ಮಹೇಂದ್ರ ದೇವನೂರು
ಪ್ರಧಾನಿ ನರೇಂದ್ರ ಮೋದಿ ಅವರಿಂದ ಶುಕ್ರವಾರ ಉದ್ಘಾಟನೆಗೊಳ್ಳುತ್ತಿರುವ ‘ಕಾಸ್ಮಾಸ್-ಮೈಸೂರು ತಾರಾಲಯ’ವು ಖಗೋಳ ಅಧ್ಯಯನಕ್ಕೆ ಹೊಸ ದಿಕ್ಕು ನೀಡಲಿದ್ದು, ಇದು ಭಾರತದ ಮೊದಲ ಓರೆಯಾದ (ಟಿಲ್ಟೆಡ್) ಎಲ್‌ಇಡಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ ನಿರ್ಮಿಸಿರುವ ಈ ತಾರಾಲಯವನ್ನು ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ವಿವಿಗೆ ಸೇರಿದ 3 ಎಕರೆ ಪ್ರದೇಶದಲ್ಲಿ ಸುಮಾರು 115 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.ದೇಶದಲ್ಲಿಯೇ ಮೊದಲ ಓರೆಯಾದ ಗೋಲಾಕಾರದ ಎಲ್‌ಇಡಿ ತಾರಾಲಯ ಇದಾಗಿದ್ದು, 15 ಮೀ.ವ್ಯಾಸದಿಂದ ಕೂಡಿದೆ. 15 ಡಿಗ್ರಿ ಕೋನದಲ್ಲಿ ಓರೆಯಾಗಿದ್ದು, ಇದು 8ಕೆ ರೆಸಲ್ಯೂಶನ್ ಮತ್ತು 42 ಮೆಗಾಪಿಕ್ಸೆಲ್ ಪ್ರದರ್ಶನ ನೀಡುತ್ತದೆ. ಉಪನ್ಯಾಸ ಸಭಾಂಗಣ, ಪ್ರಯೋಗಾಲಯ ಸೌಲಭ್ಯವಿರುವ ತರಗತಿಗಳು, ಕಂಪ್ಯೂಟರ್ ತರಬೇತಿ, ಪ್ರದರ್ಶನ ಸಭಾಂಗಣ, ವಸ್ತು ಸಂಗ್ರಹಾಲಯ, ಹೊರಾಂಗಣ ಪ್ರದರ್ಶನ ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಇದು ಹೊಂದಿದೆ. ಸ್ಕೈ ಥಿಯೇಟರ್ ಮತ್ತು ಉಪನ್ಯಾಸ ಸಭಾಂಗಣ ಎರಡರಲ್ಲೂ ತಲಾ ಸುಮಾರು 160 ಮಂದಿ ಕೂರಬಹುದಾದ ಆಸನ ವ್ಯವಸ್ಥೆ ಇಲ್ಲಿದೆ.
ಖಗೋಳಶಾಸ್ತ್ರದ ಪ್ರದರ್ಶನಗಳ ಜೊತೆಗೆ, ಸ್ಕೈ ಥಿಯೇಟರ್, ಪ್ರತಿ ಪ್ರದರ್ಶನದ ಮೊದಲು ಮೈಸೂರಿನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ಪರಿಚಯಾತ್ಮಕ ಚಿತ್ರ ಪ್ರದರ್ಶಿಸುತ್ತದೆ, ಇದು ವಿಜ್ಞಾನ ಮತ್ತು ಖಗೋಳಶಾಸ್ತ್ರದೊಂದಿಗೆ ನಗರದ ಸಂಪರ್ಕ ತೋರಿಸುತ್ತದೆ.ಸ್ಕೈ ಥಿಯೇಟರ್ ಪ್ರದರ್ಶನಗಳು:
2022ರಿಂದ ಮೈಸೂರು ಪ್ರದೇಶದಲ್ಲಿ ನಡೆದಿರುವ ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮಗಳ ಮೇಲೆ ಈ ಯೋಜನೆ ನಿರ್ಮಾಣಗೊಂಡಿದೆ. ಇವುಗಳಲ್ಲಿ (ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ) ಶಾಲಾ-ಕಾಲೇಜು ಜನಜಾಗೃತಿ ಕಾರ್ಯಕ್ರಮ, ದೂರದರ್ಶಕ ಆಧಾರಿತ ರಾತ್ರಿ ಆಕಾಶ ವೀಕ್ಷಣೆ, ಪ್ರಾಯೋಗಿಕ ವಿಜ್ಞಾನ ಚಟುವಟಿಕೆ, ಪ್ರದರ್ಶನ, ನಾಗರಿಕ ವಿಜ್ಞಾನ ಉಪಕ್ರಮ ಮತ್ತು ಶಿಕ್ಷಕರ ತರಬೇತಿ ಕಾರ್ಯಾಗಾರ ಸೇರಿವೆ.
ಈ ಚಟುವಟಿಕೆಗಳ ಜೊತೆಗೆ, ಮುಖ್ಯವಾಗಿ ಪ್ರಾಚ್ಯವಿದ್ಯಾ ಸಂಶೋಧನಾಲಯ ವಿಭಾಗದ ಮಧ್ಯಕಾಲೀನ ಖಗೋಳಶಾಸ್ತ್ರದ ಹಸ್ತಪ್ರತಿ ಗುರುತಿಸುವ, ಅನುವಾದಿಸುವ ಮತ್ತು ವಿಶ್ಲೇಷಿಸುವ ಕಾರ್ಯಕ್ರಮ ಸುಮಾರು 50 ಹಸ್ತಪ್ರತಿಯನ್ನು ಗುರುತಿಸಿದೆ. ಇವುಗಳಲ್ಲಿ ನಾಲ್ಕನ್ನು ಮೊದಲ ಬಾರಿಗೆ ವಿವರವಾಗಿ ವಿಶ್ಲೇಷಿಸಲಾಗಿದೆ.