ಕಾಲಜ್ಞಾನಕ್ಕೆ ಶಾಸ್ತ್ರಜ್ಞಾನ ಆಧಾರ: ರಾಘವೇಶ್ವರ ಶ್ರೀ

KannadaprabhaNewsNetwork |  
Published : Aug 04, 2024, 01:19 AM IST
 ಆರ್ಶೀಚನ ನೀಡುತ್ತಿರುವುದು  | Kannada Prabha

ಸಾರಾಂಶ

ಯಾವುದೇ ಗ್ರಹಗಳ ದೋಷ ಇದ್ದರೆ ಆಯಾ ಗ್ರಹಗಳ ಧಾನ್ಯಗಳನ್ನು ದಾನ ಮಾಡುವುದರಿಂದ ತೊಂದರೆ ಪರಿಹಾರವಾಗುತ್ತದೆ. ಗ್ರಹಣ ಸಮಯದಲ್ಲಿ ಧಾನ್ಯಗಳನ್ನು ದಾನ ನೀಡುವುದು ಈ ಕಾರಣಕ್ಕೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಗೋಕರ್ಣ: ಕಾಲದ ಬಗೆಗೆ ಜ್ಞಾನ ಹೊಂದಲು ಶಾಸ್ತ್ರಜ್ಞಾನ ಬೇಕು. ಕಾಲಕರ್ಮಗಳನ್ನು ಅರ್ಥ ಮಾಡಿಕೊಳ್ಳುವ ಪರಿಭಾಷೆಯೇ ಜೌತಿಷ. ಈ ಮೂಲಕ ಕಾಲ ನೀಡುವ ಸೂಚನೆಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ ವ್ರತಾಚರಣೆಯಲ್ಲಿ ತೊಡಗಿರುವ ಶ್ರೀಗಳು ''''''''ಕಾಲ'''''''' ಪ್ರವಚನ ಸರಣಿಯಲ್ಲಿ ವಿಶ್ವ, ಸಮಾಜ, ದೇಹ, ಬಟ್ಟೆ, ಊಟ ಎಲ್ಲದರಲ್ಲೂ ಗ್ರಹಗಳ ಪರಿಣಾಮವಿದೆ ಎಂದರು.

ವಿದ್ಯೆಗೆ ಬುಧ- ಗುರು ಗ್ರಹಗಳು ಕಾರಕ. ನಮ್ಮ ಬುದ್ಧಿ ಬೆಳೆಯಬೇಕಾದರೆ ಅದಕ್ಕೂ ಗ್ರಹಗಳು ಕಾರಣವಾಗುತ್ತವೆ. ಉದಾಹರಣೆಗೆ ಗೋದಿಗೆ ರವಿ, ಅಕ್ಕಿಗೆ ಚಂದ್ರಕಾರಕ. ತೊಗರಿ ಮತ್ತು ಹೆಸರಿಗೆ ಕುಜ ಹಾಗೂ ಬುಧ ಕಾರಣ. ಕಡಲೆ ಹಾಗೂ ಅವರೆಗೆ ಗುರು ಶುಕ್ರ ಗ್ರಹಗಳು ಕಾರಣ. ಶನಿಗೆ ಎಳ್ಳು, ರಾಹು ಮತ್ತು ಕೇತುಗಳು ಉದ್ದು ಮತ್ತು ಹುರುಳಿಗೆ ಕಾರಕರು. ಹೀಗೆ ನಾವು ಬಳಕೆ ಮಾಡುವ ಆಹಾರದ ಮೇಲೂ ಗ್ರಹಗಳು ಪರಿಣಾಮ ಬೀರುತ್ತವೆ ಎಂದು ವಿವರಿಸಿದರು.

