ಕನ್ನಡಪ್ರಭ ವಾರ್ತೆ ಆಳಂದಕೃಷಿಯನ್ನೇ ನಂಬಿ ಬದುಕು ನಡೆಸುತ್ತಿರುವ ರೈತರು ಇಂದು ತೀರಾ ಸಂಕಷ್ಟದಲಿದ್ದಾರೆ. ಸಾಲ ಭಾಧೆಗೊಳಗಾಗಿ ಮನನೋಂದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಇದಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ತಾಲೂಕಿನ ತಡೋಳಾದ ರೈತ ತಾನಾಜಿ ಸಿಂಧೆ ಸಾಲಬಾಧೆಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪ್ರಯುಕ್ತ ಸಿಂಧೆ ಕುಟುಂಬಸ್ಥರನ್ನು ಭೇಟಿ ಮಾಡಿ ಧೈರ್ಯತುಂಬಿ ಸಾಂತ್ವನ ಹೇಳಿದರು.ಈ ವೇಳೆ ರೈತ ಮುಖಂಡರೊಂದಿಗೆ ಚರ್ಚಿಸಿದ ಅವರು, ರೈತರ ಹಿತಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೆ ರೈತರು ಆತ್ಮಹತ್ಯೆ ಕೈಗೊಳ್ಳದೇ ಧೈರ್ಯದಿಂದ ಸಾಗಬೇಕು. ಬರ ಪರಿಹಾರ ಜಿಲ್ಲೆಯಲ್ಲೇ ಆಳಂದ ತಾಲೂಕಿಗೆ ಹೆಚ್ಚಿನ ಪರಿಹಾರ ನೀಡಿ ಕೊಂಚ ಅನುಕೂಲ ಒದಗಿಸಲು ಪ್ರಯತ್ನಿಸಲಾಗಿದೆ. ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಬಿತ್ತನೆ ಪೂರ್ಣಗೊಂಡಿದೆ. ಉತ್ತಮ ಬೆಳೆ ಬರುವ ವಿಶ್ವಾಸವಿದೆ. ಬಿತ್ತನೆಗೆ ಬೀಜ, ಗೊಬ್ಬರದ ಕೊರತೆಯಾಗಿಲ್ಲ. ಬಿತ್ತನೆ ಕೈಗೊಂಡ ರೈತರು ತಪ್ಪದೆ ಬೆಳೆವಿಮೆ ಕೈಗೊಳ್ಳಿ ಎಂದು ಅವರು ಹೇಳಿದರು.
ಇದೇ ವೇಳೆ ಮುಖಂಡರು ಆಳಂದ, ತಡೋಳಾ ಮುರುಮ ಮಾರ್ಗ ಮತ್ತು ಬಾರ್ಡ್‍ನಿಂದ ತಡೋಳಾ, ಸಾವಳೇಶ್ವರ ಮಾರ್ಗಕ್ಕೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಬೇಕು ಎಂದು ಶಾಸಕರ ಗಮನಕ್ಕೆ ತಂದಾಗ ಶಾಸಕ ಸ್ಥಳದಲ್ಲೇ ಸಾರಿಗೆ ನಿಗಮದ ಅಧಿಕಾರಿಗಳಿಗೆ ಕರೆ ಮಾಡಿ ಈ ಗ್ರಾಮಗಳ ಬಸ್ ಸಂಚಾರದ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ತಡೋಳಾದಿಂದ ಮಟಕಿ ಗ್ರಾಮ ಸಂಪರ್ಕದ ರಸ್ತೆಗೆ ತಡೋಳಾ ಹೊರವಲಯದಲ್ಲಿನ ರಸ್ತೆಗೆ ಕೈಬಿಡಲಾದ ಸೇತುವೆಯ ಬೇಡಿಕೆಯನ್ನು ಸಹ ಶಾಸಕರು ನಿರ್ಮಿಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವಿನಾಶ ರೇಣುಕೆ, ರಾಮಮೂರ್ತಿ ಗಾಯಕವಾಡ, ಕಲ್ಯಾಣಿ ಅವುಟೆ, ಕಮಲೇಶ ಅವುಟೆ, ಬಾಳು ಸಿಂಧೆ, ತ್ರೀಮುಕ್ ಸಿಂಧೆ, ಶ್ರೀನಿವಾಸ್ ಪಾಟೀಲ, ಗ್ರಾಪಂ ಸದಸ್ಯ ಮಹಾವೀರ ಕಾಂಬಳೆ ಇತರರು ಇದ್ದರು.