ಬೆಂಗಳೂರು : ಕೌಟುಂಬಿಕ ಕಾರಣಗಳಿಂದ ಮನನೊಂದು ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

KannadaprabhaNewsNetwork |  
Published : Dec 24, 2024, 01:30 AM ISTUpdated : Dec 24, 2024, 08:03 AM IST
Somashekar | Kannada Prabha

ಸಾರಾಂಶ

ಕೌಟುಂಬಿಕ ಕಾರಣಗಳಿಂದ ಮನನೊಂದು ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಕೌಟುಂಬಿಕ ಕಾರಣಗಳಿಂದ ಮನನೊಂದು ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಎಂ.ಜಿ.ಸೋಮಶೇಖರ್‌(47) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಸೋಮಶೇಖರ್‌ ಮನೆಯ ರೂಮ್‌ ಬಾಗಿಲು ಹಾಕಿಕೊಂಡು ಫ್ಯಾನ್‌ಗೆ ವೇಲು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಪತ್ನಿ ಹಾಗೂ ಮಕ್ಕಳು ಇದನ್ನು ಗಮನಿಸಿ, ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ 11 ಗಂಟೆಗೆ ಸೋಮಶೇಖರ್‌ ಮೃತಪಟ್ಟಿದ್ದಾರೆ.

ಮೃತ ಸೋಮಶೇಖರ್‌ ಲಾರಿ ವ್ಯವಹಾರ ಮಾಡುತ್ತಿದ್ದರು. 2006ನೇ ಸಾಲಿನಲ್ಲಿ ಪವಿತ್ರಾ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪಿಯುಸಿ ಮುಗಿಸಿದ್ದ ಪವಿತ್ರಾಳನ್ನು ಮದುವೆ ಬಳಿಕ ಸೋಮಶೇಖರ್‌ ಕಾಲೇಜಿಗೆ ಸೇರಿಸಿ ಪದವಿ ಓದಿಸಿದ್ದರು. ಬಳಿಕ ಪವಿತ್ರಾ ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ವಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 2 ವರ್ಷಗಳಿಂದ ಕೌಟುಂಬಿಕ ಕಾರಣಗಳಿಗೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.

ಚಿಕಿತ್ಸೆ ಫಲಿಸದೆ ಸಾವು:

ಭಾನುವಾರ ರಾತ್ರಿ ರೂಮ್‌ನ ಬಾಗಿಲು ಹಾಕಿಕೊಂಡು ಸೋಮಶೇಖರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲೇ ಇದ್ದ ಪತ್ನಿ ಹಾಗೂ ಮಕ್ಕಳು ಸ್ಥಳೀಯರ ನೆರವಿನಿಂದ ರೂಮ್‌ ಬಾಗಿಲು ತೆರೆದು ನೇಣಿನ ಕುಣಿಕೆಯಿಂದ ಸೋಮಶೇಖರ್‌ ಅವರನ್ನು ಕೆಳಗೆ ಇಳಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ ಸೋಮಶೇಖರ್‌ ಮೃತಪಟ್ಟಿದ್ದಾರೆ.

ಯಾರ ಮೇಲೂ ಅನುಮಾನವಿಲ್ಲ:

ಘಟನೆ ಸಂಬಂಧ ಮೃತ ಸೋಮಶೇಖರ್‌ ತಂದೆ ಗಿರಿಗೌಡ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗ ಮತ್ತು ಸೊಸೆ ಕೌಟುಂಬಿಕ ಕಾರಣಗಳಿಂದ ಜಗಳ ಮಾಡಿಕೊಂಡಿದ್ದರು. ಇದರಿಂದ ಬೇಸರಗೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನ ಬಗ್ಗೆ ನಮಗೆ ಯಾರ ಮೇಲೆಯೂ ಅನುಮಾನವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.

ಅನೈತಿಕ ಸಂಬಂಧ ಆರೋಪ:

ಮೃತ ಸೋಮಶೇಖರ್‌ ಪತ್ನಿ ಪವಿತ್ರಾಗೆ ಸರ್ಕಾರಿ ಅಧಿಕಾರಿಯೊಬ್ಬರೊಂದಿಗೆ ಜತೆಗೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಸೋಮಶೇಖರ್‌ಗೆ ಗೊತ್ತಾಗಿ ಆತನ ಸಂಪರ್ಕ ಕಡಿದುಕೊಳ್ಳುವಂತೆ ಹಲವು ಬಾರಿ ಹೇಳಿದ್ದರು. ಆದರೂ ಪವಿತ್ರಾ ಆತನೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದರು. ಇದರಿಂದ ಸೋಮಶೇಖರ್‌ ಚಿತ್ರಹಿಂಸೆ ಅನುಭವಿಸಿದ್ದರು. ಸೋಮಶೇಖರ್‌ ಆತ್ಮಹತ್ಯೆಗೆ ಪವಿತ್ರಾ ಹಾಗೂ ಸದರಿ ಅಧಿಕಾರಿಯೇ ಕಾರಣ ಎಂದು ಮೃತನ ತಂಗಿಯ ಪತಿ ನಾಗರಾಜು ಮಾಧ್ಯಮಗಳ ಎದುರು ಆರೋಪಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