ಯಾವುದೇ ಗ್ರಹಗಳ ದೋಷ ಇದ್ದರೆ ಆಯಾ ಗ್ರಹಗಳ ಧಾನ್ಯಗಳನ್ನು ದಾನ ಮಾಡುವುದರಿಂದ ತೊಂದರೆ ಪರಿಹಾರವಾಗುತ್ತದೆ. ಗ್ರಹಣ ಸಮಯದಲ್ಲಿ ಧಾನ್ಯಗಳನ್ನು ದಾನ ನೀಡುವುದು ಈ ಕಾರಣಕ್ಕೆ ಎಂದರು.

ಅಸತ್ಯ, ಭಂಗಕ್ಕೆ ಕುಜ ಕಾರಣನಾದರೆ, ಶನಿ ಪ್ರಭಾವದಿಂದ ಮೋಸ, ವಂಚನೆ ನಡೆಯುತ್ತದೆ. ಇದು ದುಃಖಕಾರಕ. ಅಂತೆಯೇ ರವಿ ರಾಜ್ಯಕಾರಕ. ಕರುಣೆಗೆ ಗುರುಕಾರಕ. ವಿವಾಹಕ್ಕೆ ಶುಕ್ರ ಕಾರಣ. ಶುಕ್ರನ ಕಾರಣದಿಂದ ಉಂಟಾಗುವ ಕಾಮ ಧರ್ಮದ ಚೌಕಟ್ಟಿನಲ್ಲಿ ಬರುವಂಥದ್ದು. ಕುಜನಿಂದ ಬರುವ ಕಾಮ ಧರ್ಮಸಮ್ಮತವಲ್ಲದ್ದು. ಸಂಪತ್ತು, ವಾಹನ, ವಸ್ತ್ರ, ಆಭರಣ, ನಿಧಿ, ಸಂಗೀತ, ನೃತ್ಯ, ಗೀತೆ, ನೃತ್ಯ, ವಾದ್ಯ ಎಲ್ಲಕ್ಕೂ ಶುಕ್ರ ಕಾರಣ ಎಂದು ವಿಶ್ಲೇಷಿಸಿದರು. ಮರಣ, ಭಯಕ್ಕೆ ಶನಿ ಕಾರಣನಾದರೆ ಮುಕ್ತಿಗೆ ಗುರು ಕಾರಣ ಎಂದು ವಿಶ್ಲೇಷಿಸಿದರು.

ಗುರು ನೀಡುವ ವೈರ ಅಧರ್ಮದ ವಿರುದ್ಧ; ಆದರೆ ಕುಜನ ವೈರ ಧರ್ಮದ ವಿರುದ್ಧ ಇರುತ್ತದೆ. ಶನಿ ದೋಷಗ್ರಸ್ತನಾಗಿದ್ದರೆ, ಚಿಕ್ಕವರಿಂದ ಸೇವಕರಿಂದ ಹೀಯಾಳಿಸಿಕೊಳ್ಳುವ ಪ್ರಮೇಯ ಬರುತ್ತದೆ. ಅಮಲಿಗೆ ಶುಕ್ರ, ಹಾಸ್ಯಕ್ಕೆ ಬುಧ ಕಾರಣ. ಇಂದ್ರಿಯ ಜಯ, ಮುಕ್ತಿಗೆ ಗುರು, ವ್ಯಾಪಾರಕ್ಕೆ ಶುಕ್ರ ಅಧಿಪತಿ. ಕಾರಾಗೃಹ, ಅಪವಾದ, ಶನಿಯಿಂದ ಬಂದರೆ, ಕೀರ್ತಿ ನೀಡುವವನು, ವೃದ್ಧಿ-ಕ್ಷಯಕ್ಕೆ ಕೂಡಾ ಕಾರಣನಾದವನು ಚಂದ್ರ ಎಂದು ವಿವರಿಸಿದರು.

