ಚೆರಿ ಬೆಲೆಯೇ 7 ಸಾವಿರ ರು. ದಾಟಿದೆ । ಅರೇಬಿಕಾಗೆ ಸರಿಸಮನಾಗಿ ನಿಂತ ರೊಬಸ್ಟಾ । ಕಾಫಿ ಬೆಳೆಗಾರರ ಹರ್ಷ । ಮಾರುಕಟ್ಟೆಯಲ್ಲಿ ಏರಿಕೆಶ್ರೀವಿದ್ಯಾ ಸಕಲೇಶಪುರ
ಕನ್ನಡಪ್ರಭ ವಾರ್ತೆ ಸಕಲೇಶಪುರರೋಬಸ್ಟಾ ಕಾಫಿ ಧಾರಣೆ ಕಂಡು ಬೆಳೆಗಾರರ ಮುಖದಲ್ಲಿ ಹರ್ಷ ಮನೆಮಾಡಿದೆ. ಕಳೆದ ಬಾರಿ ಕಾಫಿ ಮಾರುಕಟ್ಟೆ ಮುಕ್ತಾಯಗೊಂಡ ಏಪ್ರಿಲ್ ತಿಂಗಳಿನಲ್ಲಿದ್ದ ಬೆಲೆಯೇ ಪ್ರಸಕ್ತ ಕಾಫಿ ಕೊಯ್ಲು ವೇಳೆಯೂ ಇರುವುದು ಬೆಳೆಗಾರರ ಹರ್ಷಕ್ಕೆ ಕಾರಣವಾಗಿದೆ.
೨೦೨೨ ರ ಕಾಫಿ ಮಾರುಕಟ್ಟೆ ಆರಂಭವಾದ ನವೆಂಬರ್ ತಿಂಗಳಿನಲ್ಲಿ ರೋಬಸ್ಟಾ ಕಾಫಿ ಧಾರಣೆ ೪೧೦೦ ರುಗಳಿದ್ದರೆ, ಹಂತಹಂತವಾಗಿ ಮಾರುಕಟ್ಟೆಯಲ್ಲಿ ಏರಿಕೆ ದಾಖಲಿಸುತ್ತ ಬಂದು ರೋಬಸ್ಟಾ ಕಾಫಿ ೨೦೨೩ ರ ಏಪ್ರಿಲ್ ತಿಂಗಳ ಮಾರುಕಟ್ಟೆ ಅಂತ್ಯದ ವೇಳೆಗೆ ೭ ಸಾವಿರ ರು. ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು.ಹೇಗಿದೆ ಧಾರಣೆ:
ಸದ್ಯ ಒಟಿ (ಔಟ್ ಟನ್) ಆಧರಿಸಿ ಧಾರಣೆ ನಿರ್ಧರಿಸುವ ಪದ್ಧತಿ ಸದ್ಯ ಚಾಲನೆಯಲ್ಲಿದ್ದು ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಸಾಮಾನ್ಯವಾಗಿ ೨೪ ರಿಂದ ೨೬ ಒಟಿ ಬಂದರೆ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ೨೬ ರಿಂದ ೨೮ರ ವರೆಗೆ ಒಟಿ ಬರುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ೭ ಸಾವಿರ ರು. ಗಡಿ ಸಮೀಪ ತಲುಪಿದ್ದ ರೊಬಸ್ಟಾ ಕಾಫಿ ಸರ್ವಕಾಲಿಕ ದಾಖಲೆ ನಿರ್ಮಿಸಿದ್ದರೆ. ಈ ಬಾರಿ ಮಾರುಕಟ್ಟೆ ಆರಂಭದಲ್ಲೆ ಏಳು ಸಾವಿರ ರು. ಗಡಿ ದಾಟುವ ಮೂಲಕ ರೋಬಸ್ಟಾ ಇತಿಹಾಸ ನಿರ್ಮಿಸಿದೆ.ರೋಬಸ್ಟಾ ಪಾರ್ಶ್ಚುಮೆಂಟ್ ಕಾಫಿ ಸದ್ಯ ೧೧ ಸಾವಿರ ರು. ಗಡಿಯ ಸುತ್ತಮುತ್ತಲಿದ್ದು ರೋಬಸ್ಟಾ ಚರಿಗೆ ಉತ್ತಮ ಧಾರಣೆ ಇರುವುದರಿಂದ ರೋಬಸ್ಟಾ ಪಾರ್ಶ್ಚುಮೆಂಟ್ ಕಾಫಿ ಉತ್ಪಾದಿಸುವವರ ಸಂಖ್ಯೆ ಅತಿ ಕಡಿಮೆ. ಇನ್ನೂ ಅರೇಬಿಕ್ ಚರಿ ಕಾಫಿ ೮ ಸಾವಿರ ರು. ಗಡಿ ದಾಟಿದ್ದು ರೋಬಸ್ಟಾ ಚರಿ ಕಾಫಿಗೆ ಹೋಲಿಸಿದರೆ ಧಾರಣೆ ತೃಪ್ತಿದಾಯಕವಲ್ಲ ಎಂಬುದು ಬೆಳೆಗಾರರ ವಲಯದ ಮಾತು.
