ತಿತ್ತಿಬ್ವಾಸನ ಟೈಟಾನ್‌ ವಾಚು; ಕುತೂಹಲ ಕೆರಳಿಸುವ ಕಥೆಗಳ ಸಂಕಲನ

KannadaprabhaNewsNetwork | Published : May 16, 2025 2:17 AM

ದಿಲೀಪ್‌ ಎನ್ಕೆಗೆ ದಟ್ಟವಾದ ಪ್ರಾದೇಶಿಕ ನಂಟು, ನುಡಿಯ ಗಾಢ ಪರಿಚಯದೊಂದಿಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಥೆ ಕಟ್ಟುವ ಕಲೆ ಸಿದ್ಧಿಸಿದೆ. ತಮ್ಮ ಎರಡನೇ ಕಥಾ ಸಂಕಲನದಲ್ಲಿಯೇ ಉತ್ತಮ ಕಥೆಗಾರನಾಗುವ ಭರವಸೆ ಮೂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಕೊಳ್ಳೇಗಾಲದ ದಿಲೀಪ್‌ ಎನ್ಕೆ ಅವರ ತಿತ್ತಿಬ್ವಾಸನ ಟೈಟಾನ್‌ ವಾಚು ಕುತೂಹಲ ಕೆರಳಿಸುವ ಕಥಾ ಸಂಕಲನ.ಕೊಳ್ಳೇಗಾಲದ ವಾಸವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರ ಎರಡನೇ ಕಥಾ ಸಂಕಲನ ಇದು. ಈ ಹಿಂದೆ ಅವರ ಬಲಿಷ್ಠ- ಕಥಾ ಸಂಕಲನ, ಋತುಮಾನಕಷ್ಟೇ ಪ್ರೀತಿ, ಚೆಗ್ಗಿ- ಮಾರಿಕುಣಿತ ಸೊಲ್ಲು- ಕವನ ಸಂಕಲನ ಪ್ರಕಟವಾಗಿವೆ. ಪ್ರೊ.ಸಿ.ಡಿ. ಪರಶುರಾಮ ಅವರ ಮಾರ್ಗದರ್ಶನದಲ್ಲಿ ''''''''''''''''''''''''''''''''ಕನ್ನಡ ದಲಿತ ಕಥಾ ಸಾಹಿತ್ಯಃ ಅಕ್ಷರಸ್ಥ ದಲಿತರ ತಲ್ಲಣಗಳು ಕುರಿತು ಸಂಶೋಧನೆ ನಡೆಸಿ, ಮಹಾಪ್ರಬಂಧ ರಚಿಸಿ, ಮೈಸೂರು ವಿವಿಯಿಂದ ಪಿಎಚ್‌.ಡಿ ಪಡೆದಿದ್ದಾರೆ.ಈ ಸಂಕಲನದಲ್ಲಿ ತಿತ್ತಿಬ್ವಾಸನ ಟೈಟಾನ್‌ ವಾಚು, ಸುಟ್ಟಿರದೇ ಮೂರ್‌ ದ್ವಾಸ, ದೊಡ್ಡಸಂಪಿಗೆಯ ತಿರುವು, ಕಾಕ್ಟೇಲ್‌, ಕುಂಟು ಸೇತುವೆ, ಅಂಬಾಸಿಡರ್‌ ಕಾರು, ಭೈರೂಪ, ಕ್ವಲ್ಲನಂಜಿ ಹಾಗೂ ವಿಕಾರಿ- ಈ ಒಂಭತ್ತು ಕಥೆಗಳಿವೆ. ಕೊಳ್ಳೇಗಾಲದ ಆಡುಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿರುವ ದಿಲೀಪ್‌ ಎನ್ಕೆಯ ಕಥೆಗಳು ಚಿತ್ರ- ವಿಚಿತ್ರ ಆಯಾಮಗಳನ್ನು ಪಡೆದುಕೊಂಡು, ಕುತೂಹಲ ಕೆರಳಿಸಿಕೊಂಡು ಓದಿಸಿಕೊಂಡು ಹೋಗುತ್ತವೆ. ಚಾಮರಾಜನಗರ, ಕೊಳ್ಳೇಗಾಲ ಕಡೆಯವರು ಎಂದರೇ ಅವರ ಸಾಹಿತ್ಯದಲ್ಲಿ ಮಲೆಯ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಜೊತೆಗೆ ಖಾಸಗಿ ಬಸ್ಸುಗಳು ಅದರಲ್ಲಿ ಉದಯರಂಗ ಬಸ್ಸಿನ ಪ್ರಸ್ತಾಪ ಬರಲೇಬೇಕು. ಏಕೆಂದರೆ ಆ ಭಾಗದಲ್ಲಿ ''''ಉದಯರಂಗ'''' ಬಸ್ಸು ಅಷ್ಟೊಂದು ಫೇಮಸ್‌!.