ಜ್ಞಾನ, ಸದ್ಗುಣ, ಆತ್ಮಜ, ಸಚಿವ, ಆಚಾರ, ಮಹಾತ್ಮತೆ, ಶ್ರುತಿ-ಜ್ಞಾನ, ಸ್ಮೃತಿ, ಮತಿ, ಸರ್ವೋನ್ನತಿ, ಸದ್ಗತಿ, ದೇವಬ್ರಾಹ್ಮಣ ಭಕ್ತಿ, ತಪಃಶ್ರದ್ಧೆ, ಸಮೃದ್ಧಿಗೆ ಗುರುಪ್ರೇರಣೆ, ವಿದ್ವತ್ತು, ಇಂದ್ರಿಯಗಳ ಮೇಲೆ ಹತೋಟಿ, ಧನಸುಖ, ಸನ್ಮಾನ, ಗುರುಭಾವ ಎಲ್ಲವೂ ಬರುವುದು ಗುರುವಿನಿಂದ ಎಂದು ವಿವರಿಸಿದರು.

ಅನಾವರಣ: ತಾಯಿಯ ವಿಸ್ತಾರ, ಆಳವನ್ನು ಅಳೆಯಲು ಹೇಗೆ ಸಾಧ್ಯವಿಲ್ಲವೋ, ಅಂತೆಯೇ ಶ್ರೀಮಠದ ಆಳ ವಿಸ್ತಾರವನ್ನೂ ಅಳೆಯಲು ಸಾಧ್ಯವಿಲ್ಲ. ಜೀವನದಲ್ಲಿ ಹೆತ್ತತಾಯಿ, ಭೂತಾಯಿ ಮತ್ತು ಗೋಮಾತೆಗೆ ಇರುವ ಸ್ಥಾನ ಬೇರಾರಿಗೂ ಇಲ್ಲ. ಆ ತ್ರಿಕೋನದ ಮಧ್ಯೆ ನಾವೆಲ್ಲರೂ ಸುರಕ್ಷಿತ ಎಂದು ಬಣ್ಣಿಸಿದರು.

ಮಾತೆ ಮತ್ತು ಗೋಮಾತೆಯನ್ನು ಉಪೇಕ್ಷೆ ಮಾಡುವ ಕಾಲದಲ್ಲಿ, ಭೂಮಿತಾಯಿಗೂ ವಿಷ ಉಳಿಸುವ ಕಾರ್ಯ ನಡೆಯುತ್ತಿದೆ. ಈ ಮೂರನ್ನೂ ಕಾಪಾಡಿಕೊಂಡು ಬಂದಲ್ಲಿ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದರು.

ರಾಯದತ್ತ ರಾಮಚಂದ್ರಾಪುರ ಸರ್ವಮಾನ್ಯ ಅಗ್ರಹಾರ ಕುರಿತು ವಿಜಯನಗರ ಸಾಮ್ರಾಜ್ಯದ ಶಾಸನ ಮತ್ತು ಮಹತ್ವದ ದಾಖಲೆಗಳನ್ನು ಮಾತೃಶ್ರೀ ವಿಜಯಲಕ್ಷ್ಮಿ ಅವರು ನೆರವೇರಿಸಿದರು.

ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ವಾಹಿನಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ಪ್ರಧಾನ ಕೇಶವ ಪ್ರಕಾಶ್ ಮುಣ್ಚಿಕಾನ, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಶ್ರೀಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ, ಮಹಾಮಂಡಲ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ್ ಚಟ್ನಳ್ಳಿ, ಕಾರ್ಯದರ್ಶಿ ಚಂದನ್ ಶಾಸ್ತ್ರಿ, ಉಪಾಧ್ಯಕ್ಷ ಸತೀಶ್ ಹೆಗಡೆ ಆಲ್ಮನೆ, ಕೋಶಾಧ್ಯಕ್ಷ ರಾಮಮೂರ್ತಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ ಮತ್ತಿತರರು ಉಪಸ್ಥಿತರಿದ್ದರು. ಗಣಪತಿ ಹೆಗಡೆ ಗುಂಜಗೋಡು ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!