ಟಿಪ್ಪು ಕಟೌಟ್‌ಗೆ ಪಾಕ್ ಹಾಡು ಬಳಕೆ ಆರೋಪ: ಓರ್ವ ಬಂಧನ

KannadaprabhaNewsNetwork |  
Published : Aug 25, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಟಿಪ್ಪು ಕಾಲೋನಿಯಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನದ ಹಾಡು ಬಳಸಿ ಮಾಡಿದ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಕ್ಕೆ‌‌ ಸಂಬಂಧಿಸಿದಂತೆ ಒರ್ವನ್ನು ಬಂಧಿಸಿ, 7 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ । ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಹೆಸರಿನ ಖಾತೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಟಿಪ್ಪು ಕಾಲೋನಿಯಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನದ ಹಾಡು ಬಳಸಿ ಮಾಡಿದ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಕ್ಕೆ‌‌ ಸಂಬಂಧಿಸಿದಂತೆ ಒರ್ವನ್ನು ಬಂಧಿಸಿ, 7 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಹೆಸರಿನ ಖಾತೆಗಳಲ್ಲಿ ವಿಡಿಯೋ ಹರಿದಾಡಿದೆ. ಇದರಲ್ಲಿ ಕೋಮು ಸೌಹಾರ್ದ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹಾಡು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಾರ್ಕೆಟ್ ರಸ್ತೆ ರೋಷನ್ (23) ಎಂಬಾತನನ್ನು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಾಕಲಾಗಿದ್ದ ವಿಡಿಯೋವನ್ನು ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಮೂಲಕ ಮತ್ತಷ್ಟು ವೈರಲ್ ಮಾಡಿದ್ದ ಆರೋಪ ರೋಷನ್ ಮೇಲಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿರುವ ವಿಡಿಯೋ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.-- ಬಾಕ್ಸ---

ಕ್ರಮಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸುವ ರೀತಿಯ ಘಟನೆ ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.ಭಾರತ ವಿರೋಧಿ ನಿಲುವುಗಳಿಗೆ ಸರ್ಕಾರ ಬೆಂಬಲ ನೀಡುವಂತಾಗಬಾರದು. ಇಂತಹ ಘಟನೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಅಗತ್ಯವಿದ್ದರೆ ಮುಖ್ಯಮಂತ್ರಿಗಳಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.

--- ಬಾಕ್ಸ್.--

ಟಿಪ್ಪು ಕಟೌಟ್‌ಗೆ ಆಕ್ಷೇಪಾರ್ಹ ಹಾಡು: ಕಠಿಣ ಕ್ರಮದ ಎಚ್ಚರಿಕೆ

ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದ ಟಿಪ್ಪು ಸುಲ್ತಾನ್ ಕಟೌಟ್‌ಗೆ ಆಕ್ಷೇಪಾರ್ಹ ಹಾಡು ಅಳವಡಿಸಿ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ ಸೆಕ್ಷನ್ 196 ಹಾಗೂ 299ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.

ಕಳೆದ 5–6 ವರ್ಷಗಳಿಂದ ಅನುಸರಿಸಿಕೊಂಡು ಬಂದ ನಿಯಮ ಹಾಗೂ ಪದ್ಧತಿಗಳನ್ನೇ ಈ ಬಾರಿಯೂ ಪಾಲಿಸುವಂತೆ ಡಿಪಿಒ ಹಾಗೂ ಎಸ್‌ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಟಿಪ್ಪು ಕಟೌಟ್‌ನ ಅಳತೆ, ಸ್ಥಳ ಹಾಗೂ ಸಮಯವೂ ಹಿಂದಿನ ವರ್ಷಗಳಲ್ಲಿದ್ದಂತೆಯೇ ಇದೆ. ಯಾವುದೇ ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಅವಕಾಶ ನೀಡಲಾಗುವುದಿಲ್ಲ.

ಇನ್‌ಸ್ಟಾಗ್ರಾಮ್‌ನಲ್ಲಿ ಟಿಪ್ಪು ಕಟೌಟ್‌ಗೆ ಆಕ್ಷೇಪಾರ್ಹ ಹಾಡು ಅಳವಡಿಸಿ ವಿಡಿಯೋ ವೈರಲ್ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ವಿಡಿಯೋ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್‌ನಲ್ಲಿ ಹಾಕಿದವರ ವಿರುದ್ಧ ತನಿಖೆ ನಡೆಯುತ್ತಿದೆ. ಆರೋಪಿ ಪತ್ತೆ ಕಾರ್ಯ ಅಂತಿಮ ಹಂತದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕಟ್ಟುವ ಯಾವುದೇ ಪ್ರಯತ್ನ ಪೊಲೀಸರು ಸಹಿಸುವುದಿಲ್ಲ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಜಿತೇಂದ್ರ ಕುಮಾರ್ ದಾಯಾಮ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಫುರ ಜಿಲ್ಲೇಲಿ 9,44,623 ಮತದಾರರು
ಕರಾಟೆ ಇನ್ನೊಬ್ಬರ ಮೇಲಿನ ದಾಳಿಗೆ ಉಪಯೋಗಿಸುವಂಥ ಕಲೆಯಲ್ಲ: ಪಿ. ವೈ.ಶಿಹಾನ್ ನಾಸಿರುದ್ದೀನ್