿದ ಕೊಡುಗೆ ಶೂನ್ಯ ಎಂದರೂ ತಪ್ಪಾಗಲಾರದು. ಇವರ ನಿಷ್ಕ್ರಿಯತೆಯಿಂದ ಪಕ್ಷಕ್ಕೆ ಹಾನಿಯುಂಟಾಗಿದೆ ಎಂಬ ಆರೋಪ ಇವರ ಮೇಲಿದೆ.

ಇದರ ಜತೆ ಸಂವಿಧಾನ ತಿದ್ದುಪಡಿ, ಬದಲಾವಣೆಯ ಗದ್ದಲ ಅವರಿಗೆ ಟಿಕೆಟ್ ನೀಡುವ ಅವಕಾಶವನ್ನೂ ಕಸಿದುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಹೆಗಡೆ ಈ ಬಾರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿ ಕೆಲ ದಿನಗಳಿಂದ ಜಿಲ್ಲಾದ್ಯಂತ ಸಂಚರಿಸುತ್ತಿದ್ದಾರೆ. ಇವೆಲ್ಲವುಗಳ ನಡುವೆ ಅವರಿಗೆ ಟಿಕೆಟ್ ದೊರೆತಲ್ಲಿ ಅದು ಅಚ್ಚರಿಯ ಸಂಗತಿಯಾಗಲಿದೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