ಕನ್ನಡಪ್ರಭ ವಾರ್ತೆ ಮಂಗಳೂರು
ಕಣ್ವತೀರ್ಥದ ಶ್ರೀರಾಮಾಂಜನೇಯ ದೇವಸ್ಥಾನದ ತೀರ್ಥಕೆರೆಯಲ್ಲಿ ತೀರ್ಥಸ್ನಾನ ಮಾಡಿ ಶ್ರೀರಾಮಾಂಜನೇಯ ದೇವರಿಗೆ ಆರತಿ ಬೆಳಗಿದರು. ಬಳಿಕ ಮೆರವಣಿಗೆಯಲ್ಲಿ ಕಡಲ ತೀರಕ್ಕೆ ತೆರಳಿ ಸಮುದ್ರ ಪೂಜೆ ನೆರವೇರಿಸಿದರು. ಸಮುದ್ರ ರಾಜನಿಗೆ ಹಾಲೆರೆದು, ಹೂವು ಅರ್ಪಿಸಿ ಅಭಿಷೇಕ ನೆರವೇರಿಸಿ ಆರತಿ ಬೆಳಗಿದರು. ಅಲ್ಲದೆ ಸಮುದ್ರ ಸ್ನಾನ ಜತೆಗೆ ಸಮುದ್ರದಲ್ಲಿ ಈಜಿ ಸಂಭ್ರಮಿಸಿದರು.
ಬಳಿಕ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ಆಗಮಿಸಿ ನವೀಕೃತ ಹೊರ ಸುತ್ತು ಪೌಳಿಯನ್ನು ಲೋಕಾರ್ಪಣೆಗೊಳಿಸಿದರು. ಪೇಜಾವರಶ್ರೀಗಳ 60 ನೇ ವರ್ಷದ ನೆನಪಿಗಾಗಿ ಈ ಸುತ್ತು ಪೌಳಿ ನವೀಕರಣಗೊಳಿಸಲಾಗಿದೆ. ಈ ವೇಳೆ ನಡೆದ ಸರಳ ಸಮಾರಂಭದಲ್ಲಿ ಸುತ್ತು ಪೌಳಿ ನವೀಕರಣದ ಉಸ್ತುವಾರಿ ವಹಿಸಿದ ಅರಿಬೈಲು ಗೋಪಾಲಕೃಷ್ಣ ಶೆಟ್ಟಿ ಮತ್ತು ಸುರೇಖಾ ಶೆಟ್ಟಿ ದಂಪತಿಯನ್ನು ಪೇಜಾವರಶ್ರೀ ಗೌರವಿಸಿದರು.ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿಯ ಮೂಲ ಮಠವಾದ ಈ ಕಣ್ವ ಮಠದಲ್ಲಿ ಶ್ರೀರಾಮನಿಗೆ ನವೀಕೃತ ಸುತ್ತು ಪೌಳಿ ಅರ್ಪಿಸಲಾಗಿದೆ. ಇಲ್ಲಿಂದ ನಾವು ಅಯೋಧ್ಯೆ ಶ್ರೀರಾಮನ ಮಂದಿರ ಸಮರ್ಪಣೆಗೆ ತೆರಳುವವರಿದ್ದೇವೆ. ಇಲ್ಲಿ ಶ್ರೀರಾಮನ ಜತೆಗೆ ವಿಠಲನೂ ಇದ್ದು, ರಾಮ ವಿಠಲ ಮಠದ ನಮ್ಮ ಪಟ್ಟದ ದೇವರು. ಶ್ರೀಕೃಷ್ಣನ ನಿತ್ಯ ಪೂಜೆಗೆ ಪರ್ಯಾಯ ಶ್ರೀಗಳಿಗೆ ತೊಂದರೆ ಆದಾಗ ಇನ್ನೊಂದು ಮಠ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಇದಕ್ಕೆ ದ್ವಂದ್ವ ಮಠ ಎನ್ನುತ್ತೇವೆ. ಈ ಪರಿಕಲ್ಪನೆ ಇಲ್ಲಿಂದಲೇ ಆರಂಭವಾಗಿದೆ. ಶ್ರೀಕಣ್ವ ಮಹರ್ಷಿಯ ತಪೋಭೂಮಿ, ಆಚಾರ್ಯ ಮಧ್ವರು ಸ್ಥಾಪಿಸಿದ ಮೂಲಮಠ, ಗೃಹಣಕಾಲದಲ್ಲಿ ಮಧ್ವರು ಸಮುದ್ರ ಸ್ನಾನ ಮಾಡಿದ ಪವಿತ್ರ ಪ್ರದೇಶ ಇದು ಎಂದರು.
ರಾಮ ಮಂದಿರ ಬ್ರಹ್ಮಕಲಶೋತ್ಸವ ನೇತೃತ್ವ; ಜ.15ರಂದು ಉಡುಪಿಯಿಂದ ಅಯೋಧ್ಯೆಗೆ ಹೊರಡುವ ಪೇಜಾವರಶ್ರೀಗಳು 48 ದಿನಗಳ ಮಂಡಲ ಪೂರೈಸುವ ವರೆಗೆ ಅಯೋಧ್ಯೆಯಲ್ಲೇ ಇದ್ದು ಶ್ರೀರಾಮ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.