ಕೊರಚ ಸಮುದಾಯದ ಕುಟುಂಬಗಳಿಗೆ ತ್ವರಿತವಾಗಿ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಿ

KannadaprabhaNewsNetwork |  
Published : Jan 11, 2026, 01:15 AM IST
55 | Kannada Prabha

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ಹಕ್ಕು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಟೌನ್ ನಲ್ಲಿರುವ ಶಿವಪಾರ್ವತಿ ನಗರದಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ನೆಲೆಸಿರುವ 40ಕ್ಕೂ ಹೆಚ್ಚು ಪ. ಜಾತಿ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳಿಗೆ ತ್ವರಿತವಾಗಿ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ. ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಪ. ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಟಾರ್ಪಲ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ. 26ರೊಳಗೆ ಹಕ್ಕು ಪತ್ರ ವಿತರಣೆಯಾಗಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು. ಅಧಿಕಾರಿಗಳು ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ಹಕ್ಕು ನೀಡಲಾಗಿದೆ. ಆದರೆ, ಹಕ್ಕುಗಳನ್ನು ಪಡೆದುಕೊಳ್ಳಲು ಸಂವಿಧಾನದ ಅರಿವು ಮುಖ್ಯವಾಗಿದ್ದು, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದು ಅವರು ತಿಳಿಸಿದರು.

ಕುಲಕಸುಬು ಜೊತೆಗೆ ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಪ. ಜಾತಿ ಮತ್ತು ಪಂಗಡಗಳ ಅಲೆಮಾರಿ ಸಮುದಾಯದ ಮಕ್ಕಳಿಗೆ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 10 ರಷ್ಟು ಮೀಸಲಾತಿ ನೀಡಲಾಗಿದೆ. ಯಾವುದೇ ಪ್ರವೇಶ ಪರೀಕ್ಷೆ ಬರೆಯದಿದ್ದರೂ ಶಾಲೆಗೆ ಸೇರಿಸಬಹುದಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮುಂದಿನ ಬಾರಿ ಶಿವಪಾರ್ವತಿ ನಗರಕ್ಕೆ ಬರುವಾಗ ಹಕ್ಕು ಪತ್ರ ವಿತರಣೆಯಾಗಿ, ದೊಡ್ಡ ಕಾರ್ಯಕ್ರಮವೇ ಆಯೋಜನೆಯಾಗಬೇಕು. ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಧ್ವನಿ ಇಲ್ಲದ, ಅವಕಾಶ ವಂಚಿತ ಕೊರಮ-ಕೊರಚ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಶಿವ ಪಾರ್ವತಿ ನಗರದ ನಿವಾಸಿಗಳಿಗೆ ಶಾಶ್ವತ ನೆಲೆ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ವಿಶೇಷ ಕಾಳಜಿಯ ತೋರಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನಿಡುವ ಭರವಸೆ ನೀಡಿದ್ದಾರೆ.

ಟಾರ್ಪಲ್ ಹಂಚಿಕೆ ಮುಖ್ಯವಲ್ಲ. ಶಾಶ್ವತ ನೆಲೆ ಸಿಕ್ಕಿ, ಹಕ್ಕು ಪತ್ರಗಳನ್ನು ನೀಡುವಂತಾಗಬೇಕು. ಗುಡಿಸಲು ಮುಕ್ತವಾಗಿ ಬದುಕು ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಟಿ. ನರಸೀಪುರ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಆದಷ್ಟು ಬೇಗ ಯಾವುದೇ ವಿಳಂಬವನ್ನು ಮಾಡದೆ ಹಕ್ಕು ಪತ್ರವನ್ನು ನಿಡುವ ಕೆಲಸ ಮಾಡಬೇಕು ಸೂಚಿಸಿದರು.

ಜ.26 ರರೊಳಗೆ ಹಕ್ಕು ಪತ್ರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಶಿವಕುಮಾರ್, ಮೈಸೂರು ಜಿಲ್ಲಾ ಕೊರಮ-ಕೊರಚ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷ ಸಿ. ರಾಜು, ದಸಂಸ ತಾಲೂಕು ಸಂಚಾಲಕ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿನೂತನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