ಕಾಸರಗೋಡಲ್ಲಿ ಮಲಯಾಳೀಕರಣ ವಿರೋಧಿಸಿ ಮುಂದಿನ ತಿಂಗಳು ರಾ.ಹೆ. ಬಂದ್‌: ವಾಟಾಳ್‌ ನಾಗರಾಜ್‌

KannadaprabhaNewsNetwork |  
Published : Nov 25, 2025, 03:00 AM IST
32 | Kannada Prabha

ಸಾರಾಂಶ

ಗಡಿನಾಡಿನಲ್ಲಿ ಮಲಯಾಳೀಕರಣ ವಿರೋಧಿಸಿ ಡಿಸೆಂಬರ್‌ 3ನೇ ವಾರದಲ್ಲಿ ಮಂಗಳೂರು- ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಸತ್ಯಾಗ್ರಹ ನಡೆಸುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಪ್ರಕಟಿಸಿದ್ದಾರೆ.

ಮಂಗಳೂರು: ಕಾಸರಗೋಡಿನಲ್ಲಿ ಮಲಯಾಳೀಕರಣದ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದ್ದು, ಅದರ ವಿರುದ್ಧ ಡಿಸೆಂಬರ್‌ 3ನೇ ವಾರದಲ್ಲಿ ಮಂಗಳೂರು- ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಸತ್ಯಾಗ್ರಹ ನಡೆಸುವುದಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್‌ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ನಡೆಯಲಿದೆ. ಅಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಂಡ ಬಳಿಕ 3ನೇ ವಾರದಲ್ಲಿ ಮಂಗಳೂರಿನಲ್ಲಿ ರಾ.ಹೆದ್ದಾರಿ ಬಂದ್‌ ನಡೆಸುವ ಮೂಲಕ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಹೇಳಿದರು.

ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‌ ಅಥವಾ ಸಂಸತ್ತಿನಲ್ಲಿ ಯಾರೂ ಮಾತನಾಡುತ್ತಿಲ್ಲ. ಕಾಸರಗೋಡನ್ನು ಮಲಯಾಳೀಕರಣಗೊಳಿಸುವ ಮೂಲಕ ಕನ್ನಡ ಸಂಸ್ಕೃತಿ ನಾಶ ಆಗುತ್ತಿದೆ. ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಲಯಾಳಿ ಅಧ್ಯಾಪಕರನ್ನು ನೇಮಕ ಮಾಡಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಾಟಾಳ್‌ ನಾಗರಾಜ್‌ ಒತ್ತಾಯಿಸಿದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾರ್ಯದರ್ಶಿ ಕುಶಲ ಕುಮಾರ ಕೆ., ಕರ್ನಾಟ ಸಮಿತಿ ಕಾಸರಗೋಡು ಅಧ್ಯಕ್ಷ ಕೆ.ಎಂ. ಬಳ್ಳಕ್ಕುರಾಯ, ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ. ಗುರುಪ್ರಸಾದ್‌ ಕೋಟೆಕಣಿ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್‌ ಕೂಡ್ಲು, ಕನ್ನಡ ಜಾಗೃತಿ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಕಾಸರಗೋಡು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್‌ ಎ. ಇದ್ದರು.

ಸಿದ್ದು ಸಿಎಂ ಸ್ಥಾನದಿಂದ ತೆಗೆದರೆ ಕ್ರಾಂತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗ ಯಾಕೆ ಬದಲಿಸಬೇಕು ಎಂಬುದಕ್ಕೆ ಉತ್ತರ ಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರಿಗೆ ತಕ್ಕುದಾದ ವ್ಯಕ್ತಿ ಕಾಂಗ್ರೆಸ್‌ನಲ್ಲಾಗಲಿ, ಬಿಜೆಪಿ, ಜೆಡಿಎಸ್‌ನಲ್ಲಿ ಇಲ್ಲ. ಹಾಗಾಗಿ ಅವರ ಸ್ಥಾನಕ್ಕೆ ರಾಜಕೀಯವಾಗಿ ಬೇರೆ ಯಾರನ್ನೇ ತಂದರೂ ದೊಡ್ಡ ಕ್ರಾಂತಿ ಆಗಲಿದೆ. ಸಾವಿರಾರು ಜನ ಜೈಲಿಗೆ ಹೋಗಲು ಸಿದ್ಧ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?