ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌

KannadaprabhaNewsNetwork |  
Published : Jan 03, 2025, 12:30 AM IST
2ಎಚ್‌ಪಿಟಿ1- ಹಂಪಿ ಉತ್ಸವದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಒಂದು ಝಲಕ್‌. | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಫೆ. 28 ಮತ್ತು ಮಾ. 1, 2ರಂದು ಮೂರು ದಿನಗಳವರೆಗೆ ಅದ್ಧೂರಿಯಾಗಿ ಉತ್ಸವ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ಉತ್ಸವ ನಡೆಯಲಿದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆದಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಫೆ. 28 ಮತ್ತು ಮಾ. 1, 2ರಂದು ಮೂರು ದಿನಗಳವರೆಗೆ ಅದ್ಧೂರಿಯಾಗಿ ಉತ್ಸವ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಈ ಬಾರಿ ಉತ್ಸವ ನಡೆಯಲಿದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆದಿದೆ.

ಹಂಪಿ ಉತ್ಸವದ ರೂವಾರಿ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು ನ. 3, 4 ಮತ್ತು 5ರಂದು ಉತ್ಸವ ನಡೆಸಲು ದಿನಾಂಕ ನಿಗದಿ ಮಾಡಿದ್ದರು. ಪಂಚಾಂಗದಲ್ಲೂ ದಿನಾಂಕ ಪ್ರಕಟ ಮಾಡಿದರೂ ಸರ್ಕಾರಗಳು ಮಾತ್ರ ಉತ್ಸವದ ದಿನಾಂಕ ಬದಲಾವಣೆ ಮಾಡುತ್ತಲೇ ಬರುತ್ತಿವೆ. ಹಾಗಾಗಿ ಸರ್ಕಾರ ಘೋಷಣೆ ಮಾಡಿದ ದಿನಾಂಕಗಳಂದೇ ಉತ್ಸವ ನಡೆಯುತ್ತಾ ಬರುತ್ತಿದೆ.

ಮುಖ್ಯಮಂತ್ರಿ ಉದ್ಘಾಟನೆ: ಫೆ. 28ರಿಂದ ಮೂರು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಹಂಪಿ ಉತ್ಸವದಲ್ಲಿ ಹಂಪಿ ಬೈ ಸ್ಕೈ, ಎತ್ತಿನ ಬಂಡಿ ಮೇಳ, ಶ್ವಾನ ಸ್ಪರ್ಧೆ, ಸಾಹಸ ಕ್ರೀಡೆಗಳು, ಕುಸ್ತಿ ಪಂದ್ಯಾವಳಿ, ಗ್ರಾಮೀಣ ಕ್ರೀಡೆಗಳು, ಪುಸ್ತಕ ಮೇಳ, ಆಹಾರ ಮೇಳ, ಫಲ-ಪುಷ್ಪ ಪ್ರದರ್ಶನ ಕೂಡ ನಡೆಯಲಿದೆ.

ಉತ್ಸವದಲ್ಲಿ ಜಾನಪದ ವಾಹಿನಿ ನಡೆಯಲಿದ್ದು, ಈ ನೆಲದ ಕಲೆಯನ್ನು ಜಾನಪದ ಕಲಾವಿದರು ಅನಾವರಣಗೊಳಿಸಲಿದ್ದಾರೆ. ವಿಜಯನಗರ ಆಳರಸರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಪ್ರಾಧ್ಯಾನ್ಯ ನೀಡಿದ್ದರು. ವಿಜಯನಗರ ನೆಲದ ಗತವೈಭವ ಸಾರುವ ಮಾದರಿಯಲ್ಲಿ ಉತ್ಸವ ಮೂರು ದಿನಗಳ ವರೆಗೆ ನಡೆಯಲಿದೆ.

ಸ್ಥಳೀಯ ಕಲಾವಿದರಿಗೆ ಮನ್ನಣೆ: ಈ ಬಾರಿಯ ಹಂಪಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಮನ್ನಣೆ ದೊರೆಯಲಿದೆ. ಕನ್ನಡ ನಾಡಿನ ಕಲಾವಿದರಿಗೂ ವೇದಿಕೆ ದೊರೆಯಲಿದೆ. ನಾಡಿನ ಹಾಗೂ ಸ್ಥಳೀಯ ಕಲಾವಿದರ ಜುಗಲ್‌ಬಂದಿ ಈ ಸಲದ ಹಂಪಿ ಉತ್ಸವದ ಜೀವಾಳವಾಗಿದೆ.

