ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದ್ದು, ಆಕಾಂಕ್ಷಿಗಳು ಆ. 12ರಿಂದಲೇ ಉಪ ವಿಭಾಗಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು. ಆ. 22 ರಂದು ಬೆಳಿಗ್ಗೆ 9 ರಿಂದ 11 ಗಂಟೆಯೊಳಗೆ ಉಮೇದುವಾರಿಕೆ ಸಲ್ಲಿಸಬಹುದು. ಅಂದು ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಚಿಕ್ಕಮಗಳೂರು ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಸಂಖ್ಯಾಬಲದಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಎರಡನೇ, ಜೆಡಿಎಸ್ ಹಾಗೂ ಪಕ್ಷೇತರರು ಮೂರನೇ ಸ್ಥಾನದಲ್ಲಿವೆ. ಹಾಗಾಗಿ ಈ ಬಾರಿಯೂ ಕೂಡ ಬಿಜೆಪಿ ನಗರಸಭೆ ಯಲ್ಲಿ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತ.ಚಿಕ್ಕಮಗಳೂರು ನಗರಸಭೆಯಲ್ಲಿ 18 ಮಂದಿ ಬಿಜೆಪಿ ನಗರಸಭಾ ಸದಸ್ಯರಿದ್ದಾರೆ. ಈ ಪೈಕಿ 9 ಮಹಿಳೆಯರು ಇದ್ದಾರೆ. ಇವರುಗಳಲ್ಲಿ ಹೆಚ್ಚಿನ ಮಂದಿ ಅಧ್ಯಕ್ಷರ ಆಕಾಂಕ್ಷಿಗಳೇ ಹೆಚ್ಚು. ಹಾಲಿ ಇರುವ ಮಹಿಳಾ ಸದಸ್ಯರ ಪೈಕಿ ಕೆಲವರು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಸಹ ಇದ್ದಾರೆ. ಅದ್ದರಿಂದ ಹೊಸಬರಲ್ಲಿ ಅವಕಾಶ ಸಿಗುವ ಬಗ್ಗೆ ಉತ್ಸಾಹ ಹೆಚ್ಚಾಗಿದೆ.ಅಧಿಕಾರ ಹಂಚಿಕೆ: ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ಸ್ಪಷ್ಟ ಬಹುಮತ ಇದ್ದರೂ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕಾರ್ಯ ತಂತ್ರ ರೂಪಿಸುವಲ್ಲಿ ಎಡವಿದೆ. ಮೊದಲ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ವರಸಿದ್ದಿ ವೇಣುಗೋಪಾಲ್ ಅವರ ಧೋರಣೆಯಿಂದಾಗಿ ಇತರೆ ಸದಸ್ಯರು ಅಧಿಕಾರದಿಂದ ವಂಚಿತರಾದರು.
ಈ ರೀತಿಯ ತಪ್ಪು ಮತ್ತೆ ಆಗಬಾರದೆಂಬ ಉದ್ದೇಶದಿಂದ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗಿದೆ. ನಗರಸಭೆಯ ಮಾಜಿ ಅಧ್ಯಕ್ಷರ ನಡೆ ಬಿಜೆಪಿಗೆ ಪಾಠ ಕಲಿಸಿದೆ. ಅದ್ದರಿಂದ ಹಾಲಿ ಉಳಿದಿರುವ ಅವಧಿಯಲ್ಲಿ ಪಕ್ಷದ ನಿಷ್ಟಾವಂತರಿಗೆ ಅಧಿಕಾರವನ್ನು ಹಂಚಿಕೆ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಳ್ಳುತ್ತಿದೆ.