ಕಾರಟಗಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಬಂಧಿಸಬೇಕು ಹಾಗೂ ಪ್ರಜಾಪ್ರಭುತ್ವ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ನ್ಯಾಯಸಮ್ಮತವಾಗಿ ನಡೆಯಬೇಕು. ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಒತ್ತಾಯಿಸಿದರು.
ವಕೀಲ ಶಿವರೆಡ್ಡಿ ನಾಯಕ ಮಾತನಾಡಿ, ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಹಾಗೂ ಚುನಾವಣಾ ನೀತಿಗಳ ಕುರಿತು ಆತಂಕಗಳಿವೆ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದರು.ಕವಿಎಸ್ ರಾಜ್ಯ ಕಾರ್ಯದರ್ಶಿ ದುರುಗೇಶ ಬರಗೂರು ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಸಾಮೂಹಿಕ ಹೋರಾಟ ಅಗತ್ಯವಿದೆ. ಎಸ್‌ಐಆರ್ ರದ್ದತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.