2017ರಲ್ಲಿ ನ. 3, 4, 5ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಅದಾದ ಬಳಿಕ ಬರಗಾಲ ಹಾಗೂ ಲೋಕಸಭೆ ಉಪಚುನಾವಣೆ ನೆಪದಲ್ಲಿ 2018ರಲ್ಲಿ ಹಂಪಿ ಉತ್ಸವ ಆಚರಣೆ ಮಾಡಿರಲಿಲ್ಲ. ಬಳಿಕ ಬಳ್ಳಾರಿ ನಗರ ಶಾಸಕರಾಗಿದ್ದ ಜಿ. ಸೋಮಶೇಖರ ರೆಡ್ಡಿ ಅವರು ಸರ್ಕಾರದ ಬಳಿ ಹಣವಿಲ್ಲದಿದ್ದರೆ ಭಿಕ್ಷೆ ಬೇಡಿ ನೀಡುವುದಾಗಿ ಹೇಳಿದ್ದರು. ಆಗ, 2019ರ ಮಾ. 2 ಮತ್ತು 3ರಂದು ಎರಡು ದಿನ, 2020ರಲ್ಲಿ ಜ. 10, 11 ಮತ್ತು ಅದೇ ವರ್ಷ ನವೆಂಬರ್‌ನಲ್ಲಿ ಒಂದು ದಿನ ಶೋಭಾಯಾತ್ರೆಗೆ ಉತ್ಸವ ಸೀಮಿತವಾಗಿತ್ತು. 2021ರಲ್ಲಿ ಅ. 2 ಮತ್ತು 3ರಂದು ವಿಜಯನಗರ ಜಿಲ್ಲೆ ಉದ್ಘಾಟನೆಯಾಗಿದ್ದರಿಂದ ಉತ್ಸವ ನಡೆದಿರಲಿಲ್ಲ. 2022ರಲ್ಲಿ ಜ. 27, 28, 29ರಂದು ಮೂರು ದಿನ ಆಚರಿಸಲಾಗಿತ್ತು. ಕಳೆದ ವರ್ಷ ಕೂಡ ಫೆಬ್ರವರಿಯಲ್ಲಿ ಹಂಪಿ ಉತ್ಸವ ನಡೆದಿತ್ತು. ಈ ಬಾರಿಯೂ ಫೆ. 28 ಮತ್ತು ಮಾ. 1 ಮತ್ತು 2ರಂದು ಮೂರು ದಿನಗಳ ವರೆಗೆ ಉತ್ಸವ ನಡೆಸಲು ದಿನಾಂಕ ನಿಗದಿಯಾಗಿದೆ. ಮೈಸೂರು ದಸರೆ ಮಾದರಿಯಲ್ಲಿ ಹಂಪಿ ಉತ್ಸವ ಕೂಡ ನಿಗದಿ ದಿನಾಂಕಕ್ಕೆ ನಡೆಯಲಿ ಎಂಬುದು ಈ ಭಾಗದ ಕಲಾವಿದರ ಕೂಗು ಕೂಡ ಆಗಿದೆ.ಫೆ. 28ರಿಂದ ಮೂರು ದಿನ ಹಂಪಿ ಉತ್ಸವ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಈ ಬಾರಿಯೂ ಅದ್ಧೂರಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲಾಗುವುದು. ಹಂಪಿ ಉತ್ಸವದ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವಾಕರ್‌ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಹಂಪಿ ಉತ್ಸವವನ್ನು ಕಳೆದ ವರ್ಷದಂತೆ ಜನೋತ್ಸವವನ್ನಾಗಿ ಆಚರಿಸಲಾಗುವುದು. ಉತ್ಸವಕ್ಕಾಗಿ ಸಕಲ ಸಿದ್ಧತೆ ಮಾಡಲಾಗುವುದು. ಸ್ಥಳೀಯ ಹಾಗೂ ಕನ್ನಡಿಗ ಕಲಾವಿದರಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು