ಕನ್ನಡಪ್ರಭ ವಾರ್ತೆ ಜಗಳೂರು
ಎರಡು ಬಾರಿ ''''ಗಾಂಧಿ ಗ್ರಾಮ'''' ಪುರಸ್ಕಾರಕ್ಕೆ ಆಯ್ಕೆಯಾದ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಗುರುವಾರ ಜಿಪಂ, ತಾಪಂ ವತಿಯಿಂದ ಸಾರ್ವಜನಿಕರಿಂದ ದೂರು, ಮನವಿಗಳ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳ ಸಮಾಧಾನದಿಂದ ಆಲಿಸಿದ ಸಿಇಒ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಇತ್ಯರ್ಥಪಡಿಸಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಕಾಲಾವಕಾಶ ಅಗತ್ಯ, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.
ಬಳಿಕ ಮಾತನಾಡಿದ ಸಿಇಒ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿ ಬುಧವಾರ ಜಿಲ್ಲೆಯ ತಾಲೂಕಿನ ಒಂದು ಗ್ರಾಪಂನಲ್ಲಿ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ್ದಾರೆ ಹೀಗಾಗಿ ಸೊಕ್ಕೆ ಗ್ರಾಮದಲ್ಲಿ ದೂರು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.ಸೊಕ್ಕೆ ಗ್ರಾಮದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನು ಕೆಲವು ಸಮಸ್ಯೆಗಳಿಗೆ ಸ್ವಲ್ಪ ವಿಳಂಬವಾಗಬಹುದು. ಆದರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳ ನಮ್ಮ ಮಿತಿಯೊಳಗೆ ಬಗೆಹರಿಸಲಾಗುವುದು. ಗ್ರಾಮದ ಕ್ಯಾಂಪ್ ಮತ್ತು ಚಿಕ್ಕಬಂಟನಹಳ್ಳಿಯಲ್ಲಿ ಸರ್ಕಾರಿ ಜಮೀನು ಇದ್ದು, ಆಶ್ರಯ ನಿವೇಶನ ಎಂದು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಹಕ್ಕುಪತ್ರ ಮಾಡಿ ನಂತರ ಇ-ಸ್ವತ್ತು ವಿತರಿಸುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಟಿ.ಕರಿಬಸಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್ ಉದಲ್ಲಾ, ನರೇಗಾ ಎಡಿ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಪಂ ಅಧ್ಯಕ್ಷ ತಿರುಮಲಾ, ಉಪಾಧ್ಯಕ್ಷರಾದ ಚೌಡಮ್ಮ, ಪಿಡಿಒ ಶಿವಕುಮಾರ್, ಬಿಇಒ ಹಾಲಮುರ್ತಿ, ಡಿ.ಡಿ.ಹಾಲಪ್ಪ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.ಸ್ವಚ್ಛ ಸಂಕೀರ್ಣಕ್ಕೆ ಅನುದಾನ ಬರುವಂತೆ ಮಾಡುತ್ತೇನೆ. ಹಳ್ಳ ಒತ್ತುವರಿಗೆ ಸಂಬಂಧಿಸಿ ತೆರವು ಮಾಡಿಸಲು ಸೂಚನೆ ನೀಡಲಾಗಿದೆ. ಚಿಕ್ಕಬಂಟನಹಳ್ಳಿ, ಸೊಕ್ಕೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಿ. ಈ ಸಮಸ್ಯೆಯನ್ನು ಡಿಡಿಎಲ್ಆಲರ್ ಗಮನಕ್ಕೆ ತಂದು ಸರ್ವೇ ಮಾಡಿಸಲಾಗುವುದು
ಡಾ.ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯಿತಿ ಸಿಇಒ