ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲ ಮಾಡುವುದು ಆಳುವವರ ಜವಾಬ್ದಾರಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಖಾಸಗಿ ಶಾಲಾ, ಕಾಲೇಜುಗಳ ಅತಿಯಾದ ಡೊನೇಷನ್, ಶುಲ್ಕ ನಿಯಂತ್ರಿಸಲು ಸರಕಾರ ಶುಲ್ಕ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ. ಕೆ. ಸುಂದರೇಗೌಡ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುತೇಕ ಶಾಲಾ ಕಾಲೇಜುಗಳನ್ನು ನಡೆಸುವವರು ರಾಜಕೀಯ ಹಿನ್ನೆಲೆ ಯುಳ್ಳವರಾಗಿದ್ದು, ಅವರಿಗೆ ಈ ಶುಲ್ಕ ನಿಯಂತ್ರಣ ಪ್ರಾಧಿಕಾರದ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ. ಖಾಸಗಿ ಶಾಲಾ ಕಾಲೇಜುಗಳು ಪ್ರತಿ ವರ್ಷ ಅವರ ಬ್ಯಾಲೆನ್ಸ್ ಶೀಟ್‌ನ್ನು ತಯಾರು ಮಾಡಿ ಖರ್ಚು ವೆಚ್ಚದ ಮಾಹಿತಿಯನ್ನು ಸರಕಾರಕ್ಕೆ ನೀಡುವಂತಾಗಬೇಕು. ಅದು ನಮ್ಮ ಪಕ್ಷದ ಬಹುಮುಖ್ಯ ಬೇಡಿಕೆಯಾಗಿದೆ ಎಂದು ಒತ್ತಾಯಿಸಿದರು.ದೆಹಲಿಯಲ್ಲಿ ಆಮ್‌ಆದ್ಮಿ ಸರಕಾರ ಬಂದ ನಂತರ ಶಾಲಾ ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡುವಂತೆ ಕಾನೂನು ತಂದಿದೆ. ಹೆಚ್ಚಿನ ಡೊನೇಷನ್ ಅಥವಾ ಶುಲ್ಕ ಅಲ್ಲಿ ಪಡೆಯುವಂತಿಲ್ಲ. ಪಡೆದರೆ ಅಪರಾಧವಾಗುತ್ತದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ ಆ ಮೂಲಕ ಶಿಕ್ಷಣ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನುಕೂಲ ಮಾಡುವುದು ನಮ್ಮನ್ನಾಳುವವರ ಜವಾಬ್ದಾರಿ ಎಂದು ಹೇಳಿದರು.ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಮಾಡಿದ ಶಿಕ್ಷಣ ಅಭಿವೃದ್ಧಿ ಮಾದರಿಯಾಗಿಟ್ಟುಕೊಂಡು ರಾಜ್ಯ ಸರಕಾರ ಕಾನೂನು ಮಾಡುವ ಅಗತ್ಯತೆ ಇದೆ. ಬಡತನ ನಿವಾರಣೆ, ಭ್ರಷ್ಟಾಚಾರ ನಿವಾರಣೆಗೆ ಖಾಸಗಿ ಶಾಲೆಗಳು ಕೂಡ ಸಂಪೂರ್ಣ ಸಹಕಾರ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳ ನೈತಿಕ ಮಟ್ಟ ಹೆಚ್ಚಿಸಿ ಅವರನ್ನು ಕೌಶಲ್ಯಭರಿತ, ಪ್ರಾಮಾಣಿಕವಾಗಿ ದೇಶಕಟ್ಟುವ ಶಿಲ್ಪಿಗಳನ್ನಾಗಿ ತಯಾರು ಮಾಡಬೇಕು ಎಂಬುದು ಎಎಪಿಯ ಧ್ಯೇಯ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್, ಮುಖಂಡರಾದ ಎಂ.ಪಿ ಈರೇಗೌಡ, ಪ್ರಕಾಶ್ ಇದ್ದರು.ಪೋಟೋ ಫೈಲ್ ನೇಮ್ 14 ಕೆಸಿಕೆಎಂ 6