ನೆಲಜಿ-ಕುಂಜಿಲ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

KannadaprabhaNewsNetwork |  
Published : Jan 17, 2024, 01:47 AM IST
16-ಎನ್ ಪಿ ಕೆ-1.     ನೆಲಜಿಗ್ರಾಮದಲ್ಲಿ ಅರಣ್ಯ ಇಲಾಖೆಯ  ಗಸ್ತು ಅರಣ್ಯಪಾಲಕರಾದಕಾಳೇಗೌಡ ,ಸೋಮಣ್ಣ ಗೌಡ, ಸಿಬ್ಬಧಿ ರಾಹುಲ್ ಕೆ.ಎಲ್ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆಹುಲಿ ಕಂಡು ಬಂದಿದೆ ಎನ್ನಲಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು.16-ಎನ್ ಪಿ ಕೆ-2.ಹೆಜ್ಜೆ ಗುರುತು  | Kannada Prabha

ಸಾರಾಂಶ

, ಹುಡಿ ಮಣ್ಣಿನ ರಸ್ತೆಯಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಗಸ್ತು ಅರಣ್ಯಪಾಲಕ ಕಾಳೇಗೌಡ ಮಾಹಿತಿ ನೀಡಿದ್ದಾರೆ. ನೆಲಜಿ ಮತ್ತು ಕುಂಜಿಲ ಎರಡು ಗ್ರಾಮಗಳ ಜನರು ಎಚ್ಚರಿಕೆಯಿಂದ ಇದ್ದು, ಅಪಾಯಕಾರಿ ಕಾಡು ಪ್ರಾಣಿಗಳು ಕಂಡು ಬಂದರೆ ಕೂಡಲೇ ನಮ್ಮ ಗಮನಕ್ಕೆ ತರುವಂತೆ ಅರಣ್ಯ ಇಲಾಖೆಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಭಾಗದಲ್ಲಿ ಕಾಡು ಕುರಿಯೊಂದನ್ನು ಹುಲಿಯೊಂದು ಅಟ್ಟಿಸಿಕೊಂಡು ಹೋಗಿರುವುದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ನೆಲಜಿ ಗ್ರಾಮದ ಅಚ್ಚಾಂಡಿರ ಹಾಗೂ ಕಲಿಯಾಟಂಡ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಚೀಯಕಪೂವಂಡ ಉಮೇಶ್ ಎಂಬವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆ ಕಾರ್ಮಿಕ ತಮಿಳರ ವೇಲು ಎಂಬಾತ ಕೆಲಸ ನಿರ್ವಹಿಸುತ್ತಿರುವಾಗ ಅಲ್ಲೇ ಸಮೀಪದ ಕಾಡಿನಲ್ಲಿ ಕಾಡು ಕುರಿಯನ್ನು ಹುಲಿ ಅಟ್ಟಿಸಿಕೊಂಡು ಹೋಗಿರುವುದನ್ನು ಕಂಡಿರುವುದಾಗಿ ಉಮೇಶ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಲಭ್ಯವಾದ ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕರಾದ ಕಾಳೇಗೌಡ, ಸೋಮಣ್ಣ ಗೌಡ, ಸಿಬ್ಬಂದಿ ರಾಹುಲ್ ಕೆ.ಎಲ್. ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಹುಲಿ ಕಂಡು ಬಂದಿದೆ ಎನ್ನಲಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇಲ್ಲಿ ಹೊಸತಾಗಿ ನಿರ್ಮಾಣ ಮಾಡಿದ ರಸ್ತೆ ಇದ್ದು, ಹುಡಿ ಮಣ್ಣಿನ ರಸ್ತೆಯಲ್ಲಿ ಕಾಡುಪ್ರಾಣಿಯ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಗಸ್ತು ಅರಣ್ಯಪಾಲಕ ಕಾಳೇಗೌಡ ಮಾಹಿತಿ ನೀಡಿದ್ದಾರೆ.

ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಾಳೆಯಂಡ ಅಪ್ಪಣ್ಣ ಪ್ರತಿಕ್ರಿಯಿಸಿ, ನೆಲಜಿ ಗ್ರಾಮದ ಮಡಿವಾಳರ ಶಾರದ ಅವರ ಸಾಕು ನಾಯಿಯನ್ನು ವಾರದ ಹಿಂದೆ ಪ್ರಾಣಿಯೊಂದು ಕಚ್ಚಿಕೊಂಡು ಹೋಗಿದ್ದು, ಇದು ಚಿರತೆ ಆಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಸಮೀಪದ ಮಲ್ಮ ಬೆಟ್ಟದಲ್ಲಿ ಚಿರತೆಯ ಹಿಕ್ಕೆಯನ್ನು ಗ್ರಾಮಸ್ಥರು ನೋಡಿದ್ದಾರೆ ಎಂದು ತಿಳಿಸಿದ್ದಾರೆ.

ನೆಲಜಿ ಮತ್ತು ಕುಂಜಿಲ ಎರಡು ಗ್ರಾಮಗಳ ಜನರು ಎಚ್ಚರಿಕೆಯಿಂದ ಇದ್ದು, ಅಪಾಯಕಾರಿ ಕಾಡು ಪ್ರಾಣಿಗಳು ಕಂಡು ಬಂದರೆ ಕೂಡಲೇ ನಮ್ಮ ಗಮನಕ್ಕೆ ತರುವಂತೆ ಅರಣ್ಯ ಇಲಾಖೆಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