ಬಳ್ಳಾರಿ: ಆಂಧ್ರಪ್ರದೇಶದ ಗಡಿ ಭಾಗದಿಂದ ಜಿಲ್ಲೆಗೆ ಅಕ್ರಮವಾಗಿ ಕಲಬೆರಕೆ ಸೇಂದಿ ಸರಬರಾಜಾಗುತ್ತಿದ್ದು, ಆಂಧ್ರಪ್ರದೇಶದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿ ಜಂಟಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಚೆ ಇಲಾಖೆಯ ಮೂಲಕ ಅನುಮಾನಾಸ್ಪದ ಪಾರ್ಸೆಲ್ಗಳು ರವಾನೆಯಾಗುವುದನ್ನು ತಡೆಯಲು ನಿಯಮ ಬಿಗಿಗೊಳಿಸಬೇಕು. ಒಂದೇ ವ್ಯಕ್ತಿಗೆ ಅಥವಾ ಒಂದೇ ವಿಳಾಸಕ್ಕೆ ಪದೇಪದೇ ಬರುವ ಪಾರ್ಸೆಲ್ಗಳ ಕುರಿತು ಮಾಹಿತಿ ಕಲೆಹಾಕಬೇಕು.ಯಾವುದೇ ಕಾರಣಕ್ಕೂ ಪಾರ್ಸೆಲ್ ರಸ್ತೆಬದಿಯಲ್ಲಾಗಲಿ ಅಥವಾ ಹೊರಗಡೆ ನೀಡದೆ, ಕೇವಲ ನಿಗದಿತ ವಿಳಾಸದ ಮನೆಬಾಗಿಲಿಗೆ ಮಾತ್ರ ತಲುಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅನಧಿಕೃತ ಮದ್ಯ ಮಾರಾಟ ತಡೆಗೆ ಖಡಕ್ ಸೂಚನೆ: ಗ್ರಾಮೀಣ ಭಾಗದ ಸಣ್ಣ ಪುಟ್ಟ ಅಂಗಡಿ, ಡಾಬಾಗಳು ಹಾಗೂ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ದೂರು ಕೇಳಿಬಂದಿದ್ದು, ಅಬಕಾರಿ ಉಪ ನಿರೀಕ್ಷಕರು ಖುದ್ದು ಸ್ಥಳಗಳಿಗೆ ತೆರಳಿ ದಾಳಿ ನಡೆಸಿ, ಅಕ್ರಮ ತಾಣ ಮುಟ್ಟುಗೋಲು ಹಾಕಿಕೊಳ್ಳಬೇಕು. ಪರವಾನಗಿ ಇಲ್ಲದ ಸ್ಥಳಗಳನ್ನು ಸೀಜ್ ಮಾಡಬೇಕು. ಹಕ್ಕಿ-ಪಿಕ್ಕಿ, ಶಿಖಾರಿ ಸೇರಿದಂತೆ ಅಲೆಮಾರಿ ಸಮುದಾಯಗಳು ಅಕ್ರಮ ಮದ್ಯ ತಯಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗದಂತೆ ಮನವೊಲಿಸುವ ಕಾರ್ಯ ಮಾಡಬೇಕು. ಈಗಾಗಲೇ ಹಲವರನ್ನು ಇಂತಹ ಕೆಲಸಗಳಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗಿದ್ದು, ಅವರಿಗೆ ಪರ್ಯಾಯ ಉದ್ಯೋಗಾವಕಾಶ, ಕೃಷಿ ಭೂಮಿ ಹಂಚಿಕೆ ಹಾಗೂ ಸರ್ಕಾರಿ ಯೋಜನೆ ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದರು.ಆಂಧ್ರಪ್ರದೇಶ ಗಡಿಯಿಂದ ಬರುವ ಮೆಥನಾಲ್ ದುರ್ಬಳಕೆಯಾಗದಂತೆ ಮತ್ತು ಅಕ್ರಮ ಮದ್ಯ ತಯಾರಿಕೆಗೆ ಬಳಕೆಯಾಗದಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗಳು ನಿಗಾ ಇರಿಸಿವೆ. ಯಾವುದೇ ಕಾರಣಕ್ಕೂ ಈ ರಾಸಾಯನಿಕ ಹೊರಗೆ ಸೋರಿಕೆಯಾಗದಂತೆ ಎಸ್ಕಾರ್ಟ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.