ಮೇಲುಕೋಟೆಯಲ್ಲಿ ಅದ್ಧೂರಿಯಾಗಿ ನಡೆದ ತಿರುನಕ್ಷತ್ರ ಮಹೋತ್ಸವ

KannadaprabhaNewsNetwork |  
Published : Nov 06, 2024, 11:54 PM IST
6ಕೆಎಂಎನ್ ಡಿ23,24 | Kannada Prabha

ಸಾರಾಂಶ

ರಾಮಾನುಜರು, ಶ್ರೀದೇವಿ ಭೂದೇವಿ ಸಮೇತನಾದ ಚೆಲುವನಾರಾಯಣ ಸ್ವಾಮಿಯೊಂದಿಗೆ ಮನವಾಳ ಮಾಮುನಿ ಜೀಯರ್‌ಗೆ ಭವ್ಯವಾದ ಉತ್ಸವ ನೆರವೇರಿತು. ಉತ್ಸವದ ವೇಳೆ ಸಿಡಿಸಿದ ಸ್ಕೈಶಾಟ್‌ಗಳು ಆಕಾಶದಲ್ಲಿ ಮನಮೋಹಕ ಚಿತ್ತಾರ ಮೂಡಿಸಿ ಉತ್ಸವದ ವೈಭವಕ್ಕೆ ಮೆರಗು ನೀಡಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮನವಾಳಮಾಮುನಿ ಜೀಯರ್‌ರವರ ತಿರುನಕ್ಷತ್ರ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.

ಹತ್ತು ದಿನಗಳ ಧಾರ್ಮಿಕ ಕೈಂಕರ್ಯಗಳು ರಾತ್ರಿ ನಡೆದ ಚೆಲುವನಾರಾಯಣ ಸ್ವಾಮಿಯವರ ಉತ್ಸವದೊಂದಿಗೆ ಮುಕ್ತಾಯವಾಯಿತು. ಮನವಾಳ ಮಾಮುನಿ ಜೀಯರ್ ತಿರುನಕ್ಷತ್ರ ಮಹೋತ್ಸವದಂದು ಕಲ್ಯಾಣಿಯಿಂದ ಭವ್ಯ ಮೆರವಣಿಗೆಯಲ್ಲಿ ಪವಿತ್ರವಾದ ತೀರ್ಥತಂದು ದ್ವಾದಶಾರಾಧನೆಯೊಂದಿಗೆ ವೇದಮಂತ್ರ ಮತ್ತು ಮಂಗಳವಾದ್ಯದೊಂದಿಗೆ ಭವ್ಯವಾಗಿ ಮಹಾಭಿಷೇಕ ನೆರವೇರಿಸಲಾಯಿತು.

ನಂತರ ಭಗವದ್ ರಾಮಾನುಜರ ಸನ್ನಿಧಿಯಿಂದ ಶಠಾರಿ ಮರ್ಯಾದೆಗಳನ್ನು ಭಕ್ತಿಪೂರ್ವಕವಾಗಿ ಜೀಯರ್‌ಗೆ ನೆರವೇರಿಸಲಾಯಿತು. ವಿದ್ವಾನ್ ಶ್ರೀರಂಗಂ ಶಲ್ವನಾರಾಯಣನ್ ಬಿ.ವಿ. ಆನಂದಾಳ್ವಾರ್ ಸಾರಥ್ಯದಲ್ಲಿ ಜೀಯರ್ ಸನ್ನಿಧಿಯ ಅರ್ಚಕ ಸ್ಥಾನೀಕಂ ಶ್ರೀರಾಮನ್ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ನೆರವೇರಿಸಿದರು.

ಸಂಜೆ ರಾಮಾನುಜರು, ಶ್ರೀದೇವಿ ಭೂದೇವಿ ಸಮೇತನಾದ ಚೆಲುವನಾರಾಯಣ ಸ್ವಾಮಿಯೊಂದಿಗೆ ಮನವಾಳ ಮಾಮುನಿ ಜೀಯರ್‌ಗೆ ಭವ್ಯವಾದ ಉತ್ಸವ ನೆರವೇರಿತು. ಉತ್ಸವದ ವೇಳೆ ಸಿಡಿಸಿದ ಸ್ಕೈಶಾಟ್‌ಗಳು ಆಕಾಶದಲ್ಲಿ ಮನಮೋಹಕ ಚಿತ್ತಾರ ಮೂಡಿಸಿ ಉತ್ಸವದ ವೈಭವಕ್ಕೆ ಮೆರಗು ನೀಡಿತು. ದೇಗುಲದ ಇಒ ಶೀಲ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಐಕನಹಳ್ಳಿ ಕೆರೆ ತಟದಲ್ಲಿ ಜಾನಪದ ಸೊಗಡಿನಲ್ಲಿ ಸಿಡಿ ಸಂಭ್ರಮ

ಕಿಕ್ಕೇರಿ:

ಹೋಬಳಿಯ ಐಕನಹಳ್ಳಿಯಲ್ಲಿ ಬುಡಿಯಪ್ಪನ ವಠಾರದ ನೇತೃತ್ವದಲ್ಲಿ ಸಿಡಿ ಹಬ್ಬ ವಿಜೃಂಭಣೆಯಿಂದ ನೆರವೇರಿತು.

ದೀಪಾವಳಿಯಿಂದ ವಾರದವರೆಗೆ ನಡೆದಸಿಡಿ ಹಬ್ಬದಲ್ಲಿ ಐಕನಾಳಮ್ಮ(ಲಕ್ಷ್ಮೀದೇವಿ) ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಲು ಬುಡಿಯಪ್ಪನ ಬಳಗದೊಂದಿಗೆ ತೋಪಣ್ಣ, ಕೆಂಗಪ್ಪ, ಹುಚ್ಚಮ್ಮ, ಬುಡಿಯಪ್ಪನ ಬಳಗ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು, ಹೊರಸ್ಥಳದಲ್ಲಿ ನೆಲೆಸಿರುವ ದೇವಿ ಭಕ್ತರು ಭಾಗಿಯಾಗಿದ್ದರು.

ಐಕನಳಮ್ಮನ ಗುಡಿಗೆ ಭಕ್ತರು ಸಾಮೂಹಿಕವಾಗಿ ಸಾಗಿ ದೇವಿ ಗುಡಿ ಸುತ್ತಲ ಪರಿಸರವನ್ನು ತಳಿರು ತೋರಣದಿಂದ ಶೃಂಗರಿಸಿ, ರಂಗೋಲಿ ಚಿತ್ತಾರ ಬಿಡಿಸಿದರು. ಸಂಜೆ ವೀರಮಕ್ಕಳು ಆಗಮಿಸಿ ಸಿಡಿ ರಥಕ್ಕೆ ಪೂಜಿಸಿದರು. ಹಲವು ಭಕ್ತರು ಬಾಯಿ ಬೀಗಧರಿಸಿಕೊಂಡು ಹರಕೆ ಸಲ್ಲಿಸಿದರು.

ವೀರಮಕ್ಕಳು ದೇವರಆರಾಧನೆಯ ಕೋಲನ್ನುಕೈಯಲ್ಲಿಡಿದುಕೊಂಡು ಬೀಸುಗತ್ತಿಯಂತೆ ಜಳಪಿಸಿದರು. ಸೋಮನ ಮುಖವಾಡ ಧರಿಸಿ ವೀರಮಕ್ಕಳು ನರ್ತಿಸಿ ದೇವಿಗೆತಮ್ಮ ಸೇವೆ ಒಪ್ಪಿಸಿದರು. ಸಿಡಿರಥಕ್ಕೆ ಹೂವು, ವಿವಿಧ ಬಗೆಯ ವಸ್ತ್ರಗಳಿಂದ ಅಲಂಕರಿಸಿದರು.

ದೇವಿಗೆಅಗ್ರ ಪೂಜೆ ಸಲ್ಲಿಸಿ ಸಿಡಿರಥಕ್ಕೆ ವೀರಮಕ್ಕಳು ಹರಕೆ ಹೊತ್ತುಏರಿದರು. ಭಕ್ತರು ಉಘೇ ಉಘೇ ಲಕ್ಷ್ಮೀದೇವಿ ಎಂದುಕೂಗುತ್ತ ಸಿಡಿರಥವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ, ಸಿಡಿ ಏರಿದ್ದ ವೀರಮಕ್ಕಳನ್ನು ರಥದಿಂದ ಇಳಿಸಲಾಯಿತು. ವೀರಮಕ್ಕಳು, ಭಕ್ತರುದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಧೂಪ ದೀಪಧಾರತಿ ಬೆಳಗಿದರು.

ಗ್ರಾಮದ ಸುತ್ತಮುತ್ತಲ ಹತ್ತಾರು ಹಳ್ಳಿಯ ಭಕ್ತರುಗುಡಿಗೆ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