ದಿಲೀಪ್‌ ಎನ್ಕೆ ಕೂಡ ''''ಉದಯರಂಗ'''' ಬಸ್ಸಿನ ಪ್ರಸ್ತಾಪದೊಂದಿಗೆ ಕಥೆ ಆರಂಭಿಸಿದ್ದಾರೆ!. ಜೊತೆಗೆ ಚಾಮರಾಜನಗರ, ಕೊಳ್ಳೇಗಾಲ ಭಾಗದ ಆಡುಮಾತಿನ ಕನ್ನಡ ಇರಲೇಬೇಕು. ದಿಲೀಪ್‌ ಎನ್ಕೆ ಕೂಡ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.ತಿತ್ತಿಬ್ವಾಸನ ಟೈಟಾನ್‌ ವಾಚು ಗಪದ್ಯ ಅರ್ಥಾತ್‌ ಗದ್ಯಪದ್ಯ ಸೇರಿ ಹೊಸತನದಿಂದ ಕೂಡಿದೆ. ಸುಟ್ಟಿರದೇ ಮೂರ್‌ ದ್ವಾಸ ಕಥೆ ಬಡಕುಟುಂಬದ ಚಿತ್ರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದೊಡ್ಡ ಸಂಪಿಗೆಯ ತಿರುವು ಸ್ವಲ್ಪ ಗೊಂದಲಮಯ ಎನಿಸುತ್ತದೆ. ಕಾಕ್ಟೇಲ್‌- ವೀರೂ ಹಾಗೂ ಆತನ ಅಕ್ಕನ ಮಗಳಾದ ಶೈಲಾಳ ವಿವಾಹ ಕುರಿತದ್ದು. ಕುಂಟು ಸೇತುವೆ- ಬಡವರ ಮನೆ ಹುಡುಗ ಕಪ್ರೂ ಹಾಗೂ ಶ್ರೀಮಂತರ ಮನೆಯ ಹುಡುಗಿಯ ಪ್ರೇಮಕಥೆ. ಅಂಬಾಸಿಡರ್‌ ಕಾರು- ಕಥೆಯಲ್ಲಿನ ಸನ್ನಿವೇಶಗಳನ್ನು ಗಮನಿಸಿದಾಗ ಪ್ರಸ್ತುತ ಈ ರೀತಿಯ ಪರಿಸ್ಥಿತಿ ಇಲ್ಲ. ಅಪಘಾತ ಮಾಡಿದವರು ''''''''''''''''''''''''''''''''ಎಸ್ಕೇಪ್‌'''''''''''''''''''''''''''''''' ಆಗುತ್ತಾರೆ. ಸ್ಥಳದಲ್ಲಿರುವವರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಇಂತಹವರಿಗೆ ಕಣ್ಣು ತೆರೆಸುವಂತಿದೆ. ಭೈರೂಪ- ಲೋಕದ ಕಣ್ಣಿಗೆ ಅಸಹಜ ಕ್ರಿಯೆ ಸಂಬಂಧದಂತೆ ಕಾಣುತ್ತದೆ. ವಿಕಾರಿ- ಯಥಾಸ್ಥಿತಿ ಒಪ್ಪಿಕೊಳ್ಳುವ ಕಥೆ, ಕ್ವಲ್ಲನಂಜಿ- ಕಥೆಯು ಈ ಭಾಗದಲ್ಲಿ ನಡೆಯುವ ತಿಥಿ, ಪ್ರಸ್ತ ಮೊದಲಾದ ಆಚರಣೆಗಳ ಚಿತ್ರಣ ನೀಡುತ್ತದೆ. ದಿಲೀಪ್‌ ಎನ್ಕೆಗೆ ದಟ್ಟವಾದ ಪ್ರಾದೇಶಿಕ ನಂಟು, ನುಡಿಯ ಗಾಢ ಪರಿಚಯದೊಂದಿಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಥೆ ಕಟ್ಟುವ ಕಲೆ ಸಿದ್ಧಿಸಿದೆ. ತಮ್ಮ ಎರಡನೇ ಕಥಾ ಸಂಕಲನದಲ್ಲಿಯೇ ಉತ್ತಮ ಕಥೆಗಾರನಾಗುವ ಭರವಸೆ ಮೂಡಿಸಿದ್ದಾರೆ. ಈ ಕಥಾ ಸಂಕಲನವನ್ನು ಮೈಸೂರಿನ ಈಶ್ವರಿ ಪ್ರಕಾಶನ ಪ್ರಕಟಿಸಿದೆ. ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅವರ ಮುಂದಲ್‌ ಮಾತು, ಚಿಂತಕ ಬಂಜಗೆರೆ ಜಯಪ್ರಕಾಶ್‌ ಅವರ ಹಿಂದಲ್‌ ಮಾತು ಜೊತೆಗೆ ಸಾಹಿತಿ ಹನೂರು ಚನ್ನಪ್ಪ. ಪೊಲೀಸ್‌ ಅಧಿಕಾರಿ ಸಿದ್ದರಾಜು ಅವರ ಅನಿಸಿಕೆಗಳು ಕೂಡ ಇದೆ. ಆಸಕ್ತರು ದಿಲೀಪ್‌ ಎನ್ಕೆ, ಮೊ. 89043 43886 ಸಂಪರ್ಕಿಸಬಹುದು.