ಅರೇಬಿಕ್ ಪಾರ್ಶ್ಚುಮೆಂಟ್ ದರ ಸಹ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದು ೫೦ ಕೆ.ಜಿ ಅರೇಬಿಕ್ ಪಾರ್ಶ್ಚುಮೆಂಟ್ ಕಾಫಿ ಧಾರಣೆ ೨೦೨೨ ರ ಫೆಬ್ರವರಿಯಲ್ಲಿ ೧೬೫೦೦ ರುಗಳಿದ್ದರೆ ಪ್ರಸಕ್ತ ವರ್ಷ ಮಾರುಕಟ್ಟೆ ಆರಂಭವಾದ ನವೆಂಬರ್ ತಿಂಗಳಿನಿಂದಲೂ ದರ ೧೪೫೦೦ ರು. ಅಸುಪಾಸಿನಲ್ಲಿದ್ದು ಬೆಳೆಗಾರರ ಆಶಾಭಾವನೆ ಕಮರುವಂತೆ ಮಾಡಿದೆ.ಇತಿಹಾಸದಲ್ಲೆ ಗರಿಷ್ಠ:
೧೯೯೨ ರಲ್ಲಿ ಕಾಫಿ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ನಂತರದ ಮೂರು ದಶಕಗಳಲ್ಲಿ ರೋಬಸ್ಟಾ ಕಾಫಿ ಬೆಲೆ ಗರಿಷ್ಠಮಟ್ಟಕ್ಕೇರುವ ಮೂಲಕ ದಾಖಲೆ ನಿರ್ಮಿಸಿದ್ದರೆ, ಕಳೆದ ಮೂರು ವರ್ಷದಲ್ಲೆ ನಾಲ್ಕುಪಟ್ಟು ದರ ಏರಿಕೆ ಕಾಣುವ ಮೂಲಕ ರೋಬಸ್ಟಾ ಕಾಫಿ ಮತ್ತೊಂದು ದಾಖಲೆ ನಿರ್ಮಿಸಿದೆ.೨೦೧೯-೨೦ ರಲ್ಲಿ ೫೦ ಕೆ.ಜಿ. ಕಾಫಿ ಧಾರಣೆ ೨೮೦೦ ರಿಂದ ೩೨೦೦ ರುಗಳಿದ್ದರೆ, ೨೦೨೦-೨೧ ರಲ್ಲಿ ೩೨೦೦ ರಿಂದ ೩೮೦೦ ರು. ತಲುಪಿತ್ತು. ೨೦೨೧ -೨೨ ರಲ್ಲಿ ೩೫೦೦ ರಿಂದ ೪೧೦೦ ರು. ತಲುಪಿದ್ದ ಕಾಫಿ ಧಾರಣೆ ೨೦೨೨-೨೩ ರಲ್ಲಿ ೪೧೦೦ ರು.ನಿಂದ ಏಳು ಸಾವಿರ ರು.ಗೆ ಜಿಗಿತಗೊಳ್ಳುವ ಮೂಲಕ ಬೆಳೆಗಾರರು ನಂಬದ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮತ್ತಷ್ಟು ದರ ಏರಿಕೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಈ ಬಾರಿ ರೋಬಸ್ಟಾ ಕಾಫಿಗೆ ಉತ್ತಮ ಧಾರಣೆ ಇರುವುದು ಸಂತಸ ತಂದಿದೆ. ಸಂಪೂರ್ಣ ಕೊಯ್ಲು ಮುಗಿಯುವವರಗೆ ಇದೆ. ಧಾರಣೆ ಮುಂದುವರಿದರೆ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.ಶೃತಿಕಾನಹಳ್ಳಿ. ಕಾಫಿ ಬೆಳೆಗಾರರು.
ಜನವರಿ ಮೊದಲ ವಾರ ಕಳೆಯುತ್ತಿದ್ದರೂ ಮಾರುಕಟ್ಟೆಗೆ ಕಾಫಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಡಲು ಮುಂದಾಗಿದ್ದಾರೆ.ನಿಂಗರಾಜು, ವಿನಾಯಕ ಕಾಫಿ ಟ್ರೇಡರ್. ಸಕಲೇಶಪುರ.