ಹುಬ್ಬಳ್ಳಿ: ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಿಂದಲೂ ಭಾರತೀಯರ ಹೃದಯಾಂತರಾಳದಲ್ಲಿ ತಿರಂಗಾ ಮನೆ ಮಾಡಿದೆ. ಇಂತಹ ತಿರಂಗಾ ಹುಬ್ಬಳ್ಳಿಯಲ್ಲಿ ತಯಾರಿಸಲಾಗುತ್ತದೆ ಎಂಬುದು ನಮ್ಮೆಲ್ಲರಿಗೆ ಹೆಮ್ಮೆ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಕ್ರಿಯೇಟಿವ್-ಟೆಕ್ ಅನಿಮೇಷನ್ ಸ್ಟುಡಿಯೋ ಆಧ್ಯಾ ಅನಿಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ನಮ್ಮ ತಿರಂಗಾ ಕಿರುಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.ಸ್ವಾತಂತ್ರ್ಯ ನಂತರದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ನಡೆದ ಹೋರಾಟದಲ್ಲಿಯೂ ತಿರಂಗಾ ಧ್ವಜದ ರಕ್ಷಣೆಗಾಗಿ ನಮ್ಮ ಸೈನಿಕರು, ನಾಡಿನ ಪ್ರಜೆಗಳು ಹೋರಾಡಿದ್ದಾರೆ. ದಾಳಿಗೆ ಪ್ರತಿ ದಾಳಿ ನಡೆಸಿ ರಕ್ಷಿಸುವ ಕೆಲಸವಾಗುತ್ತಿದೆ. ಧ್ವಜ ಎಂಬುದು ಪ್ರತಿಯೊಬ್ಬ ಭಾರತೀಯನ ಅಭಿಮಾನವಾಗಿದೆ. ಇದೇ ತಿರಂಗಾ ಹೋರಾಟದಿಂದ ತಾವು ಸಾರ್ವಜನಿಕ ಬದುಕಿಗೆ ಬಂದಿದ್ದೇನೆ ಎಂದು ತಿಳಿಸಿದರು.
೪ನೇ ಅತಿದೊಡ್ಟ ಮಿಲಟರಿ ಹೊಂದಿರುವ ದೇಶ ನಮ್ಮದು. ಆಪರೇಷನ್ ಸಿಂಧೂರದ ಮೂಲಕ ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ತೋರಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.ತಿರಂಗಾ ಕುರಿತು ಹೋರಾಟ ಮಾಡಿಯೇ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಸಾರ್ವಜನಿಕರಿಗೆ ನನ್ನ ಪರಿಚಯ ಆಗಿದ್ದೇ ತಿರಂಗಾ ಹೋರಾಟದ ಮೂಲಕ ಎಂದು ಸ್ಮರಿಸಿಕೊಂಡ ಅವರು, ಆಗಸ್ಟ್ 15ರಂದು ಸ್ವಾತಂತ್ರ ಮಹೋತ್ಸವ ಆಚರಿಸುತ್ತೇವೆ. ಅಂದು ಎಲ್ಲೆಡೆ ನಮ್ಮ ರಾಷ್ಟ್ರದ ಹೆಮ್ಮೆಯಾಗಿ ತಿರಂಗಾ ಧ್ವಜ ಹಾರಾಡಲಿ ಎಂದರು.
ಕಿರುಚಿತ್ರಕ್ಕೆ ಶ್ಲಾಘನೆ: ಕ್ರಿಯೇಟಿವ್-ಟೆಕ್ ಅನಿಮೇಷನ್ ಸ್ಟುಡಿಯೋ ಆಧ್ಯಾ ಅನಿಮ್ಯಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ತಯಾರಿಸಿರುವ 6 ನಿಮಿಷದ ತಿರಂಗಾ ಕಿರುಚಿತ್ರ ಚೆನ್ನಾಗಿ ಮೂಡಿಬಂದಿದೆ. ಸ್ವಾತಂತ್ರ್ಯೋತ್ಸವ ವೇಳೆ ಕಿರುಚಿತ್ರ ಹೊರಬಂದಿದೆ. ನಮ್ಮ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಾಗುತ್ತಿರುವ ತಿರಂಗಾ ಕುರಿತು ಕಿರುಚಿತ್ರದಲ್ಲಿ ಜಗತ್ತಿಗೆ ತಿಳಿಸಿರುವುದು ಹೆಮ್ಮೆಯ ಸಂಗತಿ ಎಂದರು.ಹರ ಘರ ತಿರಂಗಾ ಅಭಿಯಾನದ ವೇಳೆ ರಾಷ್ಟ್ರದಲ್ಲಿ ಒಟ್ಟು 33 ಕೋಟಿ ಧ್ವಜಗಳು ಮಾರಾಟವಾಗಿದ್ದವು. ಆದರೆ, ದೇಶದ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಇಲ್ಲಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಾಗುವ ಧ್ವಜಗಳೇ ಹಾರಾಡುವುದು ನಮ್ಮ ಹುಬ್ಬಳ್ಳಿಗೆ ಗರ್ವದ ಸಂಗತಿ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕಿರುಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಮ್ಮ ಹುಬ್ಬಳ್ಳಿಯಲ್ಲಿ ತಯಾರಾಗುವ ಧ್ವಜ ಇಡೀ ದೇಶಾದ್ಯಂತ ಹಾರಾಡುತ್ತಿರುವುದು ನಮ್ಮಹೆಮ್ಮೆ. ತಂತ್ರಜ್ಞಾನದಲ್ಲಿ ಹುಬ್ಬಳ್ಳಿ ಕಡಿಮೆ ಇಲ್ಲ ಎಂಬುದನ್ನು ಆದ್ಯ ಕ್ರಿಯೇಷನ್ಸ್ ತೋರಿಸಿಕೊಟ್ಟಿದೆ ಎಂದರು.ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಆದ್ಯಾ ಎನಿಮೇಷನ್ ಪ್ರೈಘಿ.ಲಿ.ನ ಸಂಸ್ಥಾಪಕ ಮತ್ತು ನಿರ್ದೇಶಕ ರತನಕುಮಾರ ಜಿ.ಕೆ., ಮುಖಂಡರಾದ ಲಿಂಗರಾಜ ಪಾಟೀಲ, ರಾಜಣ್ಣಾ ಕೊರವಿ, ರಮೇಶ ಭಾಫಣಾ, ಡಾ. ವಿವೇಕ ಪಾಟೀಲ, ಜಸವೀರ ಸಿಂಗ್, ಶಿವಾನಂದ ಸೇರಿದಂತೆ ಇತರರು ಇದ್ದರು.